ರಾಯಚೂರು

ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕಾಡುತ್ತಿದೆ ಅನುದಾನದ ಕೊರತೆ

Published On :

ಕ.ಪ್ರ. ವಾರ್ತೆ  ರಾಯಚೂರು  ಡಿ.27
ರಾಜ್ಯದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಲ್ಲಿ ಅನುದಾನದ ಲಭ್ಯತೆಯ ಕೊರತೆ. ರಾಷ್ಟ್ರೀಯ ಹಬ್ಬಗಳು, ಜಿಲ್ಲಾಮಟ್ಟದ ಕ್ರೀಡಾಕೂಟಗಳ ತಾಣವಾದ ಜಿಲ್ಲಾ ಕ್ರೀಡಾಂಗಣ ಶಿಥಿಲಾವಸ್ಥೆಯಲ್ಲಿರುವುದರಿಂದ ಸಮಾರಂಭ ಆಯೋಜಿಸಲೂ ಆತಂಕ.
  ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ರು. 22ಕೋಟಿ ಪ್ರಸ್ತಾವನೆ ಸಲ್ಲಿಸಿದರೂ, ದೊರೆಯದ ಮಂಜೂರಾತಿ. ಪರಿಷ್ಕೃತ ಮೊತ್ತಕ್ಕೆ ಕ್ರಿಯಾ ಯೋಜನೆಗೆ ಸೂಚಿಸಿದ ಸರ್ಕಾರ. ರಾಯಚೂರಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣಕ್ಕೆ ಒದಗಿದ ದುಸ್ಥಿತಿಯ ಚಿತ್ರಣ.
ಸವಾಲು: ಕಳೆದ ಐದು ವರ್ಷಗಳಿಗೂ ಹೆಚ್ಚಿನ ಕಾಲದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸುವುದು ಸಂಘಟಕರಿಗೆ ಬಹು ದೊಡ್ಡ ಸವಾಲೇ ಸರಿ. ಕ್ರೀಡಾಂಗಣದ ಬಹುಭಾಗ ಈಗಾಗಲೇ ಬಿರುಕು ಬಿಟ್ಟು ವರ್ಷಗಳೇ ಕಳೆದಿವೆ. ಕ್ರೀಡಾಂಗಣದ ಸುರಕ್ಷತೆಯ ಪರೀಕ್ಷೆ ನಡೆಸಿದವರು ಕ್ರೀಡಾಂಗಣದ ಕಟ್ಟಡ ಕೆಡವದೇ ವಿಧಿಯಿಲ್ಲ. ಮರೆತರೆ ಅಪಾಯ ನಿಶ್ಚಿತ ಎಂದಿದ್ದಾರೆ. ಆದರೆ ಸರ್ಕಾರಕ್ಕೆ ಅದರ ಅರಿವಿಲ್ಲ ಎನ್ನಬಹುದಾದಷ್ಟು ಅಸಡ್ಡೆ.
ನಗರದ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕಳೆದ ಅನೇಕ ವರ್ಷಗಳಿಂದ ವ್ಯಾಪ್ಕವಾಗಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ನಗರದಲ್ಲಿ ನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟಗಳು, ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ, ಹೈ.ಕ. ವಿಮೋಚನಾ ದಿನಾಚರಣೆ ಸೇರಿದಂತೆ ಎಲ್ಲ ಪ್ರಮುಖ ಸಮಾರಂಭಗಳಿಗೆ ಕ್ರೀಡಾಂಗಣವೇ ವೇದಿಕೆ. ಆದರೆ ಅದರ ದುರಸ್ತಿಗೆ ಮಾತ್ರ ಸರ್ಕಾರ ಆಸಕ್ತಿ ತೋರಿಲ್ಲ.
ಕ್ರಿಯಾ ಯೋಜನೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲಾ ಕ್ರೀಡಾಂಗಣ ತೆರವುಗೊಳಿಸಿ ಅಲ್ಲಿ ಹೊಸದಾಗಿ ಕ್ರೀಡಾಂ ಗಣ ನಿರ್ಮಾಣಕ್ಕೆ ರು. 22ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಉದ್ದೇಶಿತ ಕ್ರೀಡಾಂಗಣದಲ್ಲಿ ಖೋಖೋ, ಬ್ಯಾಸ್ಕೆಟ್ ಬಾಲ್, ವಾಲಿಬಾಲ್ ಸೇರಿ ವಿವಿಧ ಕ್ರೀಡೆಗಳ ಆಯೋಜನೆಗೆ ಅಗತ್ಯವಿರುವ ಅಂಗಳ ಸಿದ್ಧಪಡಿಸಲು ಚಿಂತಿಸಲಾಗಿತ್ತು.
ಯಾಕೆ ಬೇಕು?: ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆಯೇ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬಂದಿದ್ದು, ಜಿಲ್ಲಾ ಕ್ರೀಡಾಂಗಣದಲ್ಲಿ ಇಷ್ಟೊಂದು ಸೌಲಭ್ಯಗಳ ಅವಶ್ಯಕತೆಯಿಲ್ಲ.
   ಕೇವಲ ತುರ್ತು ಅಗತ್ಯತೆಗಳಿರುವ ಅಂಗಳ ಮತ್ತಿತರೆ ಸೌಲಭ್ಯಗಳಿರುವ ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸಲು ಸೂಚಿಸಲಾಗಿದೆ.ರಾಜ್ಯ ಸರ್ಕಾರದ ಕ್ರೀಡಾ ಇಲಾಖೆಯಲ್ಲಿ ಅಗತ್ಯ ಅನುದಾನದ ಕೊರತೆಯಿದೆ.
  ಅದೇ ಹಿನ್ನೆಲೆಯಲ್ಲಿ ರು. 22 ಕೋಟಿ ವೆಚ್ಚದ ಕ್ರೀಡಾಂಗಣಕ್ಕೆ ಅನುದಾನ ಒದಗಿಸುವುದು ಅಸಾಧ್ಯ ಎಂಬ ಮಾತು ಕೇಳಿಬಂದಿದೆ.
ಇನ್ನು ಕ್ರೀಡಾಂಗಣ ನಿರ್ಮಾಣಕ್ಕೆ ರು. 22ಕೋಟಿ ವ್ಯಯಿಸುವುದು ಸದ್ಯ ಸಾಧುವಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ರಾಜ್ಯ ಸರ್ಕಾರದ ಕ್ರೀಡಾ ಇಲಾಖೆ ಸದ್ಯ ಅಗತ್ಯವಿರುವಷ್ಟೇ ಕ್ರೀಡಾಂಗಣದ ಬೇಕು ಬೇಡಗಳ ಪಟ್ಟಿಯೊಂದಿಗೆ ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸುವಂತೆ ಸೂಚಿಸಿದ್ದು ಜಿಲ್ಲೆಯ ಕ್ರೀಡಾವಲಯಕ್ಕೆ ತೀವ್ರ ಹಿನ್ನಡೆಗೆ ದಾರಿಯಾಗಿದೆ.
ಕ್ರಿಯಾ ಯೋಜನೆ: ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಎಸ್. ಕಣಬರಗಿ, ಸರ್ಕಾರದಿಂದ ಜಿಲ್ಲಾ ಕ್ರೀಡಾಂಗಣದ ರು. 22ಕೋಟಿ ವೆಚ್ಚದ ಕ್ರಿಯಾ ಯೋಜನೆ ಬದಲಿಗೆ ಪರಿಷ್ಕೃತ ಮತ್ತು ಕಡಿಮೆ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಕೆಗೆ ಸೂಚನೆ ಬಂದಿದೆ ಎಂದು ತಿಳಿಸಿದ್ದಾರೆ.


-ವಿಶೇಷ ವರದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.