ರಾಯಚೂರು

ಕೈಗಾರಿಕೆ ಪ್ರದೇಶ, ನಿವೇಶನ ಹಂಚಿಕೆ ಅಕ್ರಮ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ ,  ರಾಯಚೂರು ,  ಆ.7
ಮಾನವಿ ಪಟ್ಟಣದ ಕೈಗಾರಿಕೆ ಪ್ರದೇಶದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರವಾಗಿದ್ದು, ಕೂಡಲೇ ನಿವೇಶನ ಹಂಚಿಕೆ ರದ್ದುಪಡಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಧರಣಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬುಧವಾರ ಧರಣಿ ನಡೆಸಿದ ಕಾರ್ಯಕರ್ತರು, ಮಾನವಿಯ ಕೈಗಾರಿಕೆ ಪ್ರದೇಶವು 60 ಎಕರೆ ವ್ಯಾಪ್ತಿ ಹೊಂದಿದ್ದು, ಇದರಲ್ಲಿ 50.5 ಎಕರೆ ದೊಡ್ಡ ಕೈಗಾರಿಕೆಗಳಿಗೆ ಹಾಗೂ 9.5 ಎಕರೆ ಆಟೋ ನಗರದ 150 ನಿವೇಶನಗಳಿಗೆ ಮೀಸಲಿಡಲಾಗಿದೆ.
ಹಂಚಿಕೆ ವೇಳೆ ಅಕ್ರಮ: 2009ರ ಸೆ.29 ರಂದು ನಡೆದ ಏಕಗವಾಕ್ಷಿ ಸಭೆಯಲ್ಲಿ ಆಟೋ ನಗರದಲ್ಲಿರುವ 53 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನುಳಿದ ನಿವೇಶನಗಳಿಗೆ ಅರ್ಜಿ ಸಲ್ಲಿಸಿದವರಿಗೆ 2012ರ ಜು.18 ಮತ್ತು ಅ.20 ರಂದು ನಡೆದ ಏಕಗವಾಕ್ಷಿ ಸಭೆಗಳಲ್ಲಿ ನಿವೇಶನ ಹಂಚಿಕೆ ಮಾಡುವ ವೇಳೆ ಅಕ್ರಮ ಎಸಗಲಾಗಿದೆ ಎಂದು ದೂರಿದರು.
ಒಂದು ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚಿನ ನಿವೇಶನಗಳನ್ನು ಮಂಜೂರು ಮಾಡುವ ಕಾರ್ಯ ಸಭೆಯಲ್ಲಿ ಮಾಡಲಾಗಿದೆ. ಈ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.22.65 ರಷ್ಟು ಮೀಸಲಾತಿ ನೀಡಿ ಮಂಜೂರು ಮಾಡಬೇಕಿದ್ದು, ಈ ನಿಯಮವನ್ನೂ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಟೀಕಿಸಿದರು.
ಒಂದೇ ಕುಟುಂಬಕ್ಕೆ ಹೆಚ್ಚು: 2012ರ ಅ.20 ರಂದು ನಡೆದ ಸಭೆಗೂ ಮುನ್ನವೇ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮೂಲಕ ಎಚ್ಚರಿಸಿದ್ದರೂ, ಜಿಲ್ಲಾಧಿಕಾರಿ ನಿರ್ಲಕ್ಷ್ಯ ತೋರಿದ್ದರಿಂದ ಒಂದೇ ಕುಟುಂಬಕ್ಕೆ ಒಂದಕ್ಕಿಂತ ಹೆಚ್ಚಿನ ನಿವೇಶನ ಮಂಜೂರು ಮಾಡಲಾಗಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೂಡಲೇ 2012ರಲ್ಲಿ ನಡೆದ ಏಕಗವಾಕ್ಷಿ ಸಭೆಯ ನಿರ್ಣಯಗಳನ್ನು ರದ್ದುಗೊಳಿಸಿ ಕೆಐಎಡಿಬಿಗೆ ಕಳಿಸಿದ ಮಂಜೂರಾತಿ ಪಟ್ಟಿ ವಾಪಸು ಪಡೆಯಬೇಕು. ಪುನಾ ಅರ್ಜಿ ಕರೆದು ಅರ್ಹರಿಗೆ ನಿವೇಶನ ಮಂಜೂರು ಮಾಡಬೇಕು. ಮೀಸಲಾತಿ ನಿಯಮಗಳ ಪಾಲನೆಗೆ ಗಮನಹರಿಸಬೇಕೆಂದು ಒತ್ತಾಯಿಸಿದರು.
ಕ್ರಮ ಕೈಗೊಳ್ಳಿ: ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿದ ಹಾಗೂ ಅದಕ್ಕೆ ಕಾರಣರಾಗಿರುವ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಬೇಕು. 2009ರಲ್ಲಿ ನಡೆದ ಏಕಗವಾಕ್ಷಿ ಸಭೆಯ ನಿರ್ಧಾರದಂತೆ ಆಟೋ ನಗರದಲ್ಲಿ ಮಂಜೂರು ಮಾಡಿದ 53 ನಿವೇಶನಗಳ ಅಳತೆ ಮಾರ್ಪಾಟು ಮಾಡಿರುವುದಕ್ಕೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವುಕುಮಾರ್ ಯಾದವ್, ಗುರುರಾಜ ನಾಗಲಾಪೂರು, ಗುರುಸ್ವಾಮಿ ಕಂಬಳತ್ತಿ, ರವಿಕುಮಾರ್, ಸುದರ್ಶನ ವಕೀಲರು, ಉರುಕುಂದಾ, ರಾಕೇಶ್, ವೆಂಕಟೇಶ್, ಲೋಹಿತ್ ಕುಮಾರ್, ಅನ್ವರ್ ಪಾಷಾ, ಫಯಾಜುದ್ದೀನ್, ಜಾಫರ್ ಷರೀಫ್ ಸೇರಿ ಅನೇಕರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.