ಕ್ರೀಡಾಕೂಟ ಯಶಸ್ವಿ
ರಾಯಚೂರು: ನಗರದ ಶ್ರೀಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಜಹೀರಾಬಾದ್ ವಲಯದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು. ಜಹೀರಾಬಾದ್ ವಲಯದ 18 ಪ್ರಾಥಮಿಕ ಶಾಲೆಗಳ ತಂಡಗಳು ಪಾಲ್ಗೊಂಡಿದ್ದ ಕ್ರೀಡಾಕೂಟವನ್ನು ಬಿಇಒ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಶಾರದಾ ವಿದ್ಯಾನಿಕೇತನ ಶಾಲಾಭಿವೃದ್ಧಿ ಮಂಡಳಿ ಸದಸ್ಯ ಬಾಬುಭಂಡಾರಿಗಲ್, ಡಾ. ರಂಗನಾಥ್, ಡಾ. ಆನಂದತೀರ್ಥ ಫಡ್ನೀಸ್, ಡಿ.ಎಚ್.ಜೋಷಿ, ಬಸವರಾಜ ಬೋರೆಡ್ಡಿ ಅನೇಕರು ಪಾಲ್ಗೊಂಡಿದ್ದರು.
ಜಿಪಂ ಯೋಜನೆ: ತರಬೇತಿ
ರಾಯಚೂರು: ಉದ್ಯೋಗ ಖಾತ್ರಿ ಯೋಜನೆ ಅಡಿ ಕೆರೆಗಳ ಜೀರ್ಣೋದ್ಧಾರ, ಊರಿಗೊಂದು ಕಣ, ನಮ್ಮ ಹೊಲ ನಮ್ಮ ದಾರಿ, ವೈಯಕ್ತಿಕ ಕಾಮಗಾರಿಗಳು, ವೈಯಕ್ತಿಕ ಶೌಚಾಲಯಗಳು, ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆ ಬಗ್ಗೆ ತರಬೇತಿ ಶಿಬಿರವನ್ನು ಈಚೆಗೆ ಸ್ಥಳೀಯ ತಾಪಂನಲ್ಲಿ ಆಯೋಜಿಸಲಾಗಿತ್ತು. ಜಿಪಂ ಸಿಇಒ ಡಾ.ಮುದ್ದುಮೋಹನ್, ಜಿಪಂ ಯೋಜನಾ ನಿರ್ದೇಶಕ, ಎಂಜಿನಿಯರ್ ಸೇರಿ ಗ್ರಾಪಂನ ಪಿಡಿಒಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಸಹಾಯವಾಣಿ ನಿರ್ವಹಿಸಲು ಅರ್ಜಿ ಕರೆ
ಯಾದಗಿರಿ: ಜಿಲ್ಲಾಧಿಕಾರಿಗಳ ಕಚೇರಿ, ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಸಹಾಯವಾಣಿ ಕೇಂದ್ರಗಳನ್ನು ನಿರ್ವಹಿಸಲು ಸಾಮಾಜಿಕ ಕಳಕಳಿಯುಳ್ಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.10 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಾಹಿತಿ ತಂತ್ರಜ್ಞಾನ ಸಮಾಲೋಚಕರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ.
ನಾಳೆ ವಿಚಾರ
ಸಂಕಿರಣ
ರಾಯಚೂರು: ಜಿಲ್ಲಾಡಳಿತ, ಜಿಪಂ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಸೆ.2 ರಂದು ಪರಿಶಿಷ್ಟ ಜನಾಂಗದವರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ, ಅಸ್ಪೃಶ್ಯತೆ ನಿರ್ಮೂಲನೆ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನಾಂಗದವರ ಸರ್ವಾಂಗೀಣ ಅಭಿವೃದ್ಧಿಯ ಕುರಿತ ವಿಚಾರ ಸಂಕಿರಣ ಆಯೋಜಿಸಲಾಗಿದೆ. ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಪಂ ಸಿಇಒ ಡಾ. ಮುದ್ದುಮೋಹನ್ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಬಿಸನಳ್ಳಿ, ಸಹಾಯಕ ಆಯುಕ್ತೆ ಎನ್. ಮಂಜುಶ್ರೀ, ನಗರಸಭೆ ಪೌರಾಯುಕ್ತ ಮಂಜುನಾಥ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ಉಪನ್ಯಾಸಕರಾಗಿ ರಾಯಚೂರು ಕೃಷಿ ವಿವಿ ಸಹ ಪ್ರಾಧ್ಯಾಪಕಿ ಡಾ.ಜಾಗೃತಿ ದೇಶಮಾನ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಶ್ರೀಮಂತ ಬಿ. ಹೊಳಲಕರ್ ಪಾಲ್ಗೊಳ್ಳುವರು.
ತಾಪಂ ಉಪಾಧ್ಯಕ್ಷ
ಸ್ಥಾನಕ್ಕೆ ಚುನಾವಣೆ
ಯಾದಗಿರಿ: ಇಲ್ಲಿಯ ತಾಪಂ ಉಪಾಧ್ಯಕ್ಷ ಸ್ಥಾನ ಅವಿಶ್ವಾಸ ನಿರ್ಣಯದಿಂದ ತೆರವಾಗಿದ್ದು, ಆ ಸ್ಥಾನದ ಉಳಿದ ಅವಧಿಗಾಗಿ ಆ. 31ರಂದು ಚುನಾವಣೆ ನಡೆಸಲಾಗುತ್ತಿದೆ ಎಂದ ತಾಪಂ ಇಒ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಯಾದಗಿರಿ: ಜಿಲ್ಲೆಯ 23 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಉಪನ್ಯಾಸಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಸೇವೆ ಸಲ್ಲಿಸಿದವರಿಗೆ ಮತ್ತು ಮೆರಿಟ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಖುದ್ದಾಗಿ ಆಯಾ ಸರ್ಕಾರಿ ಪಪೂ ಕಾಲೇಜುಗಳ ಪ್ರಾಂಶುಪಾಲರಿಗೆ ಸೆ.2ರೊಳಗೆ ಸಲ್ಲಿಸಲು ಕೋರಿದೆ. ಆಯಾ ಕಾಲೇಜಿನ ಪ್ರಾಂಶುಪಾಲರು ಅರ್ಜಿಗಳಲ್ಲಿನ ಮಾಹಿತಿ ವಿಷಯವಾರು ಕ್ರೋಢೀಕರಿಸಿ ಆದ್ಯತೆ ನೀಡಿ ಸೆ. 3ರೊಳಗೆ ಕಚೇರಿಗೆ ಸಲ್ಲಿಸಬೇಕೆಂದು ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

