ಮೂಲ ಸೌಕರ್ಯಕ್ಕೆ ಆಗ್ರಹಿಸಿ ನಾಗಲಾಪುರ ಗ್ರಾ.ಪಂ. ಎದುರು ಧರಣಿ
ಕ.ಪ್ರ. ವಾರ್ತೆ ಮುದಗಲ್ ಡಿ.19
ಜನಸಂಖ್ಯೆಗೆ ಅನುಗುಣವಾಗಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ವಸತಿ ನಿಲಯ, ನ್ಯಾಯಬೆಲೆ ಅಂಗಡಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಆಗ್ರಹಿಸಿ ಹೈ-ಕ ವಿಮೋಚನಾ ವೇದಿಕೆಯ ಪದಾಧಿಕಾರಿಗಳು ಪಟ್ಟಣ ಸಮೀಪದ ನಾಗಲಾಪುರ ಗ್ರಾ.ಪಂ. ಎದುರಿಗೆ ಸಾಂಕೇತಿಕ ಧರಣಿ ನಡೆಸಿದರು.
ವ್ಯಾಕರನಾಳ, ಹಡಗಲಿ, ಗುಡಿಹಾಳ, ನಾಗಲಾಪುರ ಸೇರಿದಂತೆ ಸುತ್ತಲಿನ ಹಳ್ಳಿಗಳ ಹಲವಾರು ಕಾರ್ಯಕರ್ತರು ಸೇರಿ ನಾಗಲಾಪುರ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಗ್ರಾ.ಪಂ. ಎದುರಿಗೆ ಧರಣಿ ಕುಳಿತರು. ಸರ್ಕಾರದ, ಗ್ರಾ.ಪಂ. ಆಡಳಿತದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು 0-6 ವರ್ಷದ ಮಕ್ಕಳಿಗೆ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ತೂಕ ಹಾಗೂ ತಪಾಸಣೆ ಶಿಬಿರ ಪ್ರತಿ ತಿಂಗಳು ಏರ್ಪಡಿಸಿ, ವಾರ ಪೂರ್ತಿ ಹಾಲು ಮತ್ತು ಮೊಟ್ಟೆ ವಿತರಿಸಬೇಕೆಂದು ಆಗ್ರಹಿಸಿದರು.
ಅಪೌಷ್ಟಿಕ ನಿರ್ಮೂಲನಾ ಉಸ್ತುವಾರಿ ಸಮಿತಿಯ ಸಭೆ ಪ್ರತಿ ತಿಂಗಳು ನಡೆಸಬೇಕು, ಹಡಗಲಿ, ಕನ್ನಾಳ, ಗುಡಿಹಾಳ, ತಿಮ್ಮಾಪುರ, ಮ್ಯಾದರಾಳ ಹಾಗೂ ಮೆದಿಕಿನಾಳ ಸೇರಿದಂತೆ ಇತರಡೆ ಬಾಡಿಗೆ ಕಟ್ಟಡ ಹಾಗೂ ಜನತಾ ಮನೆಗಳಲ್ಲಿ ನಡೆಸಲಾಗುತ್ತಿರುವ ಅಂಗನವಾಡಿಗಳಿಗೆ ಶಾಶ್ವತ ಕಟ್ಟಡ ನಿರ್ಮಿಸಿ ತಾಲೂಕಿನ ಪ್ರತಿ ಅಂಗನವಾಡಿಗಳಿಗೆ ನೀರು, ವಿದ್ಯುತ್ ಪೂರೈಸುವುದು, ಕನ್ನಾಳ ಮತ್ತು ತಲೇಖಾನ ಗ್ರಾಮಗಳಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ಮಂಜೂರುಮಾಡುವುದು. ಗುಡಿಹಾಳ, ನಾಗರಬೆಂಚಿ, ಹಡಗಲಿ ಹಾಗೂ ಛತ್ತರ ಗ್ರಾಮಗಳಿಗೆ ಪ್ರೌಢ ಶಾಲೆಗಳನ್ನು ಮಂಜೂರು ಮಾಡುವುದು, ಸರ್ಕಾರಿ ಶಾಲೆಗಳಲ್ಲಿ ತರಗತಿವಾರು ಶಿಕ್ಷಕರನ್ನು ಹಾಗೂ ಕೋಠಡಿ ವ್ಯವಸ್ಥೆ ಕಲ್ಪಿಸಬೇಕು, ಮಟ್ಟೂರ, ತಲೇಖಾನ್, ಕನ್ನಾಳ ಗ್ರಾಮಗಳಿಗೆ ಪಿಎಚ್ಸಿ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಬೇಕು, ತೊಡಕಿ, ಮೂಡಲದಿನ್ನಿ, ಕುಮಾರಖೇಡ, ಬುದ್ದಿನ್ನಿ, ತೆರೆಬಾವಿ ಗ್ರಾಮಗಳಿಗೆ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಬೇಕು, ಖಾತ್ರಿ ಯೋಜನೆಯಡಿ ಕೂಲಿ ಕಾರರಿಗೆ ಉದ್ಯೋಗ ಚಿಟಿ ನೀಡಬೇಕು, ಪ್ರತಿಹಳ್ಳಿಯ ಎಸ್.ಸಿ ವಾರ್ಡುಗಳಲ್ಲಿ ಕುಡಿಯುವ ನೀರು, ಸಿಸಿ ರಸ್ತೆ, ಸಮುದಾಯ ಭವನ ನಿರ್ಮಿಸಬೇಕೆಂಬ ಬೇಡಿಕೆಯ ಮನವಿ ಪತ್ರವನ್ನು ನಾಗಲಾಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚನ್ನಮಲ್ಲಯ್ಯ ಸ್ವಾಮಿ ಕನ್ನಾಳ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅನುಸೂಯ ಗ್ಯಾನನಗೌಡ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಮಹಾಮುನಿಯಪ್ಪ, ಆರೋಗ್ಯ ಇಲಾಖೆಯ ಸರೋಜ, ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಸೂಪರ್ವೈಸರ್ ಲಕ್ಷ್ಮೀಬಾಯಿ ಆಗಮಿಸಿ ಇಲಾಖೆವಾರು ಸಮಸ್ಯೆಗಳನ್ನು ಆಲಿಸಿದರು, ಪ್ರತಿಭಟನಾಕಾರರಾದ ಸುರೇಶ ಅಂತರಗಂಗಿ, ಹನುಮಂತಪ್ಪ ವೆಂಕಟಾಪುರ, ಶರಣಪ್ಪ ಗುಡಿಹಾಳ, ಅಮರಮ್ಮ ತೆರೆಭಾವಿ, ವೀರೇಶ ವ್ಯಾಕರನಾಳ, ಯಮನಪ್ಪ ಗುಡಿಹಾಳ, ರಮೇಶ ತಿಮ್ಮಾಪುರ, ಹನುಮಂತ ನಾಗಲಾಪುರ, ಮಾನಪ್ಪ ಮೂಡಲದಿನ್ನಿ, ದುರುಗಪ್ಪ ಹಡಗಲಿ, ಬೈಲಪ್ಪ ತೆರೆಭಾವಿ ಸೇರಿದಂತೆ ಅನೇಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

