ಈರುಳ್ಳಿ ಖರೀದಿಯಲ್ಲಿ ರೈತರಿಗೆ ವಂಚನೆ; ದಿಢೀರ್ ಪ್ರತಿಭಟನೆ
ರಾಯಚೂರು: ನಗರದ ಎಪಿಎಂಸಿಯಲ್ಲಿ ಶನಿವಾರ ಈರುಳ್ಳಿ ಮಾರಾಟಕ್ಕೆ ಆಗಮಿಸಿದ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯ ಸ್ಯಾಂಪಲ್ ಪಡೆದು ಕಡಿಮೆ ತೂಕಕ್ಕೆ ಖರೀದಿಸಲು ಮುಂದಾದ ವರ್ತಕರ ಕಾರ್ಯವೈಖರಿ ಖಂಡಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ ನೇತೃತ್ವದಲ್ಲಿ ಈರುಳ್ಳಿ ಬೆಳೆದ ರೈತರು ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿ, ಈರುಳ್ಳಿ ಖರೀದಿದಾರರು ರೈತರು ಮಾರುಕಟ್ಟೆಗೆ ತಂದಂಥ ಬೆಳೆಯಿಂದ ಮಾದರಿ ಸಂಗ್ರಹಿಸುವ ವೇಳೆ ಹೆಚ್ಚಿನ ಪ್ರಮಾಣದಲ್ಲಿ ಪಡೆಯುವುದನ್ನು ತೀವ್ರ ವಿರೋಧಿಸಿದರು.
ನೂರಾರು ಜನ ರೈತ ಮುಖಂಡರು ವರ್ತಕರ ಹಾಗೂ ಮಧ್ಯವರ್ತಿಗಳ ಅಕ್ರಮ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಈರುಳ್ಳಿ ಖರೀದಿ ಸ್ಥಗಿತಗೊಳಿಸಿದ್ದರಿಂದ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈಚೆಗೆ ನಡೆಸಿದ್ದ ಅಧಿಕಾರಿಗಳ ಮತ್ತು ರೈತರ, ವರ್ತಕರ ಸಭೆಯಲ್ಲಿ ಎಪಿಎಂಸಿಯಲ್ಲಿ ರೈತರಿಗೆ ಈ ರೀತಿಯಲ್ಲಿ ವಂಚಿಸುತ್ತಿರುವ ಬಗ್ಗೆ ದೂರಲಾಗಿತ್ತು. ಆಗ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರತಿ 50 ಕೆ.ಜಿ. ಈರುಳ್ಳಿಗೆ ಕೇವಲ 200 ಗ್ರಾಂ. ಈರುಳ್ಳಿ ತೆಗೆದು ಪರಿಶೀಲಿಸಬಹುದೆಂದು ಹೇಳಲಾಗಿತ್ತು. ಆದರೆ ಅಂಗಡಿ ವರ್ತಕರು ಹಾಗೂ ಮಧ್ಯವರ್ತಿಗಳು ಸೇರಿ ಪ್ರತಿ 50 ಕೆ.ಜಿ. ಚೀಲಕ್ಕೆ 1.5 ಕೆ.ಜಿ. ಈರುಳ್ಳಿಯನ್ನು ಸಂಗ್ರಹಿಸಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಹಲವು ಸಲ ವರ್ತಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈರುಳ್ಳಿ ಬೆಲೆ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ವರ್ತಕರು ರೈತರನ್ನು ವಂಚಿಸುತ್ತಿರುವುದು ಸರಿಯಲ್ಲ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಅಧಿಕಾರಿಗಳು ಹಾಗೂ ವರ್ತಕರ ಸಂಘದ ಸದಸ್ಯರು, ರೈತರೊಂದಿಗೆ ಚರ್ಚೆ ನಡೆಸಿ ಈರುಳ್ಳಿ ಖರೀದಿಗೆ ಸಂಬಂಧಿಸಿ ಎದ್ದಿರುವ ವಿವಾದದ ಬಗ್ಗೆ ಡಿ.17ರಂದು ಅಧಿಕಾರಿಗಳು, ವರ್ತಕರು ಹಾಗೂ ರೈತರ ಮತ್ತೊಂದು ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ ನಂತರದಲ್ಲಿ ರೈತರು ಹೋರಾಟ ಹಿಂಪಡೆದರು.
ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಮುಖಂಡರಾದ ಎನ್. ಬಸನಗೌಡ, ಜಾಲಿಬೆಂಚಿ ಹುಲಿಗೆಪ್ಪ, ಚಂದಾಸಾಬ್, ಕೆ. ನರಸಿಂಹಲು, ಕಮಲಾಪೂರು ಶ್ರೀನಿವಾಸ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

