ಬಾಡಿಗೆ ಪಡೆಯಲು ಹಿಂದೇಟು: 27ರಂದು ನಗರಸಭೆಗೆ ಮುತ್ತಿಗೆ
ರಾಯಚೂರು: ಬಾಡಿಗೆ ವಸೂಲು ಮಾಡದಂತೆ ಇಲ್ಲವೇ ಬಾಡಿಗೆ ಹೆಚ್ಚಳಕ್ಕೆ ವಿರೋಧಿಸುವುದು ತೀರಾ ಸಾಮಾನ್ಯ. ಆದರೆ ಅದಕ್ಕೆ ತದ್ವಿರುದ್ಧವಾಗಿ ನಗರದ ಉಸ್ಮಾನಿಯಾ ಮಾರುಕಟ್ಟೆಯ ವರ್ತಕರು ಬಾಡಿಗೆ ನೀಡಲು ಸಿದ್ಧರಿದ್ದೇವೆ. ನಗರಸಭೆ ಬಾಡಿಗೆ ಸಂಗ್ರಹಣೆಗೆ ಸಿದ್ಧವಿಲ್ಲ ಎಂದು ಆರೋಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಡಳಿತದ ನಿರ್ಲಕ್ಷ್ಯ ಮುಂದುವರಿದರೆ ಡಿ.27ರಂದು ನಗರಸಭೆಗೆ ಮುತ್ತಿಗೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷ ಮಹಾವೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ಮೂಲಸೌಲಭ್ಯ ಒದಗಿಸುವಲ್ಲಿ ವಿಫಲವಾಗಿರುವ ನಗರಸಭೆಯು ಮಾರುಕಟ್ಟೆಯಲ್ಲಿನ ವರ್ತಕರಿಂದ ಬಾಡಿಗೆ ವಸೂಲು ಮಾಡಲೂ ಹಿಂದೇಟು ಹಾಕುತ್ತಿದೆ. ನಗರಸಭೆಯ ಅಧಿಕಾರಿಗಳ ಈ ರೀತಿಯ ವರ್ತನೆ ಸಹಿಸಲು ಅಸಾಧ್ಯ ಎಂದರು.
ಪರಿಹರಿಸುವ ನಿಟ್ಟಿನಲ್ಲಿ ಕ್ರಮ: ನಗರಸಭೆಯಲ್ಲಿ ಇದುವರೆಗೆ ಕಾರ್ಯನಿರ್ವಹಿಸಿದ ಎಲ್ಲ ಪೌರಾಯುಕ್ತರು ತರಕಾರಿ ಮಾರುಕಟ್ಟೆಗೆ ಆಗಾಗ್ಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಹಾಲಿ ಪೌರಾಯುಕ್ತ ಬಸಪ್ಪ ಅವರು ತರಕಾರಿ ಮಾರುಕಟ್ಟೆಯತ್ತ ನೋಡುತ್ತಿಲ್ಲ ಎಂದು ದೂರಿದರು.
ಕಳೆದ 20 ತಿಂಗಳಿನಿಂದ ತರಕಾರಿ ಮಾರಾಟಗಾರರು ಬಾಡಿಗೆ ನೀಡಲು ಸಿದ್ಧವಾಗಿದ್ದರೂ ನಗರಸಭೆ ಆಡಳಿತವು ಬಾಡಿಗೆ ಪಡೆಯಲು ಹಿಂದೇಟು ಹಾಕುತ್ತಿದೆ. ಕಳೆದ ಅವಧಿಯಲ್ಲಿ ಅಧಿಕಾರದಲ್ಲಿದ್ದ ಆಡಳಿತ ಮಂಡಳಿಯು ಮಾರುಕಟ್ಟೆಯಲ್ಲಿನ ಮಳಿಗೆಗಳ ಬಾಡಿಗೆಯನ್ನು ಮೊದಲಿಗೆ ಹೆಚ್ಚಳ ಮಾಡಿತ್ತು. ಅದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ತನ್ನ ಅವಧಿಯ ಕೊನೆಗೆ ಬಾಡಿಗೆಯ ಮೊತ್ತವನ್ನು ಕಡಿಮೆಗೊಳಿಸಿ ನಿರ್ಣಯ ಅಂಗೀಕರಿಸಿದೆ. ಆದರೆ ಹಾಲಿ ಪೌರಾಯುಕ್ತರು ಬಾಡಿಗೆ ಕಡಿತಗೊಳಿಸಿದ್ದಕ್ಕೆ ಆಕ್ಷೇಪಿಸಿ ಬಾಡಿಗೆ ಪಡೆಯಲು ನಿರಾಕರಿಸುತ್ತಿದ್ದಾರೆಂದು ದೂರಿದರು.
ವರ್ತಕರ ಅಹವಾಲು ಕೇಳಿಲ್ಲ: ಕಳೆದ ಮೂರು ತಿಂಗಳ ಹಿಂದೆ ನಗರಸಭೆಯ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಅಧಿಕಾರಿಗಳಿಗೆ ತರಕಾರಿ ಮಾರುಕಟ್ಟೆಯಲ್ಲಿನ ಸಮಸ್ಯೆಗಳ ನಿವಾರಣೆಗೆ ಮನವಿ ಮಾಡಲಾಗಿತ್ತು. ಆದರೆ ಸಮಸ್ಯೆಗಳು ಮಾತ್ರ ಪರಿಹಾರ ಕಂಡಿಲ್ಲ. ನಗರಸಭೆಯ ಪೌರಾಯುಕ್ತರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಮಾರುಕಟ್ಟೆಗೆ ಭೇಟಿ ನೀಡಿ ವರ್ತಕರ ಅಹವಾಲು ಕೇಳಿಲ್ಲ ಎಂದು ಆರೋಪಿಸಿದರು.
ಕೂಡಲೇ ಪೌರಾಯುಕ್ತರು ವರ್ತಕರಿಂದ ಬಾಡಿಗೆ ಹಣ ಪಡೆಯಬೇಕು. ಮೂಲಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಡಿ.27ರಂದು ನಗರಸಭೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಪ್ರಭುನಾಯಕ, ಬೋಳಬಂಡಿ ತಿಮ್ಮಾರೆಡ್ಡಿ, ಶ್ರೀನಿವಾಸ ರೆಡ್ಡಿ, ಎಂಡಿ ಶಾಲಂ, ಎಸ್.ಕೆ. ಖಾನ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

