ರಾಯಚೂರು

ಮಡಿಕೆ ಸದ್ದಡಗಿಸಿ, ಹೆಚ್ಚಾಯ್ತು ಪ್ಲಾಸ್ಟಿಕ್ ಕ್ರಾಂತಿ

Published On :

ಕ.ಪ್ರ. ವಾರ್ತೆ  ಮುದಗಲ್  ಡಿ.27
ವಿವಿಧ ಕ್ಷೇತ್ರಗಳಲ್ಲಿ ಔದ್ಯೋಗಿಕ ಕ್ರಾಂತಿ ಬದಲಾವಣೆ ತಂದರೂ, ಗುಡಿ ಕೈಗಾರಿಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂಬ ಗಾಂಧೀಜಿ ಕಂಡ ಕನಸು ಕನಸಾಗಿಯೇ ಉಳಿಯಿತು.
ಶತಮಾನಗಳಿಂದ ನಡೆದುಕೊಂಡು ಬಂದಿರುವ ಗುಡಿ ಕೈಗಾರಿಕೆಗಳಲ್ಲೊಂದಾದ ಕುಂಬಾರಿಕೆ ಆಧುನಿಕತೆಯ ಭರಾಟೆಗೆ ಸಿಕ್ಕು ನಲುಗಿದೆ. ಪಟ್ಟಣದಲ್ಲಿ ಸುಮಾರು 50 ಕುಂಬಾರರ ಕುಟುಂಬಗಳಿದ್ದು, ಇದರಲ್ಲಿ ಸುಮಾರು 30ಕ್ಕೂ ಅಧಿಕ ಕುಟುಂಬಗಳಿಗೆ ಕುಂಬಾರಿಕೆಯೇ ಕುಲಕಸುಬಾಗಿತ್ತು. ಆದರೆ ಈಗ ಅಧುನಿಕ ವಸ್ತುಗಳಾದ ಪ್ಲಾಸ್ಟಿಕ್ ಕೊಡ, ನೀರು ಸಂಗ್ರಹಿಸುವ ತೊಟ್ಟಿಗಳು, ಚಂಬುಗಳು ಮತ್ತಿತರು ವಸ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಕಂಬಾರರು ತಮ್ಮ ಕಸುಬಿನಿಂದ ದೂರ ಸರಿದಿದ್ದಾರೆ.
ಕುಂಬಾರಿಕೆ ಬಿಟ್ಟು ಅನ್ಯ ಕೆಲಸಗಳ ಮೊರೆ: ಪ್ಲಾಸ್ಟಿಕ್ ಕ್ರಾಂತಿಯಿಂದಾಗಿ 30 ಕುಟುಂಬಗಳು ಉಪಜೀವನಕ್ಕಾಗಿ ಮೂಲ ವೃತ್ತಿಯನ್ನು ಕೈ ಬಿಟ್ಟು ಹೋಟೆಲ್, ಪಾನ್ ಬೀಡಾ ಅಂಗಡಿ, ಕೂಲಿ ಕೆಲಸ ಮಾಡುತ್ತಿದ್ದರೆ ಇನ್ನು ಕಲವರು ಬೇರೆ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಗ್ರಾಮದಲ್ಲಿ ಉಳಿದ ಮೂರು ಕುಟುಂಬಗಳು ಮಾತ್ರ ಕುಂಬಾರಿಕೆಯನ್ನು ಮುಂದುವರಿಸಿದ್ದಾರೆ.
ಇನ್ನುಳಿದ ಕುಂಬಾರ ಕುಟುಂಬಗಳು ತಮ್ಮ ಕುಲಕಸುಬನ್ನು ಮುಂದುವರಿಸಲು ಸಾಕಷ್ಟು ತೊಂದರೆ ಜೊತೆಗೆ ಸಾರ್ವಜನಿಕ ವಲಯದಲ್ಲಿ ಕುಂಬಾರಿಕೆ ದುಬಾರಿ ಇದ್ದುದರಿಂದ ಮೂಲ ಕಸುಬನ್ನು ಕಳೆದುಕೊಳ್ಳುವಂತಾಗಿದೆ. ಗಡಿಗೆಗಳನ್ನು ಸುಡಲು ಕಟ್ಟಿಗೆ, ಮಣ್ಣು ದುಬಾರಿಯಾಗಿದ್ದು ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದ್ದರಿಂದ ಕುಂಬಾರರು ಜೀವನಕ್ಕಾಗಿ ಅನ್ಯ ಕೆಲಸಗಳಿಗೆ ಮೊರೆ ಹೋಗುತ್ತಿದ್ದಾರೆ.
ಮಣ್ಣಿನ ವಸ್ತುಗಳಿಗೆ ಬೇಡಿಕೆಯಿಲ್ಲ: ಪ್ಲಾಸ್ಟಿಕ್ ಕೊಡ, ತಂಬಿಗೆ, ಗ್ಲಾಸ್ ಸೇರಿದಂತೆ ನೀರು ಸಂಗ್ರಹ ಮಾಡಲು ಪ್ಲಾಸ್ಟಿಕ್ ಬ್ಯಾರಲ್‌ಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದರಿಂದ ಮಣ್ಣಿನಿಂದ ತಯಾರಿಸಿದ ವಸ್ತುಗಳಿಗೆ ಬೆಲೆ ಇಲ್ಲದಂತಾಗಿದೆ. ಕೇಂದ್ರ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ್ದರೂ ಬಳಕೆ ನಿಂತಿಲ್ಲ, ಪ್ಲಾಸ್ಟಿಕ್ ವಸ್ತುಗಳಿಗೆ ಭಾರಿ ಬೇಡಿಕೆ ಇದೆ.
ನೀರು ಸಂಗ್ರಹ ಮಾಡುವ ಗಡಿಗೆ, ಕೊಡಗಳು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತಿದ್ದರಿಂದ ಮಣ್ಣಿನ ಕೊಡ, ಗಡಿಗೆಗಳನ್ನು ಕೊಳ್ಳುವವರಿಲ್ಲ.   ಮದುವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಂಭಕ್ಕಾಗಿ ಮಣ್ಣಿನ ಮಡಿಕೆಗಳನ್ನು ತಯಾರಿಸಲಾಗುತ್ತಿತ್ತು. ಪ್ಲಾಸ್ಟಿಕ್, ಸ್ಟೀಲ್ ಕೊಡಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೆ ಸಾಮೂಹಿಕ ಮದುಗೆಗಳು ಹೆಚ್ಚು ನಡೆಯುತ್ತಿದ್ದರಿಂದ ಮಡಿಕೆಗಳ ಬಳಕೆ ಕಡಿಮೆಯಾಗಿದೆ.



-ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.