ನಿವೃತ್ತಿ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ
ಮುದಗಲ್: ಜವಾಹರ ನವೋದಯ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ, ಸಿಬ್ಬಂದಿಗೆ 1972ರ ಸಿಸಿಎಸ್ ನಿವೃತ್ತಿ ವೇತನ ನೀಡುವಂತೆ ಆಗ್ರಹಿಸಿ ಪಟ್ಟಣ ಸಮೀಪದ ಕನ್ನಾಪುರಹಟ್ಟಿ ನವೋದಯ ವಿದ್ಯಾಲಯದಲ್ಲಿ ಬುಧವಾರ ಶಿಕ್ಷಕರು, ಸಿಬ್ಬಂದಿ ವರ್ಗ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
1986ರ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ದೇಶದಲ್ಲಿ 600 ನವೋದಯ ವಿದ್ಯಾಲಯಗಳಲ್ಲಿ ಸುಮಾರು 20 ಸಾವಿರ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.
ನವೋದಯ ವಿದ್ಯಾಲಯ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ದೇಶದಲ್ಲಿ ಉತ್ತಮ ಹೆಸರು ಗಳಿಸಿದೆ. ಆದರೂ ತಮಗೆ ಸಿಗಬೇಕಾದ ಸೌಲಭ್ಯ ಪಡೆಯಲು ಸಿಬ್ಬಂದಿ ಹರಸಹಾಸ ಪಡಬೇಕಾಗಿದೆ.
ಮಲತಾಯಿ ಧೋರಣೆ: ನವೋದಯದ ಸೋದರ ಸಂಸ್ಥೆಗಳಾದ ಕೇಂದ್ರೀಯ ವಿದ್ಯಾಲಯ, ಟಿಬೇಟಿಯನ್ ವಿದ್ಯಾಲಯ, ಎನ್ಸಿಈಟಿ ಯಂತಹ ಸಮಾನಾಂತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ನಿವೃತ್ತಿ ವೇತನ ನೀಡುವ ಸರ್ಕಾರ, ಜವಾಹರ ನವೋದಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ನೀಡದೇ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಸಿಸಿಎಸ್ ವೇತನ ಜಾರಿವರೆಗೆ ಮುಷ್ಕರ: ಭಾರತ ಸರ್ಕಾರದಿಂದ ಘಟಿತವಾದ ವೈ.ಎನ್. ಚತುರ್ವೇದಿ ಆಯೋಗ, 154ನೇ ಸಂಸತ್ ಸಮಿತಿ ವರದಿ, ಮಾ.2, 2005ರಂದು ಲೋಕಸಭೆ, ಮಾ.3, 2004ರಂದು ರಾಜ್ಯಸಭೆಯು ಸರ್ವಾನುಮತದಿಂದ ಸಿಸಿಎಸ್ 1972ರ ನಿವತ್ತಿ ವೇತನ ನೀಡಬೇಕೆಂದು ಒಕ್ಕೊರಲಿನಿಂದ ಶಿಫಾರಸು ಮಾಡಿದೆ.
ಆದರೂ ಕೇಂದ್ರ ಸರ್ಕಾರ ಮಾತ್ರ ನಿರ್ಲಕ್ಷ್ಯ ತಾಳಿದೆ. ಸಿಸಿಎಸ್ ವೇತನ ಜಾರಿ ಮಾಡುವವರೆಗೆ ಅನಿರ್ದಿಷ್ಟಾವಧಿ ಮುಷ್ಕರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ನವೋದಯ ಸಿಬ್ಬಂದಿ ಸಂಘ ಪಟ್ಟು ಹಿಡಿದರು.
ತರಗತಿಗಳನ್ನು ಬಹಿಷ್ಕರಿಸಿದ ಶಿಕ್ಷಕರು, ಸಿಬ್ಬಂದಿ ವರ್ಗ ನವೋದಯ ವಿದ್ಯಾಲಯದ ದ್ವಾರಬಾಗಿಲ ಬಳಿ ಕುಳಿತು ಧರಣಿ ನಡೆಸಿದರು. ಫೆ.6ರಿಂದ ದೇಶಾದ್ಯಂತ ನವೋದಯ ಸಿಬ್ಬಂದಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಬಸವರಾಜ ತಿಳಿಸಿದರು. ಧರಣಿಯಲ್ಲಿ ಪ್ರಭಾರಿ ಪ್ರಾಚಾರ್ಯ ರವೀಂದ್ರ, ಶಿಕ್ಷಕರಾದ ಎ.ಕೆ. ಬಸವರಾಜ, ಬಿ.ಎಸ್. ಪಾಟೀಲ್,ಡಿ.ಎಚ್.ಚವ್ಹಾಣ, ಎಸ್.ಎಂ. ನೂಲಕರ್, ಶ್ರೀಧರಗುಡಿ, ಎಸ್.ಎ. ಕೋರಿ ಅನೇಕ ಸಿಬ್ಬಂದಿ ಧರಣಿಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

