ಗ್ರಾಮೀಣ ಸೇವೆ ಕಡ್ಡಾಯಕ್ಕೆ ವಿರೋಧ
ಕ.ಪ್ರ. ವಾರ್ತೆ , ರಾಯಚೂರು , ಡಿ.24
ಕೇಂದ್ರ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಒಂದು ವರ್ಷದ ಗ್ರಾಮೀಣ ಸೇವೆ ಕಡ್ಡಾಯ ಪದ್ಧತಿಯಿಂದ ಉನ್ನತ ಶಿಕ್ಷಣ ಅಪೇಕ್ಷೆಯಲ್ಲಿರುವ ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿ ಮಂಗಳವಾರ ನಗರದಲ್ಲಿ ರಿಮ್ಸ್ ಮೆಡಿಕಲ್ ಕಾಲೇಜಿನ ಗೃಹ ವೈದ್ಯರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ ವೈದ್ಯರು ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರವು 2015- 16ನೇ ಸಾಲಿನಿಂದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ಅರ್ಹತೆ ಹೊಂದಲು ಎಂಬಿಬಿಎಸ್ ಪದವೀಧರರು ಒಂದು ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯವಾಗಿ ಸಲ್ಲಿಸಿರಬೇಕೆಂದು ನಿಯಮ ರೂಪಿಸಲು ಹೊರಟಿದೆ. ಆದರೆ ಅಂಥ ನಿಯಮದ ಜಾರಿಯಿಂದ ಎಂಬಿಬಿಎಸ್ ಪದವೀಧರರಿಗೆ ಉನ್ನತ ಶಿಕ್ಷಣದ ಕಲಿಕೆಗೆ ಅಡಚಣೆಯಾಗಲಿದೆ ಎಂದು ಆರೋಪಿಸಿದರು.
ಮೂಲಸೌಕರ್ಯ ಕೊರತೆ: ವೈದ್ಯಕೀಯ ವಿಭಾಗದ ಅಧ್ಯಯನವು ಸುದೀರ್ಘವಾಗಿದ್ದು, ಈ ಕಲಿಕೆಯ ವೇಳೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಆತಂಕಕಾರಿಯಾಗಿದೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ. ವಸತಿ ಹಾಗೂ ಉತ್ತಮ ಆಹಾರದ ದೊರೆಯುವಿಕೆಯ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಣೆ ಕಷ್ಟಸಾಧ್ಯ ಎಂದು ದೂರಿದರು.
ಅದೇ ರೀತಿ ಗ್ರಾಮೀಣ ಭಾಗದಲ್ಲಿ ಸುರಕ್ಷತೆಯ ಕೊರತೆಯಿದೆ. ರಾಜಕೀಯ ಮುಖಂಡರು ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಂದ ವೈದ್ಯಕೀಯ ವೃತ್ತಿಯಲ್ಲಿ ಸೇವೆ ಸಲ್ಲಿಸುವವರಿಗೆ ಕಾರ್ಯನಿರ್ವಹಣೆಯಲ್ಲಿ ನಿರಂತರ ಅನಗತ್ಯ ಒತ್ತಡವಿದೆ ಎಂದು ಆರೋಪಿಸಿದರು.
ಅಧ್ಯಯನಕ್ಕೆ ತೊಡಕು- ಆರೋಪ: ಕೇಂದ್ರ ಸರ್ಕಾರದ ಗ್ರಾಮೀಣ ಸೇವೆ ಕಡ್ಡಾಯ ನೀತಿಯಿಂದಾಗಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಮಧ್ಯೆ ಸಂಪರ್ಕ ಕೊಂಡಿ ಕಳಚಿ ವೈದ್ಯಕೀಯ ಕ್ಷೇತ್ರದಲ್ಲಿನ ಆಕಾಂಕ್ಷಿಗಳಿಗೆ ಅಧ್ಯಯನಕ್ಕೆ ತೊಡಕಾಗಲಿದೆ ಎಂದು ದೂರಿದ ಹೋರಾಟಗಾರರು, ಗ್ರಾಮೀಣ ಭಾಗಕ್ಕೆ ಸಾರಿಗೆಯ ಅನಾನುಕೂಲದ ಸಮಸ್ಯೆಯೂ ಕಾಡುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಎಂಬಿಬಿಎಸ್ ಪದವಿ ವ್ಯಾಸಂಗ ಸಂದರ್ಭದಲ್ಲಿಯೇ ಆರು ತಿಂಗಳು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ್ದು, ಸ್ನಾತಕೋತ್ತರ ಪ್ರವೇಶಕ್ಕೆ ಪುನಾ ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸುವುದು ಸಮಂಜಸವಲ್ಲ. ಕಿರಿಯ ವೈದ್ಯಾಧಿಕಾರಿಗಳಾಗಿರುವ ತಮಗೆ ವೃತ್ತಿಯಲ್ಲಿ ಹಿರಿಯ ವೈದ್ಯರ ಸಲಹೆಯಿಲ್ಲದೇ ಕಾರ್ಯ ನಿರ್ವಹಣೆಯಲ್ಲಿ ಸಮಸ್ಯೆಗಳುಂಟಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮತ್ತೂ ಅವಧಿ ಹೆಚ್ಚಳ: ಹೀಗೆ ಹತ್ತು ಹಲವು ಸಮಸ್ಯೆಗಳು ಗ್ರಾಮೀಣ ಭಾಗದಲ್ಲಿ ಎದುರಾಗುತ್ತವೆ. ಎಂಬಿಬಿಎಸ್ಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸರ್ಕಾರ ಐದೂವರೆ ವರ್ಷದ ಕೋರ್ಸ್ ಎಂದು ಹೇಳಿ ಸದ್ಯ ಅದನ್ನು ಗ್ರಾಮೀಣ ಪ್ರದೇಶದ ಸೇವೆ ಕಡ್ಡಾಯ ನಿಯಮ ಸೇರ್ಪಡೆಗೊಳಿಸುವ ಮೂಲಕ ಮತ್ತೂ ಅವಧಿ ಹೆಚ್ಚಿಸಲು ಹೊರಟಿರುವುದು ನ್ಯಾಯೋಚಿತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ಪದ್ಧತಿಗೆ ತಾವು ವಿರೋಧಿಯಲ್ಲ. ಆದರೆ ಗ್ರಾಮೀಣ ಭಾಗದಲ್ಲಿನ ಸೇವೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ನಿರ್ವಹಿಸಬೇಕೆಂಬ ನಿಯಮಕ್ಕೆ ತಮ್ಮ ವಿರೋಧವಿದೆ ಎಂದ ಹೋರಾಟನಿರತ ರಿಮ್ಸ್ ಗೃಹ ವೈದ್ಯರು, ಗ್ರಾಮೀಣ ಭಾಗದ ಸೇವೆಯ ಕಡ್ಡಾಯ ಎಂಬ ನಿಯಮವನ್ನು ಸ್ನಾತಕೋತ್ತರ ಪದವಿಯ ಭಾಗವಾಗಿ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಎಂಬಿಬಿಎಸ್ ಕಡೆಯ ವರ್ಷದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

