ಬೂದಿ ನಿರ್ವಹಣೆ ಘಟಕ ಕುಸಿತ; 8ನೇ ಘಟಕ ಸ್ಥಗಿತ
ರಾಯಚೂರು: ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಶನಿವಾರ ರಾತ್ರಿ ಬೂದಿ ನಿರ್ವಹಣೆ ಘಟಕದ ಕುಸಿದು ಅವಘಡ ಸಂಭವಿಸಿದ್ದು, ಇದರಿಂದ 8ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಇನ್ನು ಎರಡು-ಮೂರು ತಿಂಗಳು ವಿದ್ಯುತ್ ಉತ್ಪಾದನೆಗೆ ಈ ಘಟಕ ಲಭ್ಯಾವಾಗುವುದು ಅನುಮಾನ.
ವಿದ್ಯುತ್ ಕೇಂದ್ರದ 8ನೇ ಘಟಕದ ಎಲೆಕ್ಟ್ರೋ ಸ್ಟ್ಯಾಟಿಕ್ ಪ್ರೆಸಿಪಿಟೇಟರ್ ಯಂತ್ರದ ಎರಡು ಮಾರ್ಗಗಳಲ್ಲಿ ಕುಸಿತ ಕಂಡುಬಂದಿದ್ದು, ಘಟನೆ ವೇಳೆ ಸ್ಥಳದಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಘಟನೆಯಿಂದ ರಾಜ್ಯದ ಬೇಸಿಗೆಯ ವಿದ್ಯುತ್ ಕ್ಷಾಮದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆಯ ಕುಸಿತಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರತಿದಿನ ಸುಮಾರು 250 ಮೆವ್ಯಾ ವಿದ್ಯುತ್ ಉತ್ಪಾದಿಸುತ್ತಿದ್ದ 8ನೇ ಘಟಕದಲ್ಲಿ ಶನಿವಾರ ರಾತ್ರಿ ದ್ರವರೂಪದಲ್ಲಿ ಹರಿದು ಬರುವ ಬೂದಿಯನ್ನು ಘನೀಕೃತಗೊಳಿಸಿ ಒಣಗಾಳಿ ಹೂರಹಾಕುವ ಯಂತ್ರ ಎರಡು ಭಾಗಗಳಾಗಿ ಕುಸಿದಿದೆ. ಇದರಿಂದ ಅನಿರ್ದಿಷ್ಟ ಕಾಲದವರೆಗೆ ವಿದ್ಯುತ್ ಉತ್ಪಾದನೆ ಅಸಾಧ್ಯ ಎಂಬ ಮಾತು ಕೇಳಿಬಂದಿದೆ.
ಅಧಿಕಾರಿಗಳಲ್ಲಿ ಗೊಂದಲ: ಕಾರ್ಯಾರಂಭಿಸಿದ 8ನೇ ಘಟಕದ ಯಂತತ್ರಗಳು ಕೆಲವೇ ತಿಂಗಳಿನಲ್ಲಿ ಕುಸಿದಿರುವುದು ಅಧಿಕಾರಿಗಳನ್ನು ಗೊಂದಲಕ್ಕೆ ಬೀಳಿಸಿದೆ. ಆರ್‌ಟಿಪಿಎಸ್‌ನಲ್ಲಿರುವ ಮೊದಲಿನ 7 ಘಟಕಗಳಲ್ಲಿ ಇಂಥ ಅವಘಡ ಒಮ್ಮೆಯೂ ಸಂಭವಿಸಿರಲಿಲ್ಲ. 8ನೇ ಘಟಕದಲ್ಲಿ ಇಂಥ ಘಟನೆ ನಡೆದಿರುವುದು ಅದರ ಕಾಮಗಾರಿಯತ್ತಲೇ ಅನುಮಾನದಿಂದ ನೋಡುವಂತಾಗಿದೆ.
ಈ ಘಟಕದ ಕಾಮಗಾರಿಯನ್ನು ಬಿಎಚ್‌ಇಎಲ್ ಸಂಸ್ಥೆ ವಹಿಸಿಕೊಂಡಿದ್ದು, ಗುಣಮಟ್ಟದ ಬಗ್ಗೆಯೇ ಅಧಿಕಾರಿಗಳಲ್ಲಿ ಸಂಶಯ ಮೂಡಿದ್ದು, ಈ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಆರ್‌ಟಿಪಿಎಸ್ ಮೂಲಗಳು ಹೇಳಿವೆ.
ಆರ್‌ಟಿಪಿಎಸ್‌ನ ಇನ್ನುಳಿದ 7 ಘಟಕಗಳ ಪೈಕಿ ಎರಡು ಘಟಕಗಳು ಈಗಾಗಲೇ 25ವರ್ಷ ಪೂರೈಸಿವೆ. ತಾಂತ್ರಿಕ ದೋಷಗಳ ಹೊರತಾಗಿ ಬೂದಿ ನಿರ್ವಹಣೆ ವಿಭಾಗದಲ್ಲಿ ಎಂದೂ ಇಂಥ ಘಟನೆ ಸಂಭವಿಸಿಲ್ಲ. ಆದರೆ 8ನೇ ಘಟಕದಲ್ಲಿ ಬೂದಿ ನಿರ್ವಹಣೆಯ ಘಟಕದಲ್ಲಿ ಅವಘಡ ಸಂಭವಿಸುವ ಮೂಲಕ ರಾಜ್ಯದ ಜನತೆಗೆ ಮತ್ತಷ್ಟು ವಿದ್ಯುತ್ ಕೊರತೆಯ ಬಿಸಿ ತಟ್ಟಲಿದೆ. ಈಗಾಗಲೇ ರಾಜ್ಯದಲ್ಲಿ ಬಹುತೇಕ ಎಲ್ಲ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ ಕಂಡಿದೆ. ಬೇಸಿಗೆಯ ಅಂತ್ಯದವರೆಗೆ ರಾಜ್ಯ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೇಲೆಯೇ ಅವಲಂಬಿತವಾಗಿದೆ.
ರಾಜ್ಯದ ಬಳ್ಳಾರಿ ಮತ್ತು ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೇಲೆಯೇ ಮುಂದಿನ ದಿನಗಳಲ್ಲಿ ವಿದ್ಯುತ್‌ಗಾಗಿ ಒತ್ತಡ ಹೆಚ್ಚಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

