ರಾಯಚೂರು

ನಿರೀಕ್ಷೆ ಹುಸಿಗೊಳಿಸಿದ ಬಜೆಟ್: ಜಿಲ್ಲಾ ಕಾಂಗ್ರೆಸ್ ತೀವ್ರ ಆಕ್ರೋಶ

Published On :

ರಾಯಚೂರು: ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ ಜನರ ನಿರೀಕ್ಷೆ ಹುಸಿಗೊಳಿಸಿದೆ. ಇದೊಂದು ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಿದ ಆಯವ್ಯಯವಾಗಿದ್ದು, ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ವಸಂತಕುಮಾರ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಸಿಎಂ ಜಗದೀಶ್ ಶೆಟ್ಟರ್ ನಿರ್ದಿಷ್ಟ ಮುಂದಾಲೋಚನೆ, ಗೊತ್ತುಗುರಿಯಿಲ್ಲದೇ ಬಜೆಟ್ ತಯಾರಿಸಿರುವುದು ಸ್ಪಷ್ಟವಾಗಿದೆ. ಈ ಹಿಂದೆ ಯಡಿಯೂರಪ್ಪ, ಸದಾನಂದಗೌಡರು ಮತ್ತು ಸದ್ಯ ಶೆಟ್ಟರ್ ಅವರೆಲ್ಲರೂ ರಾಜ್ಯದ ಹಣಕಾಸಿನ ಸ್ಥಿತಿಗತಿ ಮತ್ತು ಸಂಪನ್ಮೂಲಗಳ ಅರಿವಿಲ್ಲದೇ ಬಜೆಟ್ ಮಂಡಿಸಿರುವುದು ಸುಸ್ಪಷ್ಟ ಎಂದು ಟೀಕಿಸಿದರು.
ಮರೆತಿದೆ: ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ ಮತದಾರರಿಗೆ ವಿವಿಧ ಆಸೆ ಆಮಿಷಗಳನ್ನೊಡ್ಡಿ ಬಿಜೆಪಿ ಅಧಿಕಾರವಹಿಸಿಕೊಂಡಿದ್ದು, ಪ್ರಣಾಳಿಕೆಯಲ್ಲಿ ತಾನೇ ನೀಡಿದ್ದ ಬಡವರಿಗೆ ಟಿವಿ, ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಿಕೆಯಂಥ ಕಾರ್ಯಕ್ರಮಗಳನ್ನು ಮರೆತಿದೆ ಎಂದು ದೂರಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮಂಡಿಸಿದ ಎಲ್ಲ ಬಜೆಟ್‌ಗಳಲ್ಲಿ ಆರೆಸ್ಸೆಸ್ ಅಣತಿಯಂತೆಯೇ ಮಠಮಾನ್ಯಗಳಿಗೆ ಕೋಟ್ಯಂತರ ರು. ನೀಡಲಾಗಿದೆ. ಕೇವಲ ಮಠಮಾನ್ಯಗಳಿಗೆ ಹಣ ನಿಗದಿ ಮಾಡಲಾಗಿದೆಯೇ ವಿನಾ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ ಎಂದು ಟೀಕಿಸಿದರು.
ಎಡವಿದೆ:  ಮಠಮಾನ್ಯಗಳಿಗೆ ಕಳೆದ ಮೂರು ವರ್ಷಗಳಲ್ಲಿ ಶೇ.100ರಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಆ ಮೊತ್ತ ಸಂಪೂರ್ಣ ಬಳಕೆ ಮಾಡಲಾಗಿದೆ. ಆದರೆ ಅದೇ ವೇಳೆ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟ ಅನುದಾನದ ಬಳಕೆಯಲ್ಲಿ ಸರ್ಕಾರ ಸಂಪೂರ್ಣ ಎಡವಿದೆ ಎಂದು ಆರೋಪಿಸಿದರು.
ಬಜೆಟ್‌ನಲ್ಲಿ ವಿವಿಧ ಯೋಜನೆಗಳನ್ನು ಪ್ರಕಟಿಸುವ ಮೂಲಕ ಮತದಾರರನ್ನು ವಂಚಿಸುವ ಕಾರ್ಯ ಸರ್ಕಾರ ಮಾಡುತ್ತಿದೆ. ತಾಲೂಕು ಕೇಂದ್ರಗಳಿಗೆ ಬಹುದಿನಗಳಿಂದ ಬೇಡಿಕೆಯಿತ್ತು. ಆದರೆ ಚುನಾವಣೆಯ ದೃಷ್ಟಿಯಿಂದ ತಾಲೂಕು ಕೇಂದ್ರಗಳನ್ನು ಬಜೆಟ್‌ನಲ್ಲಿ ಸೇರಿಸಿ ಪ್ರಕಟಿಸಲಾಗಿದೆ ಎಂದು ಟೀಕಿಸಿದರು.
ಲೇವಡಿ: ಬಜೆಟ್‌ನ ಗಾತ್ರ ಹೆಚ್ಚಳ ಮಾಡುವುದೇ ಸಾಧನೆ ಎಂದುಕೊಂಡಿರುವ ಬಿಜೆಪಿ ಸರ್ಕಾರ ಅದರ ಅನುಷ್ಠಾನದ ಬಗ್ಗೆ ಜನತೆಗೆ ವಿವರಿಸಬೇಕಿದೆ. ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳ ಅನುಷ್ಠಾನದಲ್ಲಿ ಕಳೆದ ಮೂರು ವರ್ಷಗಳಲ್ಲಿ ಶೇ.50ರ ಗಡಿ ದಾಟಿಲ್ಲ. ಗುರಿ ಸಾಧನೆಯಾಗದೇ ಬಜೆಟ್‌ನಿಂದ ಪ್ರಯೋಜನವಿಲ್ಲ ಎಂದು ಲೇವಡಿ ಮಾಡಿದರು.
ಬಿಜೆಪಿ ಸರ್ಕಾರಕ್ಕೆ ಬಜೆಟ್ ಪೂರ್ವದಲ್ಲಿ ರಾಜ್ಯದ ಪ್ರಾಥಮಿಕ ಹಣಕಾಸು ಪರಿಸ್ಥಿತಿಯ ಬಗ್ಗೆ ಮಾಹಿತಿಯಿಲ್ಲದಿರುವುದು ಪ್ರಸಕ್ತ ಬಜೆಟ್ ಅಷ್ಟೇ ಅಲ್ಲ ಇದುವರೆಗೆ ಆ ಪಕ್ಷದ ಬೇರೆ ಬೇರೆ ಸಿಎಂಗಳು ಮಂಡಿಸಿದ ಬಜೆಟ್‌ನಿಂದ ಸಾಬೀತಾಗಿದೆ. ಪ್ರಬುದ್ಧ ಮತದಾರರು ಎಂದಿಗೂ ಇಂಥ ವಂಚನೆಯ ಕಾರ್ಯ ಮೆಚ್ಚುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶಿವಮೂರ್ತಿ, ಕೆ.ಶಾಂತಪ್ಪ, ತಾಯಣ್ಣ ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.