ರಾಯಚೂರು

ಹತ್ತಿ ದರ ಕುಸಿತ; ರೈತರ ಕಣ್ಣೀರು

Published On :

ಕ.ಪ್ರ. ವಾರ್ತೆ, ರಾಯಚೂರು, ಡಿ.17
ಜಿಲ್ಲೆಯಲ್ಲಿ ಬೆಳೆದ ಹತ್ತಿ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರಗಳ ಮೂಲಕ ಖರೀದಿಸುವಂತೆ ಆಗ್ರಹಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದ್ದು, ಬೆಳೆಗಾರರು ಸದ್ಯ ದರ ಕುಸಿತದಿಂದ ತೀವ್ರ ಸಂಕಷ್ಟದಲ್ಲಿದ್ದಾರೆಂದು ದೂರಿದರು.
ಬೆಲೆ ತೀವ್ರ ಕುಸಿತ: ಕಳೆದ ತಿಂಗಳು 6 ಸಾವಿರಕ್ಕೆ ಪ್ರತಿ ಕ್ವಿಂಟಲ್ನಷ್ಟಿದ್ದ ಹತ್ತಿ ದರವು ಕಳೆದ ಕೆಲ ದಿನಗಳಿಂದ 4,500-4,800ಕ್ಕೆ ಕುಸಿತ ಕಂಡಿದ್ದು, ಸದ್ಯ 3,500ಕ್ಕೆ ಬಂದು ತಲುಪಿದೆ. ಈಗಾಗಲೇ ರಸಗೊಬ್ಬರದ ದರ ಏರಿಕೆಯಾಗಿದೆ. ಅದರಿಂದಾಗಿ ಹತ್ತಿ ಬೆಳೆಗಾರರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಹತ್ತಿ ದರವು ಕುಸಿತ ಕಂಡಿದ್ದು ಮತ್ತಷ್ಟು ಸಮಸ್ಯೆಗೆ ದಾರಿ ಮಾಡಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ರೈತರು ರಸಗೊಬ್ಬರ, ಕ್ರಿಮಿನಾಶಕಕ್ಕೆ ಲಕ್ಷಾಂತರ ರು. ಸಾಲ ಮಾಡಿದ್ದು ಸದ್ಯ ಮಾರುಕಟ್ಟೆಯಲ್ಲಿನ ದರಕ್ಕೆ ಹತ್ತಿ ಮಾರಾಟ ಮಾಡಿದಲ್ಲಿ ಭಾರೀ ನಷ್ಟ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದ್ದು, ವೈಜ್ಞಾನಿಕ ದರ ನೀಡುವ ಮೂಲಕ ಖರೀದಿ ಕೇಂದ್ರಗಳನ್ನು ತೆರೆದು ಅದರ ಮೂಲಕ ರೈತರು ಬೆಳೆದ ಹತ್ತಿ ಖರೀದಿಸಬೇಕೆಂದು ಆಗ್ರಹಿಸಿದರು.
ಮಾರುಕಟ್ಟೆ ಅಕ್ರಮ, ಅವ್ಯವಸ್ಥೆ ಆಗರ: ನಗರದ ಹತ್ತಿ ಮಾರುಕಟ್ಟೆಯು ಅತೀ ದೊಡ್ಡ ಮಾರುಕಟ್ಟೆಯಾಗಿದ್ದು, ಅವ್ಯವಸ್ಥೆ ಮತ್ತು ಅಕ್ರಮಗಳ ಆಗರವಾಗಿದೆ. ಮಾರುಕಟ್ಟೆಗೆ ರೈತರು ಮಾರಾಟಕ್ಕೆಂದು ತರುವ ಮಾರ್ಗದಲ್ಲಿ ಶೇ. 80ರಷ್ಟು ಹತ್ತಿಯು ಖರೀದಿದಾರರ ಕುಮ್ಮಕ್ಕಿನಿಂದ ದಲ್ಲಾಳಿಗಳಿಗೆ ಮಾರಾಟವಾಗುತ್ತಿದೆ. ಈ ಮೂಲಕ ಹತ್ತಿ ಮಿಲ್ಗಳಿಗೆ ಸಾಗಿಸಲಾಗುತ್ತದೆ ಎಂದು ಆರೋಪಿಸಿದರು.
ಹೀಗೆ ಅಕ್ರಮವಾಗಿ ಖರೀದಿಸಲಾಗುವ ಹತ್ತಿಯ ಮಾರಾಟ ಪದ್ಧತಿಯಲ್ಲಿ ಸಾಕಷ್ಟು ಅಕ್ರಮಗಳಿದ್ದು ರೈತರನ್ನು ವಂಚಿಸಲಾಗುತ್ತಿದೆ. ಹತ್ತಿಯನ್ನು ಖರೀದಿಸುವುದು ಸೇರಿದಂತೆ ಮಿಲ್ಗಳಿಗೆ ಸಾಗಣೆ ವೆಚ್ಚ, ತೂಕದ ವೆಚ್ಚ ಸೇರಿದಂತೆ ವಿವಿಧ ಹಂತದಲ್ಲಿ ಅನಗತ್ಯ ವೆಚ್ಚಗಳನ್ನು ರೈತರಿಗೆ ಹೊರಿಸಲಾಗುತ್ತಿದೆ ಎಂದು ದೂರಿದರು.
ತೂಕದಲ್ಲೂ ಅನ್ಯಾಯ: ಹತ್ತಿ ಖರೀದಿ ವೇಳೆ ಮಾರುಕಟ್ಟೆಗೆ ಸಾಗಿಸಿದ ಹತ್ತಿಯಲ್ಲಿ ಭಾರೀ ಪ್ರಮಾಣದ ಸ್ಯಾಂಪಲ್ ತೆಗೆಯುತ್ತಿದ್ದು ರೈತರಿಗೆ ತೂಕದಲ್ಲಿಯೂ ಅನ್ಯಾಯ ಮಾಡಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಸರ್ಕಾರ ಪರಿಗಣಿಸಿ ಹತ್ತಿ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ಪ್ರಕಟಿಸಿ ಖರೀದಿ ಕೇಂದ್ರ ತೆರೆದು ರೈತರ ಬೆಳೆದ ಹತ್ತಿ ಖರೀದಿಸಬೇಕು. ಪ್ರತಿ ಕ್ವಿಂಟಲ್ಗೆ ಒಂದು ಕೆಜಿ ಸ್ಯಾಂಪಲ್ ಪಡೆಯುವುದನ್ನು ನಿಲ್ಲಿಸಬೇಕು.
ಮಾರುಕಟ್ಟೆಯಿಂದ ಹತ್ತಿ ಮಿಲ್ಗಳಿಗೆ ಸಾಗಿಸುವ ಸಾಗಣೆ ಮತ್ತಿತರೆ ವೆಚ್ಚಗಳನ್ನು ರೈತರ ಮೇಲೆ ಹೊರಿಸದಂತೆ ಎಚ್ಚರಿಕೆ ವಹಿಸಬೇಕು. ದಲ್ಲಾಳಿಗಳಿಂದ ಹತ್ತಿ ಖರೀದಿಯಾಗುತ್ತಿದ್ದಂತೆಯೇ ರೈತರಿಗೆ ಹಣ ಪಾವತಿಸಲು ಸೂಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಸಂಘಟನೆಯ ಜಿಲ್ಲಾ ಸಂಚಾಲಕ ಎಂ. ರಾಮಣ್ಣ, ಜಿಲ್ಲಾ ಸಮಿತಿ ಸದಸ್ಯ ವೈ.ಪಿ. ಸಾಗರ್, ಶಾಮಸುಂದರ್, ಆದೆಪ್ಪ, ಮುದುರಂಗಣ್ಣ, ವೆಂಕೋಬ, ವೀರೇಶ್ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಹತ್ತಿ ಬೆಳೆಗಾರರಾದ ಆಂಜನೇಯ, ದಸ್ತಗೀರ್, ಬಸವರಾಜಸ್ವಾಮಿ, ಮಹಾಂತೇಶ್ ಪಾಟೀಲ್, ಮಂಜುನಾಥ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.