ರಾಯಚೂರು

ಕಳವು ಆರೋಪ: ಅಂಗನವಾಡಿ ಸಿಬ್ಬಂದಿ ಅಮಾನತಿಗೆ ಒತ್ತಾಯ

Published On :

ಮುದಗಲ್: ಇಲ್ಲಿಗೆ ಸಮೀಪದ ಕನ್ನಾಪುರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಹಾಗೂ ಮೇಲ್ವಿಚಾರಕಿಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ದಲಿತ ಸಂಘಟನೆ ಕಾರ್ಯಕರ್ತರು ಸಿಡಿಪಿಒ ಪ್ರಭಾಕರ ಅವರಿಗೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪಟ್ಟು ಹಿಡಿದ ಘಟನೆ ಭಾನುವಾರ ನಡೆದಿದೆ.
ಇಲ್ಲಿನ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಮಕ್ಕಳಿಗೆ ಪೂರೈಸಬೇಕಾದ ಅಕ್ಕಿ, ಗೋಧಿ ಸೇರಿದಂತೆ ವಿವಿಧ ದವಸ ಧಾನ್ಯಗಳನ್ನು ಹಾಡ ಹಗಲೇ ತಮ್ಮ ಮನೆಗೆ ಸಾಗಿಸುತ್ತಿರುವಾಗ ಗ್ರಾಮಸ್ಥರು ಅದನ್ನು ಕಂಡು ಹಿಡಿದು ಕಳೆದ 31ರಂದು ಸಂಬಂಧಿಸಿದ ಅಧಿಕಾರಿಗಳು, ಪೊಲೀಸರು ಮತ್ತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಮೇರೆಗೆ ಪೊಲೀಸರು ಹಾಗೂ ಇಲಾಖೆ ಮೇಲ್ವಿಚಾರಕರು ಕೂಡ ಪರಿಶೀಲಿಸಿದ್ದರು. ಘಟನೆ ಕುರಿತು ಕಾರ್ಯಕರ್ತೆಯ ಮನೆಯಲ್ಲಿಯ ಆಹಾರ ಧಾನ್ಯ ಶೇಖರಣೆ ಚಿತ್ರದೊಂದಿಗೆ ವರದಿ ಮಾಡಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆ ಕಾರ್ಯ ವೈಖರಿ ಬಗ್ಗೆ ಗ್ರಾಮದ ಜನತೆ ಮಕ್ಕಳಿಗೆ ಸಮರ್ಪಕವಾಗಿ ನಿಗದಿತವಾಗಿ ಆಹಾರ ನೀಡುವುದಿಲ್ಲ, ಆಹಾರ ಧಾನ್ಯಗಳನ್ನು ಮಾರಿಕೊಳ್ಳುವುದು, ಗರ್ಭಿಣಿಯರು, ಬಾಣಂತಿಯರಿಗೆ ಸರಿಯಾಗಿ ಆಹಾರ ಧಾನ್ಯ ನೀಡುವುದಿಲ್ಲ ಎಂಬುದು ಸೇರಿದಂತೆ ಆರೋಪ ಅಧಿಕಾರಿಗಳ ಗಮನ ಸೆಳೆದರು.
ಗ್ರಾಮಸ್ಥರ ಆರೋಪಗಳನ್ನು ಆಲಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಅಂಗನವಾಡಿ ಕಾರ್ಯಕರ್ತೆ ಮೇಲೆ ಶಿಸ್ತು ಪ್ರಾಧಿಕಾರಕ್ಕೆ ಶಿಸ್ತಿನ ಕ್ರಮ ಜರುಗಿಸಲು ವರದಿ ಮಾಡುವುದಾಗಿ ಹೇಳುತ್ತಿದ್ದಂತೆ ಸ್ಥಳದಲ್ಲಿಯೇ ಕಾರ್ಯಕರ್ತೆಹಾಗೂ ಮೇಲ್ವಿಚಾರಕಿಯನ್ನು ಅಮಾನತು ಮಾಡಬೇಕೆಂದು ಪಟ್ಟು ಹಿಡಿದರು. ಈ  ಸಂಬಂಧ ಅಧಿಕಾರಿಗಳು ಕಾರ್ಯಕರ್ತೆ ರೇಣುಕಾಗೆ ಕಡ್ಡಾಯ ರಜೆ ಹಾಕಲು ಸೂಚಿಸಿ, ಮೇಲ್ವಿಚಾರಕಿಗೆ ಪಕ್ಕದ ಅಂಗನವಾಡಿ ಕಾರ್ಯಕರ್ತೆ ಉಸ್ತುವಾರಿಗೆ ಸೂಚಿಸಲು ಆದೇಶಿಸಿದರು. ಮೇಲ್ವಿಚಾರಕಿ ಹೇಮಲತಾಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಹೇಳಿದರು.
ದಸಂಸ ಮುಖಂಡ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ದುರಗಪ್ಪ ಪೂಜಾರಿ, ಪರಮಣ್ಣ, ಹನುಮಂತ ಹೆಬ್ಬಾಳ, ಗ್ರಾಮಸ್ಥರಾದ ಶಂಕ್ರಯ್ಯ ಗುರುಗಳು, ಲಕ್ಷ್ಮಣ ಮೇಗೂರ, ಪರಮಯ್ಯ, ಬಾಳಯ್ಯ, ಶಂಕ್ರಪ್ಪ ಮೇಗೂರ, ಗುರುನಂದಯ್ಯ, ಶಂಕ್ರಮ್ಮ, ಹುಲಗಮ್ಮ, ನಾಗಮ್ಮ, ಮಹಿಬೂಬ್ಬಿ, ಹೊಳೆಯಮ್ಮ, ಅಫೀಜಾಬಿ, ಕರಿಯಮ್ಮ ಸೇರಿದಂತೆ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.