ರಾಯಚೂರು

ಫಲಾನುಭವಿಗಳ ಆಕ್ರೋಶ

Published On :

ಕ.ಪ್ರ.ವಾರ್ತೆ ಟಿ ದೇವದುರ್ಗ ಟಿ  ಡಿ.26
ತಾಲೂಕಿನ ಜಾಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನೀಡಿದ್ದ 900 ಚೆಕ್‌ಗಳು ಗ್ರಾಪಂ ನ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ್ದರಿಂದ ಬೌನ್ಸ್ ಆಗಿವೆ. ಗ್ರಾಮದ ಫಲಾನುಭವಿಗಳು ಆಕ್ರೋಶಗೊಂಡು ಬ್ಯಾಂಕಿನ ಎದುರು ಪ್ರತಿಭಟನೆಗಿಳಿದ ಘಟನೆ ಗುರುವಾರ ನಡೆಯಿತು.
ಇಲ್ಲಿನ ಎಸ್‌ಬಿಐ ಬ್ಯಾಂಕಿನ ಎದುರು ಚೆಕ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಫಲಾನುಭವಿಗಳು ತಮಗೆ ಜಾಲಹಳ್ಳಿ ಗ್ರಾಪಂ ನಿಂದ ಒಟ್ಟು 1100 ಮನೆಗಳು ಮಂಜೂರಾಗಿದ್ದು, 900 ಜನರಿಗೆ ವಿವಿಧ ವಸತಿ ಯೋಜನೆಗಳಡಿ ಚೆಕ್ ವಿತರಿ ಸಿದ್ದು, ಗ್ರಾಪಂ ನ  ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೇ ಚೆಕ್ ಬೌನ್ಸ್ ಆಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆಗೆ ದಾರಿ: ಗ್ರಾಪಂ ನಿಂದ ಚೆಕ್ ವಿತರಿಸಿದಾಗಿನಿಂದ ಅನೇಕ ಬಾರಿ ಬ್ಯಾಂಕಿನ ದೇವದುರ್ಗ ಶಾಖೆಗೆ ಅಲೆದರೂ ಬ್ಯಾಂಕಿನ ಗ್ರಾಪಂ ಖಾತೆಯಲ್ಲಿ ಅಗತ್ಯ ಹಣ ಜಮಾ ಆಗಿಲ್ಲ ಎಂಬು ಮಾತು ಕೇಳಿಬಂದಿದೆ. 2011-12ನೇ ಸಾಲಿನ ವಸತಿ ಯೋಜನೆಯಡಿ ನಿರ್ಮಿಸಿಕೊಂಡ ಮನೆಗಳಿಗೆ ಈಚೆಗೆ ಮೊದಲ ಹಾಗೂ ಎರಡನೇ ಕಂತಿನ ಮೊತ್ತಕ್ಕೆ ಚೆಕ್ ನೀಡಿದ್ದು, ಅವುಗಳು ಸದ್ಯ  ಬೌನ್ಸ್ ಆಗುವ ಮೂಲಕ ಸಮಸ್ಯೆಗೆ ದಾರಿಯಾಗಿದೆ ಎಂದು ಆರೋಪಿಸಿದರು.
ಕಳೆದ ಮೂರು ತಿಂಗಳಿನಿಂದ ಗ್ರಾಪಂ ಪಿಡಿಒ ಬ್ಯಾಂಕ್ ಖಾತೆಗೆ ಇಂದು ನಾಳೆ ಹಣ ಜಮಾ ಮಾಡುತ್ತೇನೆಂದು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದು, ಅದರಿಂದಾಗಿ ವಸತಿ ಯೋಜನೆಯ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸಾಲ ಮಾಡಿ ಮನೆ ನಿರ್ಮಿಸಿಕೊಂಡಿದ್ದು, ಗ್ರಾಪಂ ಆಡಳಿತದ ಕಾರ್ಯವೈಖರಿಯಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್‌ಗೆ ಅಲೆದಾಟ: ಪ್ರತಿಯೊಬ್ಬ ಫಲಾನುಭವಿಗೆ ತಲಾ ರು. 20 ಸಾವಿರ ಚೆಕ್ ನೀಡಿದ್ದು, ಬ್ಯಾಂಕ್ ಖಾತೆಯಲ್ಲಿ ಕೇವಲ ರು. 15ಸಾವಿರ  ಮಾತ್ರ ಜಮಾ ಮಾಡಲಾಗಿದೆ. ಇದರಿಂದಾಗಿ ಬ್ಯಾಂಕಿಗೆ ಚೆಕ್ ಹಿಡಿದು ಅಲೆದಾಡುವಂತಾಗಿದೆ. ಈ ಬಗ್ಗೆ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಂಕು ಮತ್ತು ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಮ್ಮ ಸಮಸ್ಯೆ ಪರಿಹಾರ ಕಂಡಿಲ್ಲ. ಗ್ರಾಪಂ ಆಡಳಿತ ಫಲಾನುಭವಿ ಗಳಿಗೆ ಅನುದಾನ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಕೂಡಲೇ ಪರಿಹರಿಸುವಂತೆ ಹೋರಾಟಗಾರರು ಒತ್ತಾಯಿಸಿದರು. ಜಾಕೀರ್ ಹುಸೇನ್, ರಂಗಪ್ಪ, ನಾಗಲಿಂಗ, ತಾಯಮ್ಮ, ಪದ್ದಮ್ಮ ಸೇರಿ ನೂರಾರು ಜನ ಫಲಾನುಭವಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.