ರಾಯಚೂರು

ಜಾಗೃತಿಯಿಂದ ಏಡ್ಸ್‌ಗೆ ಕಡಿವಾಣ ಸಾಧ್ಯ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಡಿ.1
ಎಚ್‌ಐವಿ ಮತ್ತು ಏಡ್ಸ್‌ನಂತ ಮಾರಕ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದ್ದು, ಅದರಿಂದ ರೋಗ ಹರಡುವಿಕೆ ತಡೆಗೆ ಪೂರಕ ಪರಿಸರ ನಿರ್ಮಾಣವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ. ಸಿ.ಎನ್. ಕುಲಕರ್ಣಿ ಹೇಳಿದರು.
ನಗರದ ಐಎಂಎ ಹಾಲ್‌ನಲ್ಲಿ ಭಾನುವಾರ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಈ ಹಿಂದೆ ಎಚ್‌ಐವಿ ಮತ್ತು ಏಡ್ಸ್ ರೋಗದ ಬಗ್ಗೆ ಅರಿವಿನ ಕೊರತೆಯಿತ್ತು. ಹಾಗೆಯೇ ಮುಕ್ತ ಚರ್ಚೆಯಾಗುತ್ತಿರಲಿಲ್ಲ. ಆದರೆ ಬದಲಾದ ಕಾಲಘಟ್ಟದಲ್ಲಿ ಎಲ್ಲರಿಗೂ ಮಾರಕ ರೋಗದ ಬಗ್ಗೆ ಮಾಹಿತಿ ದೊರೆತಿದ್ದು, ಇದರಿಂದ ಆರೋಗ್ಯ ಕ್ಷೇತ್ರದ ಸುಧಾರಣೆ ಸಾಧ್ಯವಾಗಿದೆ ಎಂದರು.
ಸೋಂಕಿತರು ಭಯಪಡಬೇಕಿಲ್ಲ: ಎಚ್‌ಐವಿ ಸೋಂಕು ತಗುಲಿದವರೂ ಜನಸಾಮಾನ್ಯರಂತೆ ಬದುಕು ಸಾಗಿಸಬಹುದಾಗಿದೆ. ಸೋಂಕಿತರು ನಿರಂತರ ಚಿಕಿತ್ಸೆ ಪಡೆಯುವ ಮೂಲಕ ಯಾವುದೇ ಸಮಸ್ಯೆಯಿಲ್ಲದೇ ಬದುಕು ಸಾಗಿಸಬಹುದಾಗಿದ್ದು, ಇದು ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಯಷ್ಟೇ ಸಾಮಾನ್ಯವಾಗಿದೆ ಎಂದು ಹೇಳಿದರು.
ರಿಮ್ಸ್ ಬೋಧಕ ಆಸ್ಪತ್ರೆ ಮುಖ್ಯಸ್ಥ ಡಾ. ಶಂಕರ ಮಾತನಾಡಿ, ಏಡ್ಸ್ ರೋಗಕ್ಕೆ ತುತ್ತಾದವರನ್ನು ಸಮಾಜ ಮತ್ತು ಅವರ ಕುಟುಂಬದ ಸದಸ್ಯರು ಕೀಳಾಗಿ ಕಾಣದೇ ಅವರ ಬದಕಿನಲ್ಲಿ ಭರವಸೆ ಮೂಡಿಸಬೇಕು. ಅವರನ್ನು ತಾರತಮ್ಯದಿಂದ ಕಾಣಬಾರದು. ಎಲ್ಲರಂತೆಯೇ ಅವರಿಗೆ ಬದುಕು ಹಕ್ಕಿದೆ ಎಂಬ ಭಾವನೆ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾರಾಯಣಪ್ಪ ವಹಿಸಿದ್ದರು. ಹೊಸ ಬೆಳಕು ಸಂಸ್ಥೆಯ ಸಂಚಾಲಕ ದೇವರಾಜ, ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಘಟನೆಗಳ  ಸದಸ್ಯರು ಇದ್ದರು.
ಜಾಗೃತಿ ಜಾಥಾ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಮೊದಲು ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಚಾಲನೆ ನೀಡಿ, ಏಡ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದಲ್ಲಿರುವ ಎಲ್ಲರೂ ಅಸುರಕ್ಷಿತ ಲೈಂಗಿಕತೆಯಿಂದ ದೂರವಿರಲು ಮನವಿ ಮಾಡಿದರು.
ಸಮಾಜದ ಸ್ವಾಸ್ಥ್ಯಕ್ಕೆ ಕಂಟಕಪ್ರಾಯವಾಗಿರುವ ಏಡ್ಸ್ ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಸಮಾಜದ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಕರೆ ನೀಡಿದರು.
ನಂತರ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳ ಮೂಲಕ ಐಎಂಎ ಹಾಲ್‌ಗೆ ಬಂದು ಸೇರಿತು. ಜಾಗೃತಿ ಜಾಥಾದಲ್ಲಿ ನಗರದ ಪ್ಯಾರಾ ಮೆಡಿಕಲ್ ಕಾಲೇಜು, ವೈದ್ಯಕೀಯ ಕಾಲೇಜು ಸೇರಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ರೆಡ್‌ಕ್ರಾಸ್, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.