ಗುಟ್ಕಾ ಹೋಯ್ತು ಕ್ಯಾನ್ಸರ್ ಬಂತು!
ಕ.ಪ್ರ.ವಾರ್ತೆ, ಮುದಗಲ್, ಅ.22
ಗುಟ್ಕಾ ಚಟದಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುತ್ತಿರುವ ಸಂಗತಿ ತಿಳಿದು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿ ಸರ್ಕಾರ ಗುಟ್ಕಾ ನಿಷೇಧ ಮಾಡಿತು. ಆದರೆ, ಅಡಿಕೆ ಮತ್ತು ತಂಬಾಕು ಬೆಳೆಗಾರರನ್ನು ರಕ್ಷಿಸಲು ಪಾನ್ ಮಸಾಲ, ತಂಬಾಕು ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಗುಟ್ಕಾ ಕಂಪನಿಗಳು ಗುಟ್ಕಾ ಪ್ರಿಯರಿಗೆ ಚಟ ತೀರಿಸಿಕೊಳ್ಳಲು ಪಾನ ಮಸಾಲ ಜೊತೆಗೆ ತಂಬಾಕು ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರಿಂದ ಗುಟ್ಕಾ ಸೇವಿಸುವವರು ಚಟದಿಂದ ಮುಕ್ತಿ ಕಾಣಲು ಸಾಧ್ಯವಾಗಿಲ್ಲ.
ವಿಮಲ್, ಸ್ಟಾರ್, ಗೋವಾ, ಆರ್ಎಂಡಿ ಮುಂತಾದ ಗುಟ್ಕಾ ಕಂಪನಿಗಳು ಪಾನ್ ಮಸಾಲ ಜೊತೆ ತಂಬಾಕು ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ಒಂದು ಪಾನ ಮಸಾಲಾ ಚೀಟಿ ಜೊತೆ ಒಂದು ತಂಬಾಕು ಚೀಟಿಯನ್ನು ಪಡೆದು ಎರಡನ್ನು ಮಿಶ್ರಣ ಮಾಡಿ ಸೇವಿಸಿದರೆ ಗುಟ್ಕಾ ತಿಂದಂತಾಗುತ್ತದೆ ಎಂದು ಗುಟ್ಕಾ ಸೇವಿಸುವವರು ಹೇಳುತ್ತಾರೆ. ಗುಟ್ಕಾ ನಿಷೇಧದಿಂದ ಕಂಗಾಲಾಗಿದ್ದ ಗುಟ್ಕಾ ಪ್ರಿಯರಿಗೆ ಕಂಪನಿಗಳು ವಾಮ ಮಾರ್ಗದಿಂದ ಸಹಕಾರ ನೀಡುತ್ತಿವೆ.
ತಂಬಾಕು ಸೇವನೆ ಮಾಡುವುದರಿಂದಲೂ ಕ್ಯಾನ್ಸರ್ ಬರುತ್ತದೆ ಎನ್ನುವುದು ಈ ಸರ್ಕಾರಕ್ಕೆ ತಿಳಿದಿಲ್ಲವೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪಾನ್ ಮಸಾಲ ಮತ್ತು ತಂಬಾಕು ಎರಡು ಮಿಶ್ರಣ ಮಾಡಿದರೆ ಗುಟ್ಕಾದಂತಾಗುತ್ತದೆ. ಅದರಲ್ಲಿ ನಿಕೋಟಿನ್ ಪದಾರ್ಥ ಮಾತ್ರ ಇರುವುದಿಲ್ಲ ಅಷ್ಟೇ. ಬೇರೆ ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಮಾಡಿದ್ದು ಈ ರೀತಿ ಕಂಪನಿಗಳಿಗೆ ವಾಮಮಾರ್ಗದಿಂದ ಪಾನ್ ಮಸಾಲ ಮತ್ತು ತಂಬಾಕು ಚೀಟಿಗಳನ್ನು ಮಾರಾಟ ಮಾಡಲು ಅವಕಾಶ ನೀಡಿರುವುದಿಲ್ಲ.
ರಾಜ್ಯದಲ್ಲಿ ಗುಟ್ಕಾ ಕಂಪನಿಗಳಿಗೆ ಪಾನ್ ಮಸಾಲಾ ಮತ್ತು ತಂಬಾಕು ಚೀಟಿಗಳನ್ನು ತಯಾರಿಸಲು ಅನುಮತಿ ನೀಡಿದ್ದರಿಂದ ಕಂಪನಿಗಳು 1.50 ಪಾನ್ ಮಸಾಲಾ ಚೀಟಿ ಮತ್ತು ಅದರೊಂದಿಗೆ, ಸೇರಿಸಲು 50 ಪೈಸೆ ತಂಬಾಕು ಚೀಟಿಯನ್ನು ಸೇರಿಸಿ ಮಾರಾಟ ಮಾಡಲಾಗುತ್ತದೆ. ಎರಡು ಸೇರಿಸಿ ಸೇವಿಸಿದರೆ ಗುಟ್ಕಾ ತಿಂದಂತಾಗುತ್ತದೆ ಎನ್ನುತ್ತಾರೆ ಗುಟ್ಕಾ ಪ್ರಿಯರು. ಸರ್ಕಾರ ಗುಟ್ಕಾ ನಿಷೇಧ ಮಾಡಿದ್ದನ್ನು ಸ್ವಾಗತಿಸಿದ ಜನರು ಈ ರೀತಿ ವಾಮ ಮಾರ್ಗದಲ್ಲಿ ಪಾನ ಮಸಾಲ, ತಂಬಾಕು ಚೀಟಿಗಳನ್ನು ತಯಾರಿಸಲು ಅನುಮತಿ ನೀಡಿರುವುದು ಸರಿಯಲ್ಲ ಎನ್ನುತ್ತಿದ್ದಾರೆ.
ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿ ತಯಾರಿಸುವ ಮತ್ತು ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅನೇಕ ಕಂಪನಿಗಳ ಮೇಲೆ, ಅಂಗಡಿಗಳ ಮೇಲೆ ದಾಳಿ ಮಾಡಿ ಗುಟ್ಕಾ ಚೀಟಿಗಳನ್ನು ವಶಪಡಿಸಿಕೊಂಡು ನಾಶ ಮಾಡಿ ಲಕ್ಷಾಂತರ ರು. ದಂಡ ವಸೂಲಿ ಮಾಡಿತು. ಆದರೆ, ಈ ರೀತಿ ವಾಮ ಮಾರ್ಗದಲ್ಲಿ ಗುಟ್ಕಾ ಮಾದರಿಯಲ್ಲೇ ಪಾನ್ ಮಸಾಲ, ತಂಬಾಕು ಚೀಟಿಗಳನ್ನು ತಯಾರಿಸಿ ಮಾರಾಟ ಮಾಡುವ ಕಂಪನಿಗಳ ಮೇಲೆ ಯಾವ ಕ್ರಮ ಜರುಗಿಸಲಾಗುತ್ತದೆ.
ಗುಟ್ಕಾ ಸೇವಿಸಿದರೆ ಕ್ಯಾನ್ಸರ್ ಕಾಯಿಲೆ ಬರುತ್ತದೆ. ತಂಬಾಕು ಸೇವಿಸಿದರೆ ಕ್ಯಾನ್ಸರ್ ಬರುವುದಿಲ್ಲವೆ. ಹೆಸರಿಗೆ ಮಾತ್ರ ಪಾನ್ ಮಸಾಲ. ಅದರಲ್ಲಿ ತಂಬಾಕು ಮಿಶ್ರಣ ಮಾಡಿದರೆ ಯಾವ ಗುಟ್ಕಾಕ್ಕೂ ಕಮ್ಮಿಯಾಗದು ಎನ್ನುತ್ತಾರೆ ಗುಟ್ಕಾ ಪ್ರೇಮಿಗಳು. ರಾಜ್ಯಲ್ಲಿ ಗುಟ್ಕಾ ನಿಷೇಧವಾಗಿದ್ದರೂ ಏನು ಪ್ರಯೋಜನೆಯಾಗಿಲ್ಲ.
-ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

