ಯುವ ಸಾಹಿತಿ ಆರೀಫ್ ರಾಜಾಗೆ ಸನ್ಮಾನ
ಮಸ್ಕಿ: ಪಟ್ಟಣದ ವಿದ್ಯಾ ನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ ಆರೀಫ್ ರಾಜಾ ಅವರಿಗೆ ಇತ್ತೀಚೆಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸಿ ಆರೀಫ್ ರಾಜಾ, ಸಾಹಿತಿ ಗುಂಡೂರಾವ್ ಸಮಾರಂಭದಲ್ಲಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಪ್ರಾಚಾರ್ಯ ಪ್ರಭುದೇವ ಸಾಲಿಮಠ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಬಿ. ಗುಂಡಯ್ಯ ಶೆಟ್ಟಿ, ಉಪನ್ಯಾಸಕ ಹನುಮಂತ ನಾಯಕ, ಶಿಕ್ಷಕ ನಾಗೇಶ, ಸಂಸ್ಥೆಯ ಕಾರ್ಯದರ್ಶಿ ನಾಗರಾಜ ಶೆಟ್ಟಿ ಮತ್ತಿತರರಿದ್ದರು.
ಭ್ರಷ್ಟಾಚಾರ ದೇಶದ್ರೋಹ ಕೆಲಸ: ಹುಸೇನ್ಬಾಷ
ಸಿಂಧನೂರು: ದೇಶದಲ್ಲಿ ಯಾವುದೇ ಸಮಾಜದ ನಾಯಕರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡರೆ ಅವರು ದೇಶದ್ರೋಹಿಗಳಾಗುತ್ತಾರೆ. ಭ್ರಷ್ಟಾಚಾರದಲ್ಲಿ ತೊಡಗುವುದು ದೇಶ ದ್ರೋಹದ ಕೆಲಸ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುಖಂಡ ಹುಸೇನ್ ಬಾಷ ಹೇಳಿದರು. ನಗರದ ಅಮನ್ ಕಾಲೇಜಿನಲ್ಲಿ ಜಮಾತೆಯಿಂದ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಉಪವಾಸದಲ್ಲಿರುವವರು ಸುಳ್ಳು, ವಂಚನೆ, ಮೋಸದ ಕೃತ್ಯಗಳನ್ನು ಮಾಡಿದರೆ ಅವರನ್ನು ದೇವರು ಕ್ಷಮಿಸುವುದಿಲ್ಲ. ಅಂತವರು ಉಪವಾಸದಿಂದ ದೂರವಿದ್ದು, ರಂಜಾನಿನ ಪಾವಿತ್ರ್ಯತೆಯನ್ನು ಕಾಪಾಡಬೇಕೆಂದು ಮನವಿ ಮಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಸುಭಾಷ ಫ್ರಾಂಕ್ಲಿನ್, ಗಂಗಾಮತಸ್ಥ ಸಮಾಜದ ರಾಜ್ಯ ಉಪಾಧ್ಯಕ್ಷ ನಾಗರಾಜ ವಕೀಲ, ನ.ಯೋ.ಪ್ರಾ. ಮಾಜಿ ಅಧ್ಯಕ್ಷ ಈರೇಶ ಇಲ್ಲೂರು, ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್. ಕಂಬಳಿ ಸೇರಿದಂತೆ ಜಮಾತೆ ಮುಖಂಡರು ಭಾಗವಹಿಸಿದ್ದರು.
ಪಿಡಿಒ ವರ್ಗಾವಣೆ ರದ್ದತಿಗೆ ವಿರೋಧ
ಮಸ್ಕಿ: ಇಲ್ಲಿಗೆ ಸಮೀಪದ ಅಂಕುಶದೊಡ್ಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವರ್ಗಾವಣೆ ರದ್ದುಪಡಿಸಬಾರದೆಂದು ಒತ್ತಾಯಿಸಿ ಗ್ರಾಮದ ಕೆಲ ಮುಖಂಡರು ಇತ್ತೀಚೆಗೆ ಶಾಸಕ ಪ್ರತಾಪಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಚಂದ್ರಶೇಖರಪ್ಪ ವಂದಲಿ ಹಾಗೂ ಇನ್ನಿತರರು ಮನವಿ ಸಲ್ಲಿಸಿ, ಗ್ರಾಪಂ ಪಿಡಿಒ ಅವರು ಜನತೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಸರ್ಕಾರದ ವಿವಿಧ ಯೋಜನೆಗಳ ಜಾರಿಗೆ ಅನುದಾನ ಒದಗಿಸಲು ಗ್ರಾಪಂ ಪಿಡಿಒ ಲಂಚ ಪಡೆಯುತ್ತಾರೆಂದು ಆರೋಪಿಸಿದ್ದಾರೆ. ಪಿಡಿಒ ವರ್ಗಾವಣೆ ರದ್ದುಗೊಳಿಸಿದರೆ, ಅಂಕುಶದೊಡ್ಡಿ ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಗ್ರಾಪಂ ವ್ಯಾಪ್ತಿಯ 6 ಹಳ್ಳಿಗಳ ಜನತೆ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆಂದು ಎಚ್ಚರಿಸಿದರು.
ಅಂಕುಶದೊಡ್ಡಿಯ ಶೇಖರಪ್ಪ ವಂದಲಿ, ವಿರುಪಣ್ಣ ಹಸರಡ್ಡಿ ಶೇಖರಗೌಡ ಕಾಟಗಲ್, ಶರಣೇಗೌಡ ಕಾಟಗಲ್, ದೇವಣ್ಣ ಹಳ್ಳಿ ಕಾಟಗಲ್, ಅಯ್ಯಣ್ಣ ಹೂವಿಭಾವಿ, ಮಹಾಂತೇಶ ಸಾನಬಾಳ, ದೊಡ್ಡಬಸನಗೌಡ ಸಾನಬಾಳ, ಬಸವರಾಜ ಈಳಿಗೇರ್ ಬುದ್ದಿನ್ನಿ, ಶರಣಪ್ಪಗೌಡ ಬುದ್ದಿನ್ನಿ ಸೇರಿ ಅನೇಕರಿದ್ದರು.
ರದ್ದಾದ 53 ಬಸವ ವಸತಿ ಮನೆಗಳ ಪರಿಶೀಲನೆ
ಮುದಗಲ್: ಸಮೀಪದ ನಾಗರಹಾಳ ಗ್ರಾಮದಲ್ಲಿನ ರದ್ದುಪಡಿಸಿದ 53ಮನೆಗಳಿಗೆ ತಾಲೂಕು ನೋಡಲ್ ಅಧಿಕಾರಿ ಶಂಕರ ನಾಯ್ಕ ಭೇಟಿ ನೀಡಿ ಮನೆಗಳ ಸ್ಥಿತಿಗತಿ ಪರಿಶೀಲಿಸಿದರು. ನಾಗರಹಾಳ ಗ್ರಾ.ಪಂ.ಗೆ 2010- 11ನೇ ಸಾಲಿನ ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ನಿಗದಿತ ಅವಧಿಯಲ್ಲಿ ನಿರ್ಮಿಸದ ಕಾರಣ ಬೆಂಗಳೂರಿನ ರಾಜೀವಗಾಂಧಿ ವಸತಿ ನಿಗಮ 53 ಮನೆಗಳನ್ನು ರದ್ದುಪಡಿಸಿ(ಬ್ಲಾಕ್) ಆದೇಶ ಹೊರಡಿಸಿತ್ತು. ಎರಡು ವರ್ಷಗಳ ಬಳಿಕ ವಸತಿ ನಿಗಮ ಪುನಃ 53 ಮನೆಗಳನ್ನು ಮಂಜೂರು ಮಾಡಿದ್ದರಿಂದ ತಾಲೂಕು ನೋಡಲ್ ಅಧಿಕಾರಿ ಶಂಕರ ನಾಯ್ಕ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಫಲಾನುಭವಿಗಳು 90 ದಿನದಲ್ಲಿ ಮನೆಗಳನ್ನು ಪೂರ್ಣಗೊಳಿಸಬೇಕೆಂದು ತಾಕಿತು ಮಾಡಿದರು. ಮನೆಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸುವ ಮೂಲಕ ಫಲಾನುಭವಿಗಳಿಗೆ ಮೊದಲನೇ ಕಂತಿನ ಅನುದಾನ ಬಿಡುಗಡೆಗೆ ಶಿಫಾರಸು ಮಾಡಿದರು. ಪಿಡಿಒ ಸೋಮನಗೌಡ, ಕರ ವಸೂಲಿಗಾರ ಯಮನೂರ, ಸಂಗಪ್ಪ ಬೆಳ್ಳಿಕಟ್ ಇದ್ದರು.
ಸುರಪುರ ಬಸ್ ಘಟಕಕ್ಕೆ ಶಾಸಕರ ಭೇಟಿ
ಸುರಪುರ: ಸಮೀಪದ ಹಸನಾಪುರದ ಬಳಿಯಿರುವ ಸುರಪುರ ಬಸ್ ಘಟಕಕ್ಕೆ ಶಾಸಕ ರಾಜಾ ವೆಂಕಟಪ್ಪನಾಯಕ ಭೇಟಿ ನೀಡಿ ಸಾರಿಗೆ ವ್ಯವಸ್ಥೆ ಪರಿಶೀಲಿಸಿ ಘಟಕದ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದರು. ಗ್ರಾಮೀಣ ಸಾರಿಗೆ ವ್ಯವಸ್ಥೆ ಸರಿಪಡಿಸಿಕೊಳ್ಳಬೇಕು ಮತ್ತು ಇದುವರೆಗೂ ಬಸ್ ಸೌಕರ್ಯವಿಲ್ಲದ ಗ್ರಾಮಗಳಿಗೆ ತಕ್ಷಣ ಬಸ್ ಸೇವೆ ಆರಂಭಿಸಬೇಕೆಂದು ಶಾಸಕರು ಘಟಕದ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. ಘಟಕ ವ್ಯವಸ್ಥಾಪಕ ಸಿದ್ದಪ್ಪ ಮಾತನಾಡಿ, ಬಸ್ ಘಟಕದ ಒಳಾಂಗಣ ಪೂರ್ಮಿಯಾಗಿ ಸಿಸಿ ರಸ್ತೆ ಮಾಡಿಸಬೇಕು. ಸುರಪುರ ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕಿ ಖಾಸಗಿ ವಾಹನಗಳಿಗೆ ಪರ್ಯಾಯ ಮಾರ್ಗವನ್ನು ಮಾಡಿಸಿ ಸರ್ಕಾರಿ ಬಸ್ಗಳಿಗೆ ಮಾತ್ರ ನಿಲ್ದಾಣ ಸೀಮಿತಗೊಳಿಸುವ ವ್ಯವಸ್ಥೆ ಮಾಡಬೇಕೆಂದು ಶಾಸಕರಿಗೆ ವಿನಂತಿಸಿಕೊಂಡರು. ಸುರಪುರದಿಂದ ಹುಣಸಗಿ, ಕೆಂಭಾವಿ, ಕನ್ನೆಳ್ಳಿ, ನಾರಾಯಪುರಕ್ಕೆ ತಲಾ ಪ್ರತಿದಿನ 2 ಬಸ್ ಒದಗಿಸಬೇಕು. ಸುರಪುರದಿಂದ ರತ್ನಗಿರಿ, ತಿರುಪತಿ, ಶಾಂತವಾಡಿ, ಶ್ರೀಶೈಲ್ ನೂತನ ಮಾರ್ಗ ಆರಂಭಿಸಬೇಕು. ಕುಂಬಾರಪೇಟೆ, ಎಪಿಎಂಸಿ ಗಂಜ್ ಮಾರ್ಗವಾಗಿ ಸಿಟಿ ಬಸ್ ಮಂಜೂರು ಮಾಡಿಸುವಂತೆ ಕೋರಿದರು.
ಎಡದಂಡೆ: ಕಡೇ ರೈತರಿಗೆ
ನೀರೊದಗಿಸಲು ಒತ್ತಾಯ
ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ 104ನೇ ಮೈಲ್ನಲ್ಲಿ ನಿಗದಿಯಂತೆ 6 ಅಡಿ ನೀರಿನ ಮಟ್ಟ ಕಾಯ್ದುಕೊಳ್ಳಲು ಸೂಚಿಸುವಂತೆ ತುಂಗಭದ್ರಾ ಎಡದಂಡೆ 104ನೇ ಮೈಲ್ ಕೆಳಭಾಗದ ರೈತರ ಸಂಘ ಒತ್ತಾಯಿಸಿದೆ.
ಈ ಕುರಿತು ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಗಣೇಕಲ್ ಜಲಾಶಯದಲ್ಲಿ ಮೊದಲಿಗೆ 30 ಅಡಿ ನೀರು ಭರ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ ಅಧಿಕಾರಿಗಳು ಕೇವಲ 19 ಅಡಿ ನೀರು ಭರ್ತಿ ಮಾಡಿದ್ದಾರೆಂದು ದೂರಿದರು.
ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರು ಹರಿಸಿ 22 ದಿನಗಳು ಕಳೆದರೂ ಇದುವರೆಗೆ ಕಾಲುವೆಯ ಕಡೆಯ ಭಾಗದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ನದಿಗೆ 1 ಲಕ್ಷ ಕ್ಯುಸೆಕ್ಗೂ ಹೆಚ್ಚಿನ ನೀರು ಹರಿಸುತ್ತಿದ್ದರೂ ಕಾಲುವೆಯ ಕಡೆಯ ಭಾಗದ ರೈತರಿಗೆ ನೀರಾವರಿ ಅಧಿಕಾರಿಗಳು ನೀರು ತಲುಪಿಸಲು ವಿಫಲರಾಗಿದ್ದಾರೆಂದು ದೂರಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾಲುವೆಯ ಕಡೆಯ ಭಾಗದ ರೈತರಿಗೆ ಸಮರ್ಪಕ ನೀರೊದಗಿಸುವಂತೆ ಸೂಚಿಸಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಎಂ,ಗಂಗರಾಜ್, ರಾಂಬಾಬು, ರಾಮರಾವು ಸೇರಿ ಅನೇಕರಿದ್ದರು.
ಸಿದ್ದೇಶ ವಿರಕ್ತಮಠಗೆ ಅತ್ಯುತ್ತಮ ಸೇವಾ ಪ್ರಶಸ್ತಿ
ರಾಯಚೂರು: ಕರ್ನಾಟಕ ಆ್ಯಂಟಿಬಯೋಟಿಕ್ಸ್ ಆ್ಯಂಡ್ ಫಾರ್ಮಾಸೂಟಿಕಲ್ಸ್ ಲಿಮಿಟೆಡ್ ಸಂಸ್ಥೆಯು ಜಿಲ್ಲಾ ಹಿರಿಯ ಔಷಧ ಮಾರಾಟ ಪ್ರತಿನಿಧಿ ಸಿದ್ದೇಶ ವಿರಕ್ತಮಠ ಅವರಿಗೆ 2012-13ನೇ ಸಾಲಿನ ಅತ್ಯುತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಬಗ್ಗೆ ಪ್ರಕಟಣೆ ನೀಡಿರುವ ಸಂಸ್ಥೆಯು ಆ.12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ತಿಳಿಸಿದೆ.
ಬಸ್ ಡಿಕ್ಕಿ: ಒಬ್ಬ ಸಾವು
ಸಿಂಧನೂರು: ತಾಲೂಕಿನ ಮುಚ್ಚಳ ಕ್ಯಾಂಪ್ ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಜರುಗಿದೆ. ಕಳೆದ ಮೂರು ತಿಂಗಳ ಹಿಂದೆ ವಿವಾಹವಾಗಿದ್ದ ನಾಗರಾಜ ಅಲಿಯಾಸ್ ನಾಗಪ್ಪ(26) ಶನಿವಾರ ತನ್ನ ಹೆಂಡತಿಯನ್ನು ತವರು ಮನೆ ಸುಲ್ತಾನಪುರಕ್ಕೆ ಬಿಟ್ಟು ಬೈಕ್ ಮೇಲೆ ಮರಳಿ ಬರುವಾಗ ಕೊಪ್ಪಳದಿಂದ ರಾಯಚೂರಿಗೆ ಹೊರಟಿದ್ದ ಬಸ್ ಚಾಲಕ ಜಗದೀಶನ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ನಾಗರಾಜ ದೇವಿಕ್ಯಾಂಪಿನ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಲಿಂಗಪ್ಪ ತಿಳಿಸಿದ್ದಾರೆ.
ಅಪಘಾತ: ಮಹಿಳೆ ಸಾವು
ರಾಯಚೂರು: ಶಕ್ತಿನಗರದಲ್ಲಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದು ಬೈಕ್ನ ಹಿಂಬದಿ ಸವಾರ ಮಹಿಳೆ ಸಾವಿಗೀಡಾಗಿದ್ದಾಳೆ. ಮೃತಳನ್ನು ಖಾಜಾಬೀ ಎಂದು ಗುರುತಿಸಲಾಗಿದೆ. ಈಕೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಆಕೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಚಿನ್ನದ ಸರ ಕಳವು
ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರ ದೋಚಲಾಗಿದೆ. ಪಟ್ಟಣದ ಮಂಗತಾಯರ್ ಮನೆ ಮುಂದೆ ಕುಳಿತಿದ್ದ ವೇಳೆ ಆಗಮಿಸಿದ ಯುವಕ ಆಕೆಯ ಕೊರಳಲ್ಲಿದ್ದ 1 ಲಕ್ಷ ಬೆಲೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆಂದು ಪೊಲೀಸರಿಗೆ ದೂರಲಾಗಿದೆ. ಈ ಬಗ್ಗೆ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಯೋಗ ಸ್ಪರ್ಧೆಗೆ ಆಯ್ಕೆ
ರಾಯಚೂರು: ರಾಜ್ಯದ ಅಂತಾರಾಷ್ಟ್ರೀಯ ಯೋಗ ತರಬೇತಿ ಸಂಸ್ಥೆಯಿಂದ ಆ.10 ಮತ್ತು 11ರಂದು ಬೆಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ಭಾರತ ಮುಕ್ತದ ಯೋಗಾ ಚಾಂಪಿಯನ್ಶಿಪ್ ಸ್ಪರ್ಧೆಗೆ ಇಲ್ಲಿನ ನಾಲ್ವರು ಆಯ್ಕೆಯಾಗಿದ್ದಾರೆ. ಬಿಎನ್ಡಬ್ಲ್ಯೂ ಪತಂಜಲಿ ಯೋಗ ಪ್ರತಿಷ್ಠಾನದ ವಿದ್ಯಾರ್ಥಿಗಳಾದ ಉಷಾ, ಅಕ್ಷತಾ, ಸಿದ್ದನಗೌಡ ಮತ್ತು ಸೃಷ್ಟಿ ಅವರುಗಳು ಈ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳಲಿದ್ದಾರೆಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಟ್ಯಾಗೋರ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಗೆ ಚಾಲನೆ
ರಾಯಚೂರು: ನಗರದ ಟಾಗೋರ ಸ್ಮಾರಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಸರ್ಕಾರದ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಹಾಲು ವಿತರಣೆ ಸಮಾರಂಭ ಆಯೋಜಿಸಲಾಗಿತ್ತು. ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಅವರು ಉದ್ಘಾಟಿಸಿ, ಸರ್ಕಾರವು ಆರಂಭಿಸಿರುವ ಕ್ಷೀರಭಾಗ್ಯ ಯೋಜನೆಯ ಸದುಪಯೋಗ ಪಡೆದು ಆರೋಗ್ಯ ಸುಧಾರಣೆಗೆ ಮುಂದಾಗುವಂತೆ ಮನವಿ ಮಾಡಿದರು.
ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆರ್.ಕೆ. ಅಮರೇಶ್, ಹಾಗೂ ಪ್ರೌಢಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಸುಭಾಷ್ ಪಾಟೀಲ್ ಪಾಲ್ಗೊಂಡಿದ್ದರು. ಪ್ರೌಢಶಾಲೆ ಮುಖ್ಯಗುರು ತಿಮ್ಮಾರೆಡ್ಡಿ ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.
ವಿಜ್ಞಾನ ಬರಹಗಾರರಿಗೆ ವಿಶೇಷ ತರಬೇತಿ
ರಾಯಚೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಹಾಗೂ ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ವಿಜ್ಞಾನ ಬರಹಗಾರರಿಗೆ, ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ, ಸೆಪ್ಟೆಂಬರ್ನಲ್ಲಿ ಮೂರು ದಿನಗಳ ವಿಶೇಷ ತರಬೇತಿ ಆಯೋಜಿಸಲಾಗಿದೆ ಎಂದು ವಿಜ್ಞಾನ ಕೇಂದ್ರ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸೈನ್ಸ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಪ್ರೊ. ಸಿ.ಡಿ.ಪಾಟೀಲ್, ಮೂರು ದಿನಗಳ ತರಬೇತಿಯನ್ನು ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಛಿಸುವವರು ಒಂದು ಸಾವಿರ ಪದಗಳ ಒಂದು ಹಾಗೂ 300 ಪದಗಳ ಮತ್ತೊಂದು ವಿಜ್ಞಾನ ಲೇಖನವನ್ನು ಆ. 25ರೊಳಗೆ ಮೊಬೈಲ್ ಸಂಖ್ಯೆ ಹಾಗೂ ಪೂರ್ಣ ವಿಳಾಸದೊಂದಿಗೆ ಕಳುಹಿಸಬೇಕೆಂದು ತಿಳಿಸಿದ್ದಾರೆ.
ಕನ್ನಡದಲ್ಲಿ ವಿಜ್ಞಾನ ಮಾಹಿತಿ ಪ್ರಚಾರ: ತಿರಸ್ಕೃತಗೊಂಡ ಲೇಖನಗಳನ್ನು ಮರಳಿಸುವುದಿಲ್ಲ. ಈಗಾಗಲೇ ಪ್ರಕಟಿತ ಲೇಖನ ಪರಿಗಣಿಸುವುದಿಲ್ಲ. ಕಾರ್ಯಾಗಾರದಲ್ಲಿ ವಿಜ್ಞಾನ- ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ನಾನಾ ಮಾಧ್ಯಮಗಳ ಮೂಲಕ ಪ್ರಚುರಗೊಳಿಸುವ ಬಗ್ಗೆ ತಿಳಿಸಿಕೊಡಲಾಗುತ್ತದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ವಿಜ್ಞಾನದ ಮಾಹಿತಿಗಳನ್ನು ಇನ್ನಷ್ಟು ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾಗಿ ಕನ್ನಡದಲ್ಲಿ ಪ್ರಸ್ತುತಪಡಿಸುವ ಕೌಶಲ್ಯವನ್ನು ವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
25-30 ಬರೆಹಗಾರರಿಗೆ ಅವಕಾಶ: ವಿಜ್ಞಾನ ಮತ್ತು ತಂತ್ರಜ್ಞಾನದ ಇತ್ತೀಚಿನ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದರ ಜೊತೆಗೆ ವಿಜ್ಞಾನ ಬರೆವಣಿಗೆ ಹಾಗೂ ಸಂವಹನದ ಗುಣಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಮಾಹಿತಿಯನ್ನು ನೀಡಲಾಗುವುದು. 25- 30 ಬರಹಗಾರರಿಗೆ ಮಾತ್ರ ಅವಕಾಶವಿದೆ. ಈ ಕಾರ್ಯಾಗಾರದಲ್ಲಿ ವಿಜ್ಞಾನಾಸಕ್ತರು, ಕೃಷಿಕರು, ಕೃಷಿ ತಜ್ಞರು, ವೈದ್ಯರು, ಎಂಜಿನಿಯರರು, ವಿದ್ಯಾರ್ಥಿಗಳು, ಸುದ್ದಿಮಾಧ್ಯಮದವರು ಭಾಗವಹಿಸಬಹುದು.
ಪ್ರಯಾಣ ಭತ್ಯೆ: ಪ್ರಖ್ಯಾತ ಬರಹಗಾರರು ತರಬೇತಿ ನೀಡಲಿದ್ದು, ಲೇಖನಗಳನ್ನು ಕಳಿಸದವರು ಭಾಗವಹಿಸುವಂತಿಲ್ಲ. ಕಾರ್ಯಾಗಾರದಲ್ಲಿ ಭಾಗಿಯಾದ ಶಿಬಿರಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಊಟ- ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಲೇಖನಗಳನ್ನು ಪ್ರೊ. ಸಿ.ಡಿ. ಪಾಟೀಲ್, ಸದಸ್ಯ ಕಾರ್ಯದರ್ಶಿ, ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿಜ್ಞಾನ ಬೆಟ್ಟ, ರಾಷ್ಟ್ರಕವಿ ಕುವೆಂಪುವನ, ಮಂತ್ರಾಲಯಂ ರಸ್ತೆ, ರಾಯಚೂರು ಇಲ್ಲಿಗೆ ಕಳಿಸಲು ತಿಳಿಸಿದ್ದಾರೆ.
ಉಪಚುನಾವಣೆ ಶಾಂತಿಯುತ
ಕೆಂಭಾವಿ: ಇಲ್ಲಿಯ ಗ್ರಾಮ ಪಂಚಾಯಿತಿ 2ನೇ ವಾರ್ಡ್ ಸದಸ್ಯರಾಗಿದ್ದ ಶಿವಶಂಕರ ಅವರ ನಿಧನದಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಭಾನುವಾರ ನಡೆದ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

