ರಾಯಚೂರು

ಜನರ ನಿರೀಕ್ಷೆ ಹುಸಿಗೊಳಿಸಿದ ಸರ್ಕಾರ: ಶೇಷಗಿರಿ ರಾವ್

Published On :

ಸಿಂಧನೂರು: ಹಿರಿಯ ರಾಜಕಾರಣಿ ಹಂಪನಗೌಡ ಬಾದರ್ಲಿ ಶಾಸಕರಾಗಿ ಆರು ತಿಂಗಳು ಗತಿಸಿದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ ಎಂದು ಬಿಜೆಪಿ ಮುಖಂಡ ಶೇಷಗಿರಿರಾವ್ ಕೊಲ್ಲಾ ಆರೋಪಿಸಿದರು.
ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರಾಗಿ ಆಯ್ಕೆಯಾದ ನಂತರ ನಗರಸಭೆಯ ಕಾಂಗ್ರೆಸ್ ಸದಸ್ಯರಿರುವ ವಾರ್ಡ್ಗಳಿಗೆ ಮಾತ್ರ ಅಲ್ಲಲ್ಲಿ ಮಣ್ಣು ಚೆಲ್ಲಿದ್ದಾರೆ. ಸ್ವಲ್ಪ ಮಳೆಯಾದರೂ ರಸ್ತೆ ಮೇಲೆ ನಡೆಯಲಾಗದು. ಅಧಿಕಾರಿಗಳ ಮೇಲೆ ಹಿಡಿತವಿಲ್ಲ. ಕ್ಷೇತ್ರದಲ್ಲಿ ಒಂದು ರೀತಿಯ ಅರಾಜಕತೆ ಇದೆ. ಮುಂದಿನ ದಿನಗಳಲ್ಲಿ ಜನತೆ ಬಾದರ್ಲಿ ಅವರಿಗೆ ಪಾಠ ಕಲಿಸಲಿದ್ದಾರೆ ಎಂದರು.
ಜನರ ನಿರೀಕ್ಷೆ ಹುಸಿ: ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವಂತ ವೃತ್ತಿ ಶಿಕ್ಷಣ 2006ರ ಕಾಯ್ದೆ ಜಾರಿಗೊಳಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿಜ ಬಣ್ಣ ಈಗ ಬಯಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ರಾಜ್ಯದ ಜನತೆ ಬಹಳ ನಿರೀಕ್ಷೆ ಇಟ್ಟಿದ್ದರು. ಅವೈಜ್ಞಾನಿಕ ಲೆವಿ ಸೇರಿದಂತೆ ಅವರು ಜಾರಿಗೊಳಿಸಿರುವ ಯಾವುದೇ ಯೋಜನೆಗಳು ಯಶಸ್ವಿಯಾಗಿಲ್ಲ ಎಂದರು.
ಇಂದು ಕಾರ್ಯಾಗಾರ: ಕಾರಟಗಿ ಹತ್ತಿರದ ದೇವಿಕ್ಯಾಂಪ್ನ ಬೀರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ಶಕ್ತಿಕೇಂದ್ರಗಳ ಪ್ರಮುಖ ಕಾರ್ಯಾಗಾರ ನಡೆಯಲಿದೆ. ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ, ರಾಜ್ಯ ಉಪಾಧ್ಯಕ್ಷರಾದ ಭಾನು ಪ್ರಕಾಶ, ಹಾಲಪ್ಪಾಚಾರ್, ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಸೋಮಲಿಂಗಪ್ಪ, ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ, ಉಸ್ತುವಾರಿ ಅಶೋಕ ಗಸ್ತಿ, ಕೊಪ್ಪಳ ಪ್ರಭಾರಿ ಗಿರಿಗೌಡ, ಸಂಸದರು, ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಉತ್ತರ ಭಾರತದ ಪಂಚ ರಾಜ್ಯ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ಗೆ ಪಾಠ ಕಲಿಸಿದ್ದಾರೆ. ಪಕ್ಷ, ಮೋದಿಯವರ ಬಗ್ಗೆ ಹೊಸ ಹುಮ್ಮಸ್ಸು ಇದೆ. ಈಗಾಗಲೇ ದೇಶದ ಜನತೆ ನರೇಂದ್ರ ಮೋದಿಯವರನ್ನು ಎದುರು ನೋಡುತ್ತಿದ್ದಾರೆ ಎಂದರು.
ಈ ವೇಳೆ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ನಗರ ಘಟಕದ ಅಧ್ಯಕ್ಷ ಮಧ್ವರಾಜ್ ಆಚಾರ, ಪ್ರಧಾನ ಕಾರ್ಯದರ್ಶಿ ಸುಬ್ಬರಾವ್, ಮಲ್ಲೇಶರಾವ್, ಬಸನಗೌಡ ಸಣ್ಣಗೌಡ್ರು, ಅಮರೇಶ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.