ರಾಯಚೂರು

ಹಣ ಹರಿದಿದ್ದೇ ಬಂತು, ನೀರು ಬರಲಿಲ್ಲ

Published On :

ಲಿಂಗಸ್ಗೂರು: ಹಲವು ದಶಕಗಳಿಂದ ಪರದಾಡುತ್ತಿರುವ ಗುಡದನಾಳ ಗ್ರಾಮಸ್ಥರ ಕುಡಿವ ನೀರಿನ ಸಮಸ್ಯೆ ನೀಗಿಸಲು ಹಲವು ಕಾಮಗಾರಿ ಕೈಗೊಂಡರೂ ಒಂದಿಲ್ಲೊಂದು ಕಾರಣದಿಂದ ಶಾಶ್ವತ ಪರಿಹಾರ ದೊರೆಯದೇ ಜನರು ಅಕ್ಷರಶಃ ಬಸವಳಿದಿದ್ದಾರೆ.
ತಾಲೂಕಿನ ಗುಡದನಾಳ ಗ್ರಾಮದಲ್ಲಿ ಸುಮಾರು 800 ಕುಟುಂಬಗಳಿದ್ದು, ಗ್ರಾಮದ ಜನತೆ ಮಳೆಯಿಂದ ಕೆರೆಗೆ ಹರಿದು ಸಂಗ್ರಹಗೊಂಡ ನೀರನ್ನೇ ಬಳಕೆಗೆ ಉಪಯೋಗಿಸುತ್ತಾರೆ. ಆದರೆ ಕುಡಿಯಲು ಪರದಾಟ ತಪ್ಪಿದ್ದಲ್ಲ. ಕೆರೆಯಲ್ಲಿ ನೀರು ಕಡಿಮೆಯಾದಂತೆ ನೀರು ಕಲುಷಿತಗೊಂಡು ನೀರಿಗಾಗಿ ಪರದಾಡಬೇಕಾಗುತ್ತದೆ.
ಲಕ್ಷಾಂತರ ಖರ್ಚಾದರೂ ನೀರಿಲ್ಲ: ಬೇಸಿಗೆ ಸಮಯದಲ್ಲಿ ನೀರಿನ ತೊಂದರೆ ಉಲ್ಬಣಗೊಳ್ಳುತ್ತದೆ. ಆ ಸಮಯದಲ್ಲಿ ತಾಲೂಕು ಆಡಳಿತಕ್ಕೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡದಾಗ ಟ್ಯಾಂಕರ್ ಮೂಲಕ ಕುಡಿವ ನೀರು ಪೂರೈಕೆ ಮಾಡಲಾಗುತ್ತದೆ. ಗ್ರಾಮಕ್ಕೆ ನೀರು ಪೂರೈಸಲು ವಿವಿಧ ಯೋಜನೆಗಳ ಮೂಲಕ ಲಕ್ಷಾಂತರ ಹಣ ನೀರಿನಂತೆ ವ್ಯಯಿಸಿದರೂ ಹಾಹಾಕಾರ ತಪ್ಪುತ್ತಿಲ್ಲ. ಇದರಿಂದ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ನೀರಿಗಾಗಿ ಪರದಾಟ ತಪ್ಪುತ್ತಿಲ್ಲ.
ಗುಡದನಾಳ ಸೇರಿದಂತೆ 7 ಹಳ್ಳಿಗಳಿಗೆ ಕುಡಿವ ನೀರು ಪೂರೈಸಲು ಹೊನ್ನಳ್ಳಿ ಬಳಿ ನೆನೆಗುದಿಗೆ ಬಿದ್ದಿದ್ದ ರಾಜೀವ್‌ಗಾಂಧಿ ಕುಡಿವ ನೀರು ಯೋಜನೆ ಕಳೆದೆರಡು ವರ್ಷಗಳ ಹಿಂದೆ ಪುನಃ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲಾಗಿದೆ ಹಾಗೂ ಯೋಜನೆ ವ್ಯಾಪ್ತಿಗೆ ಒಳಪಡುವ ಕೆಲ ಹಳ್ಳಿಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
6 ತಿಂಗಳಿಂದ ಗುಡದನಾಳಕ್ಕೆ ನೀರಿಲ್ಲ: ಆದರೆ ನಿರ್ವಹಣೆ ಕೊರತೆಯಿಂದ ಕಳೆದ ಸುಮಾರು 6 ತಿಂಗಳಿಂದ ಗುಡದನಾಳ ಗ್ರಾಮಕ್ಕೆ ನೀರು ಸರಬರಾಜು ಆಗುತ್ತಿಲ್ಲ. ಅಲ್ಲದೆ ಮೇದಿನಾಪುರದಲ್ಲಿ ಬೋರ್‌ವೆಲ್ ಕೊರೆದು ಪೈಪ್‌ಲೈನ್ ಅಳವಡಿಸಿ ನೀರು ಪೂರೈಸಲಾಗುತ್ತಿತ್ತು. ಆದರೆ ಈಗ ಅದರಿಂದ ನೀರು ಬರುತ್ತಿಲ್ಲ ಹಾಗೂ ಕೆರೆಯಲ್ಲಿಯೂ ನೀರು ಖಾಲಿಯಾಗಿವೆ.
ಕಳೆದೆರಡು ವರ್ಷಗಳ ಹಿಂದೆ ಲಿಂಗಸ್ಗೂರು ಪಟ್ಟಣದಲ್ಲಿ ಬೋರ್‌ವೆಲ್ ಕೊರೆದು ಪೈಪ್‌ಲೈನ್ ಮೂಲಕ ನೀರು ಪೂರೈಸಲು ಗುಡದನಾಳ ಗ್ರಾಮದ ಹೊರವಲಯದಲ್ಲಿ ನಳ ಅಳವಡಿಸಲಾಗಿದೆ. ಆದರೆ ಲಿಂಗಸ್ಗೂರಲ್ಲಿ ವಿದ್ಯುತ್ ಇದ್ದರೆ ಮಾತ್ರ ನೀರು ಪೂರೈಸಲಾಗುತ್ತದೆ. ವಿದ್ಯುತ್ ಅಭಾವ ಉಂಟಾದರೆ ಗ್ರಾಮಕ್ಕೆ ನೀರು ಬರುವುದಿಲ್ಲ.
ಒಡೆದ ಪೈಪ್‌ಲೈನ್: ಅಲ್ಲದೆ ಲಿಂಗಸ್ಗೂರು- ಗುಡದನಾಳ- ಹಟ್ಟಿ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಮಾರ್ಗ ಮಧ್ಯದ ಹಳ್ಳಕ್ಕೆ ನೂತನ ಸೇತುವ ನಿರ್ಮಿಸಲು ಅಗೆಯುವ ಸಂದರ್ಭದಲ್ಲಿ ಪೈಪ್‌ಲೈನ್ ಒಡೆದು ಹೋಗಿದೆ. ಇದರಿಂದ ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಲಿಂಗಸ್ಗೂರಿನಿಂದ ಪೂರೈಸುವ ನೀರು ಗ್ರಾಮಸ್ಥರಿಗೆ ಆಧಾರವಾಗಿದ್ದು, ಸರಿಯಾಗಿ ನೀರು ಬಾರದ ಪ್ರಯುಕ್ತ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸರದಿ ಸಾಲಿನಲ್ಲಿ ತಾಸುಗಟ್ಟಲೆ ನಿಂತು ನೀರು ಪಡೆಯುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮದ ರಾಮಲಿಂಗಪ್ಪ ದ್ಯಾಪೂರ, ಪ್ರಕಾಶ ಪಾಟೀಲ್ 'ಕನ್ನಡಪ್ರಭ'ಕ್ಕೆ ನೊಂದು ನುಡಿದರು.
ಗುಡದನಾಳ ಗ್ರಾಮಕ್ಕೆ ಸಮರ್ಪಕ ಕುಡಿವ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಆಡಳಿತಕ್ಕೆ ಹಲವು ಬಾರಿ ಮಾಡಲಾಗಿದೆ. ಇತ್ತೀಚೆಗೆ ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.
-ಅಮರೇಶಸ್ವಾಮಿ ಬಲ್ಲಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.