ಬತ್ತ ಬೆಳೆಗಾರರ ಬೆನ್ನು'ಹತ್ತಿ'ದ ಚಳಿ
ರಾಯಚೂರು: ಮೈ ಕೊರೆಯುವ ಚಳಿಗೆ ನಾಗರಿಕರು ತತ್ತರ. ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿರುವ ತಾಪಮಾನ. ಬಿಸಿಲ ನಾಡಿನಲ್ಲಿ ಮಂಜು ಕವಿದ ವಾತಾವರಣ. ಚಳಿಗೆ ರೈತರೂ ಕಂಗಾಲು. ಇನ್ನೆಷ್ಟು ದಿನ ಹೀಗೇ ಎಂಬ ಆತಂಕ ಎಲ್ಲರಲ್ಲಿ. ಕಳೆದ ಮೂರು ದಿನಗಳಿಂದ ರಾಯಚೂರಿಗರ ಮೈ ನಡುಗಿಸುತ್ತಿರುವ ಚಳಿಗೆ ಜಿಲ್ಲೆಯ ಜನತೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ.
ಕಳೆದ ಬಹುತೇಕ ವಾರದಿಂದ ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಚಳಿಯ ಕರಾಮತ್ತು. ತಾಪಮಾನ ದಿನದಿಂದ ದಿನಕ್ಕೆ ಕುಸಿತ ಕಂಡಿದ್ದು, ನಾಗರಿಕರನ್ನು ಗಡಗಡ ನಡುಗಿಸಿದರೆ, ರೈತರೂ ಕೈಗೆ ಬಂದ ಬೆಳೆಯ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ.
ಕುಸಿದ ತಾಪಮಾನ: ಜಿಲ್ಲೆಯ ವಿವಿಧೆಡೆ ಕಳೆದ ನವೆಂಬರ್ ಮಧ್ಯ ಭಾಗದಲ್ಲಿ ತಾಪಮಾನ ಅಲ್ಪಕುಸಿತ ಕಂಡಿತ್ತು. 14 ಡಿಗ್ರಿಗೆ ಕುಸಿದಿದ್ದ ತಾಪಮಾನ ಜಿಲ್ಲೆಯ ಜನರಲ್ಲಿ ನಡುಕ ಹುಟ್ಟಿಸಿತ್ತು. ಆದರೆ, ಆನಂತರದಲ್ಲಿ ತಾಪಮಾನ ಚೇತರಿಕೆ ಕಂಡು 17ರಿಂದ 20 ಡಿಗ್ರಿವರೆಗೆ ಬಂದು ನಿಂತಿತ್ತು.
ಆದರೆ, ಕಳೆದ ಮೂರು ದಿನಗಳಿಂದ ಮತ್ತೆ ತಾಪಮಾನದಲ್ಲಿ ತೀವ್ರ ಕುಸಿತವಾಗಿದ್ದು, ಜನತೆ ಆತಂಕದಲ್ಲಿಯೇ ಬದುಕು ಕಳೆಯುವಂತಾಗಿದೆ. ಡಿ.9ರಂದು 11.5 ಡಿಗ್ರಿಯಷ್ಟಿದ್ದ ತಾಪಮಾನವು ಡಿ.10ರಂದು 9.7 ಡಿಗ್ರಿಗಿಳಿದರೆ ಬುಧವಾರ ಬೆಳಗ್ಗೆ 9.4 ಡಿಗ್ರಿಗೆ ಕುಸಿಯಿತು.
ಪರಿಣಾಮ ಮೈಕೊರೆವ ಚಳಿ, ಮಂಜು ಕವಿದ ಪರಿಸರದಿಂದ ವಾಯುವಿಹಾರಕ್ಕೆ ತೆರಳುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಅಷ್ಟೇ ಅಲ್ಲ, ಬೆಳಗಿನ 8 ರವರೆಗೆ ಚಳಿಯ ಅಬ್ಬರ ಮುಂದುವರಿಯಿತು. ದಿನವಿಡೀ ತಣ್ಣನೆಯ ಗಾಳಿ ಜನತೆಗೆ ನಡುಕ ತಂದಿದ್ದು ಸ್ಪಷ್ಟವಾಗಿತ್ತು.
ರೈತರಲ್ಲಿ ಆತಂಕ: ಈ ಮಧ್ಯೆ ಜಿಲ್ಲೆಯಲ್ಲಿ ಸದ್ಯ ತುಂಗಭದ್ರಾ ಎಡದಂಡೆ ಕಾಲುವೆಯ ವ್ಯಾಪ್ತಿಯ ಪ್ರದೇಶದಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಮಾಡಿದ್ದ ಬತ್ತ ಸದ್ಯವೇ ಕಟಾವಿಗೆ ಬಂದಿದೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬತ್ತ ಕಟಾವಿಗೆ ಬಂದಿದ್ದರಿಂದ ಈಗಾಗಲೇ ರೈತರು ಬತ್ತ ಕಟಾವು ಯಂತ್ರಕ್ಕಾಗಿ ಕಾದು ಕುಳಿತುಕೊಳ್ಳುವಂತಾಗಿದೆ. ಇದು ಹೀಗೆಯೇ ಮುಂದುವರಿದಲ್ಲಿ ಬತ್ತದ ಕಾಳು ನುಚ್ಚಾಗಿಸುವ ಸಾಧ್ಯತೆಯಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಬತ್ತಕ್ಕೆ ಮಂಜು ಕವಿಯುವ ವಾತಾವರಣದಿಂದ ಸಮಸ್ಯೆಯಾಗಲಿದೆ. ಐದು ತಿಂಗಳ ಐದು ದಿನಕ್ಕೆ ಬತ್ತದ ಕಟಾವು ನಡೆಯಬೇಕು. ಆದರೆ, ಕಟಾವು ಯಂತ್ರಗಳ ಕೊರತೆಯಿಂದ ಅದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎಂಬಂತಾಗಿದೆ. ಕೂಲಿ ಕಾರ್ಮಿಕರ ಕೊರತೆಯೂ ಕೃಷಿ ಕ್ಷೇತ್ರ ಬಾಧಿಸುತ್ತಿದೆ. ಯಂತ್ರಗಳ ಬಳಕೆ ಅನಿವಾರ್ಯವೂ ಹೌದು. ಹೀಗಾಗಿ ಸದ್ಯ ರೈತರು ಕಟಾವು ಯಂತ್ರಗಳಿಗೆ ಕಾಯುವಂತಾಗಿದೆ.
- ಜಗನ್ನಾಥ ಆರ್. ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

