ರಾಯಚೂರು

ಎನ್ನಾರ್ಬಿಸಿ ಕಾಲುವೆ ವಿಸ್ತರಣೆಗೆ 24ರಂದು ಸಿಎಂ ಸಿದ್ದು ಚಾಲನೆ

Published On :

ದೇವದುರ್ಗ: ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆಯ 95ನೇ ಕಿಮೀ ನಿಂದ 125 ಕಿಮೀ ವರೆಗಿನ ಕಾಲುವೆಯ ನಿರ್ಮಾಣ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಡಿ.24ರಂದು ಚಾಲನೆ ನೀಡಲಿದ್ದಾರೆಂದು ಶಾಸಕ ವೆಂಕಟೇಶ ನಾಯಕ ಹೇಳಿದರು.
ತಾಲೂಕಿನ ಮಾನಸಗಲ್ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ  ಭರವಸೆ ನೀಡಿದಂತೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತಿವರ್ಷ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡಲಾಗುತ್ತಿದೆ ಎಂದು ಹೇಳಿದರು.
ಕೆಬಿಜೆಎನ್ನೆಲ್ನಿಂದ ಅನುದಾನ: ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಕಾಮಗಾರಿಗೆ ಡಿ.24 ರಂದು ಮಧ್ಯಾಹ್ನ 1ಕ್ಕೆ ಅರಕೇರಾ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಖ್ಯ ಕಾಲುವೆಯ ಆಧುನೀಕರಣಕ್ಕಾಗಿ 750 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ 350 ಕೋಟಿ ಹಾಗೂ ಕೆಬಿಜೆಎನ್ನೆಲ್ ನಿಂದ ಇನ್ನುಳಿದ ಅನುದಾನ ದೊರೆಯಲಿದೆ ಎಂದರು.
ಅದೇ ರೀತಿ 143 ಕೋಟಿ ಅನುದಾನದಲ್ಲಿ ಸಿರವಾರ ಕ್ರಾಸ್ದಿಂದ ಮುಷ್ಟೂರು ಜಾಗಟಗಲ್, ಗೂಗಲ್, ಗಬ್ಬೂರು- ಸಿರವಾರ ಕ್ರಾಸ್, ದೇವದುರ್ಗ ಮಾತ್ಪಳ್ಳಿ (ವಯಾ ಚಿಕ್ಕಬೂದೂರು) ಹಾಗೂ ದೇವದುರ್ಗ- ಕೊಪ್ಪರ- ಗೂಗಲ್ ಹೀಗೆ ಒಟ್ಟು ನಾಲ್ಕು ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.
ನಿರ್ಮಾಣಕ್ಕೆ ಪ್ರಸ್ತಾವನೆ: ಪಟ್ಟಣದ ಎಜುಕೇಷನ್ ಲೇಔಟ್ ಬಳಿಯಿಂದ ಗುಲ್ಬರ್ಗ ರಸ್ತೆವರೆಗೆ ಬೈಪಾಸ್ ರಸ್ತೆ 6 ಕಿಮೀ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ದೇವದುರ್ಗ ಪಟ್ಟಣದ ಜನತೆಗೆ ಸಂಚಾರ ಸರಾಗವಾಗಲಿದೆ ಎಂದರು.
10 ಎಕರೆ ಜಮೀನು ನೀಡಿಕೆ: ಅರಕೇರಾ ಗ್ರಾಮದಲ್ಲಿ 4 ಕೋಟಿ ವೆಚ್ಚದಲ್ಲಿ ಆಂಗ್ಲಮಾಧ್ಯಮ ಆದರ್ಶ ವಿದ್ಯಾಲಯ ಪ್ರಾರಂಭಿಸಲಾಗುತ್ತಿದ್ದು, 6ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಶಾಲೆಗಾಗಿ ಅರಕೇರಾ ಗ್ರಾಮದ ಗೈರಾಣಿ ಭೂಮಿಯಲ್ಲಿ 10 ಎಕರೆ ಜಮೀನು ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿ, ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವಿ. ನಾಯಕ, ಗಲಗ ಜಿಪಂ ಸದಸ್ಯ ಶಿವಣ್ಣ ತಾತಾ ಮುಂಡರಗಿ, ಕೆಪಿಸಿಸಿ ಸದಸ್ಯ ಹಾಗೂ ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಇರಬಗೇರಾ, ಆರ್ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎ. ರಾಜಶೇಖರ ನಾಯಕ, ಸೇವಾ ದಳದ ಜಿಲ್ಲಾ ಅಧ್ಯಕ್ಷ ಬಾಪೂಗೌಡ ಪಾಟೀಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಕ್ಕಮಹಾದೇವಿ, ಬ್ಲಾಕ್ ಅಧ್ಯಕ್ಷರಾದ ಭೀಮನಗೌಡ ನಾಗಡದಿನ್ನಿ, ಬಸ್ಸಯ್ಯ ಶಾಖೆ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.