ಜನರ ಸಮಸ್ಯೆ ಪರಿಹರಿಸಿ: ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ರಾಯಚೂರು ಆ.1
ಜಿಲ್ಲೆಯಲ್ಲಿ ಪ್ರವಾಹ ಪೀಡಿತರ ರಕ್ಷಣೆ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಸಂದರ್ಭದಲ್ಲಿ ಸಮರ್ಪಕ ಬಿತ್ತನೆ ಬೀಜ ಮತ್ತು ರಸಗೊಬ್ಬರ ಒದಗಿಸಬೇಕು. ನಕಲಿ ಬೀಜಿ ಮತ್ತು ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅಧಿಕಾರಿಗಳಿಗೆ ಆದೇಶಿಸಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು ವರ್ಗಾವಣೆ ಪಡೆದು ಜಿಲ್ಲೆಯಿಂದ ಹೊರನಡೆಯಲು ಅವರು ತಾಕೀತು ಮಾಡಿದರು.
ದಾಳಿ: ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನಿದೆ. ಕೃತಕ ಅಭಾವದ ದೂರಿನ ಹಿನ್ನೆಲೆ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿರುವುದಾಗಿ ತಿಳಿಸಿದರು.
ತಾಲೂಕಿನ ಜಂಬಲದಿನ್ನಿ ಗ್ರಾಮದಲ್ಲಿ ಕಳಪೆ ಗುಣಮಟ್ಟದ ಬೀಜಗಳು ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿದ್ದು, ಅಂಥ ಬೀಜ ಮಾರಾಟ ಮಾಡಿದ ವ್ಯಾಪಾರಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ. ರಸಗೊಬ್ಬರದ 461 ಮಾದರಿಗಳನ್ನು ಪರೀಕ್ಷೆಗೆ ಕಳಿಸಿದ್ದು, ಅದರಲ್ಲಿ 23 ಮಾದರಿ ಕಳಪೆ ಎಂಬುದು ಪತ್ತೆಯಾಗಿದೆ. 17 ಜನಕ್ಕೆ ನೋಟೀಸ್ ನೀಡಲಾಗಿದೆ ಎಂದು ಸಭೆಗೆ ವಿವರಿಸಿದರು.
ಅಸಮಾಧಾನ: ನೀರಾವರಿ ಇಲಾಖೆ ಮೇಲಿನ ಚರ್ಚೆ ವೇಳೆ ಸಚಿವ ಪಾಟೀಲ್ ಸಭೆಯಲ್ಲಿ ಮಾತನಾಡಿ, ಗಣೇಕಲ್ ಜಲಾಶಯದ ಭರ್ತಿಗೆ ನಿರ್ಲಕ್ಷ್ಯ ತೋರಿದ ನೀರಾವರಿ ಅಧಿಕಾರಿಗಳ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ, ನೀರಾವರಿ ಇಲಾಖೆ ಅಧಿಕಾರಿಗಳು ಸಮನ್ವಯತೆ ಕೊರತೆಯಿಂದಾಗಿ ಕಾಲುವೆಯ ಕಡೆಯ ಭಾಗದ ರೈತರು ನೀರಿಲ್ಲದೇ ಪರದಾಡುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಅಧಿಕಾರಿಗಳು ಜಿಲ್ಲೆಯ ಆರ್ಸೆನಿಕ್ಯುಕ್ತ ಕುಡಿಯುವ ನೀರಿನ ಸಮಸ್ಯಾತ್ಮಕ 44 ಗ್ರಾಮಗಳ ಪೈಕಿ 35 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಮಲ್ಟಿ ವಿಲೇಜ್ ಸ್ಕೀಂ ಅಡಿ ಶಾಶ್ವತ ನೀರಿನ ಯೋಜನೆ ರೂಪಿಸಿ ನೀರು ಸರಬರಾಜು ವ್ಯವಸ್ಥೆ ಮಾಡಲು ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳು ತೀರಾ ಹದಗೆಟ್ಟಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಬೇಕು. ಮಳೆಗಾಲದ ಮೊದಲು ರಸ್ತೆ ದುರಸ್ತಿಗೆ ರು. 3 ಕೋಟಿ ಅನುದಾನ ಒದಗಿಸಲಾಗಿದ್ದು, ಅದರಿಂದ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.
ಪಡಿತರ ಚೀಟಿ: ಆಹಾರ ಇಲಾಖೆಗೆ ಸಂಬಂಧಿಸಿ ಜಿಲ್ಲೆಯಲ್ಲಿ 74ಸಾವಿರ ಪಡಿತರ ಚೀಟಿಗಳು ರದ್ದಾಗಿವೆ. ಮರು ನೋಂದಣಿಗೆ ಕಾಲಾವಕಾಶ ಕಲ್ಪಿಸಲಾಗಿದೆ. ಬಯೋವುಟ್ರಿಕ್ ಪರಿಶೀಲನೆಗಾಗಿ ಸಿಬ್ಬಂದಿ ಕೊರತೆಯಿದ್ದು, ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ಹಾಗೂ ಕಂದಾಯ ನಿರೀಕ್ಷರ ಸೇವೆಯನ್ನು ಪಡೆಯಲಾಗುತ್ತಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ ಗುರುರಾಜ ರಾವ್ ತಿಳಿಸಿದರು.
ಜಿಲ್ಲೆಯಲ್ಲಿ ಮರಳಿನ ಅಕ್ರಮ ಸಾಗಣೆ ಅವ್ಯಾಹತವಾಗಿ ಸಾಗಿದೆ. 44 ಬ್ಲಾಕ್ಗಳ ಪೈಕಿ 35 ಬ್ಲಾಕ್ಗಳಿಗೆ ಟೆಂಡರ್ ಕರೆದಿದ್ದು, ಕೇವಲ 17 ಜನ ಟೆಂಡರ್ಗೆ ಆಗಮಿಸಿದ್ದಾರೆಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ತಿಳಿಸಿದರು.
ಸರ್ಕಾರಿ ಕಟ್ಟಡ, ಸಾರ್ವಜನಿಕರ ಮನೆ ನಿರ್ಮಾಣಕ್ಕೆ ಹೊರತುಪಡಿಸಿ ಇನ್ನುಳಿದಂತೆ ಅಕ್ರಮವಾಗಿ ಮರಳು ಸಾಗಣೆಯಾಗದಂತೆ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶಿಸಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷ ಕೆ ಶರಣಪ್ಪ, ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಜಿಪಂ ಸಿಇಒ ಡಾ.ಮುದ್ದುಮೋಹನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಳ್ಳಿ, ಅಪರ ಜಿಲ್ಲಾಧಿಕಾರಿ ಎಂ. ತಿಮ್ಮಪ್ಪ ಸೇರಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

