ಎಸ್ಸಿ- ಎಸ್ಟಿ ಸಮಾವೇಶಕ್ಕೆ 25 ಸಾವಿರ ಕಾರ್ಯಕರ್ತರು (ಸುದ್ದಿ ಸಂಕ್ಷೇಪ)
ಯಾದಗಿರಿ: ರಾಯಚೂರಿನಲ್ಲಿ ಬಿಎಸ್ಸಾರ್ ಕಾಂಗ್ರೆಸ್ನಿಂದ ಫೆ.13ರಂದು ನಡೆಯಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬೃಹತ್ ಸಮಾವೇಶಕ್ಕೆ ಜಿಲ್ಲೆಯಿಂದ 25 ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಶಂಕ್ರಣ್ಣ ವಣಿಕ್ಯಾಳ್ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಅಧ್ಯಕ್ಷ ಶ್ರೀರಾಮುಲು ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ರಾಜ್ಯಾದ್ಯಂತ ಸುಮಾರು 5 ಲಕ್ಷಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಬಾಂಧವರು ಸೇರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನತೆ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಲು ಹಾಗೂ ಅದಕ್ಕೆ ಮುಂದೆ ಪಕ್ಷ ಅಧಿಕಾರಕ್ಕೆ ಬಂದರೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂಬ ಕುರಿತು ಸಮಾವೇಶದಲ್ಲಿ ಚಿಂತನ- ಮಂಥನ ನಡೆಸಲಾಗುವುದು ಎಂದರು.
'ಕೆಜೆಪಿಗೆ ಎಲ್ಲರ ಬೆಂಬಲ'
ಯಾದಗಿರಿ: ಎಲ್ಲ ವರ್ಗದ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಜನನಾಯಕರಾಗಿರುವ ಯಡಿಯೂರಪ್ಪ ನೇತೃತ್ವದ ಕೆಜೆಪಿಗೆ ಎಲ್ಲ ಸಮುದಾಯಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಕೆಜೆಪಿ ಮುಂಖಡ ಡಾ. ಶರಣಭೂಪಾಲರಡ್ಡಿ ನಾಯ್ಕಲ್ ಹೇಳಿದರು.
ನಗರದಲ್ಲಿ ಕೆಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ಯಡಿಯೂರಪ್ಪ ನೇತೃತ್ವದ ಕೆಜೆಪಿ ರಾಜ್ಯದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಸಾಕಷ್ಟು ಜನರು ನೂತನ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬರುವ ಚುನಾವಣೆಯಲ್ಲಿ ಕೆಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಮಂತ್ರಿ ವಜಾಕ್ಕೆ ಬಿಜೆಪಿ ಆಗ್ರಹ
ಶಹಾಪುರ: ಕೇಂದ್ರ ಸರ್ಕಾರದ ಗೃಹಮಂತ್ರಿ ಸುಶೀಲ್ ಕುಮಾರ ಶಿಂಧೆ ತಮ್ಮ ಹೇಳಿಕೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ಹಿಂದೂ ಭಯೋತ್ಪಾದಕರನ್ನು ತಯಾರಿಸುತ್ತವೆ ಎನ್ನುವ ಆರೋಪವನ್ನು ಖಂಡಿಸಿದ ಇಲ್ಲಿಯ ಬಿಜೆಪಿ ಘಟಕ, ತಹಸೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಶಿಂಧೆರನ್ನು ವಜಾಗೊಳಿಸುವೆಂತೆ ಒತ್ತಾಯಿಸಿದೆ.
ಬಿಜೆಪಿ ತಾಲೂಕಾಧ್ಯಕ್ಷ ಮಲ್ಲಣ್ಣ ಮಡ್ಡಿ ಮಾತನಾಡಿ, ಹಿಂದೂ ಇತಿಹಾಸದಲ್ಲಿ ಭಯೋತ್ಪಾದನೆ ಎನ್ನುವ ಮಾತೆ ಇಲ್ಲ. ಹಿಂದುತ್ವದಲ್ಲಿ ಉದಾರ ವಿಚಾರ, ಸರ್ವರಿಗೂ ಸಮಗೌರವ, ತಮ್ಮ ಮತ-ಪಂಥ- ಆಚಾರ ಪದ್ಧತಿಯ ಪಾಲನೆಗೆ ಸ್ವಾತಂತ್ರ್ಯ ನೀಡುತ್ತ ಬಂದಿದೆ.
ಯಲ್ಲಯ್ಯ ನಾಯಕ ವನದುರ್ಗ, ನಂದಣ್ಣ ಮೂಡಬೂಳ, ಮಲ್ಲಿಕಾರ್ಜುನ ಚಿಲ್ಲಾಳ, ಭೀಮರಾಯ ಜಂಗಳಿ, ತ್ರಿಶೂಲ ಹವಾಲ್ದಾರ, ದೇವು ಕೊನೇರ, ಮಲ್ಲಪ್ಪ ಗೋಗಿ, ಸುಧೀರ ಚಿಂಚೋಳಿ, ಸಂಜೀವರಡ್ಡಿ ಬೂದನೂರ, ಜಟ್ಟೆಪ್ಪ ಕೆಂಭಾವಿ, ಅಮರೇಶಗೌಡ ಹೋತಪೇಟ, ಶಾಂತಕುಮಾರ, ಹುಸೇನಬಾಷಾ, ದೇವಿಂದ್ರ ನಾಶಿ, ಹಣಮಂತ್ರಾಯ ಗುರಿಕಾರ, ರಾಮಣ್ಣ ಸಾದ್ಯಾಪುರ, ರಾಜಕುಮಾರ ಸಲಾದಪುರ ಇದ್ದರು.
ಕೇಂದ್ರದ ಮಲತಾಯಿ ಧೋರಣೆಗೆ ಖಂಡನೆ
ಶಹಾಪುರ: ಪಟ್ಟಣದ ಹೊರವಲಯದ ನವೋದಯ ಶಾಲೆಯ ಶಿಕ್ಷಕರು, ಇತರೆ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿಬ್ಬಂದಿ, ಸುಮಾರು 600 ಜವಾಹರ ನವೋದಯ ವಿದ್ಯಾಲಯಗಳು ವಸತಿ ಶಾಲೆಗಳಾಗಿದ್ದು, ದೇಶಾದ್ಯಂತ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ, ಮಕ್ಕಳ ಅಭಿವೃದ್ಧಿ ಸಚಿವಾಲಯದಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಆರಂಭವಾಗಿ 29 ವರ್ಷ ಕಳೆದರೂ ಸೇವೆಯಲ್ಲಿರುವ ಸಿಬ್ಬಂದಿಗೆ ಪಿಂಚಣಿ, ವಿಶೇಷ ವಸತಿ ಭತ್ಯೆ, ವರ್ಗಾವಣೆ ನಿಯಮ, ಬಡ್ತಿ ಸೌಲಭ್ಯ ಇತ್ಯಾದಿಗಳನ್ನು ನೀಡುತ್ತಿಲ್ಲ. ಈ ಕುರಿತು ನವೋದಯ ವಿದ್ಯಾಲಯಗಳ ಜಂಟಿ ಕಾರ್ಯ ಸಮಿತಿ ಪ್ರತಿಭಟನೆಗೆ ಕರೆ ನೀಡಿದ್ದು ಧರಣಿ ನಡೆಸಲಾಗುತ್ತಿದೆ ಎಂದರು. ಇದಕ್ಕೆ ಕ್ರಮ ಕೈಗೊಳ್ಳದಿದ್ದರೆ ಫೆ.6ರಿಂದ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದೆಂದು ಸಂಘದ ಅಧ್ಯಕ್ಷ ತಿಳಿಸಿದ್ದಾರೆ.
ವ್ಯಸನದಿಂದ ದೂರವಿದ್ರೆ ರೋಗಮುಕ್ತ ಬದುಕು..
ಯಾದಗಿರಿ: ಶುದ್ಧ ಗಾಳಿ, ಯಥೇಚ್ಚ ನೀರು ಬಳಕೆ, ಹಿತಮಿತ ಆಹಾರ ಸೇವನೆ, ವ್ಯಸನ ಮುಕ್ತ ಜೀವನ ನಿರ್ವಹಣೆ ಮಾಡಿದರೆ ಸರ್ವ ರೋಗಗಳಿಂದ ದೂರವಿರಬಹುದು ಎಂದು ಡಾ. ಶಾಂತವೀರ ಸುಂಕದ ಹೇಳಿದರು. ತಾಲೂಕಿನ ಯಲ್ಹೇರಿ ಗ್ರಾಮದಲ್ಲಿ ವಿಕಾಸ ಅಕಾಡೆಮಿಯಿಂದ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮಾಹಿತಿ ಹಾಗೂ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ಜಾಗೃತಿ ಕುರಿತು ಅವರು ಮಾತನಾಡಿದರು. ಅಡುಗೆ ಮನೆಯಲ್ಲಿಯ ಬಳಸುವ ಪದಾರ್ಥಗಳ ಔಷಧೀಯ ಗುಣಗಳ ಮಾಹಿತಿ ನೀಡಿ, ಈ ಮನೆ ಮದ್ದುಗಳ ಬಳಕೆಯಿಂದ ಸಾಮಾನ್ಯ ಕಾಯಿಲೆಗಳಿಂದ ಗುಣಮುಖರಾಗಬಹುದು. ದುಶ್ಚಟಗಳಿಂದ ದೂರವಿದ್ದರೆ ರೋಗಗಳೂ ದೂರವಿರುತ್ತವೆ ಎಂದು ಹೇಳಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಯಲ್ಹೇರಿ, ಡಾ. ರಾಮರಾವ ಮಾತನಾಡಿದರು. ಗ್ರಾಮದ ಸಂಚಾಲಕ ಬಸವರಾಜ ಕಣೇಕಲ್, ನಿರಂಜನ ಸಂಬರ್, ಜಗನಾಥರೆಡ್ಡಿ ಪಾಟೀಲ್, ಸಿದ್ದಣ್ಣ ದಳಪತಿ, ಶಂಕ್ರಣ್ಣ ಕಲಾಲ್, ತಾಯಪ್ಪ ವಂಕಮನಿ, ಶರಣಪ್ಪಗೌಡ ಮಾಲಿಪಾಟೀಲ್, ಶಿಕ್ಷಕಿ ರಾಮಲಮ್ಮ, ಮಂಜುಳಾ ಇದ್ದರು. ನಂತರ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. 500ಕ್ಕೂ ಹೆಚ್ಚು ಜನರು ಪಾಲ್ಗೊಂಡು ಅಲೋಪತಿ, ಹೋಮಿಯೋಪತಿ, ಆಯುರ್ವೇದದ ಉಚಿತ ಚಿಕಿತ್ಸೆ ಲಾಭ ಪಡೆದರು. ಡಾ. ಶಾಂತವೀರ ಸುಂಕದ, ಡಾ. ರಾಮರಾವ, ಡಾ. ಮಹಾದೇವಿ ಸಿ.ಎಸ್ ಪಾಟೀಲ್, ಡಾ. ವೀರಬಸವಂತರೆಡ್ಡಿ ಮುದ್ನಾಳ, ಡಾ. ನೀಲಮ್ಮ ಪಾಟೀಲ್, ಡಾ. ಸುನಂದ ಕುದರಿ, ಡಾ. ಪ್ರಮೋದ ಕುಲ್ಕರ್ಣಿ, ಡಾ. ಪ್ರದೀಪರೆಡ್ಡಿ, ಡಾ. ಹಣಮಂತರೆಡ್ಡಿ ತಪಾಸಣೆ ನಡೆಸಿದರು.
ಅಂತಾರಾಷ್ಟ್ರೀಯ ಗಣಿತ ಉತ್ಸವ
ಶಹಾಪುರ: ಗಣಿತದ ಕ್ರಿಯೆಗಳನ್ನು ಸರಳವಾಗಿ ತಿಳಿದುಕೊಂಡರೆ ಗಣಿತ ಕಷ್ಟದಾಯಕವಲ್ಲ. ಅದರ ಬಗ್ಗೆ ಭಯ ತಪ್ಪಿಸಲು ನೃತ್ಯ, ಇನ್ನಿತರ ಚಟುವಟಿಕೆಗಳ ಮೂಲಕ ಗಣಿತವನ್ನು ತಿಳಿಸುವ ವಾತಾವರಣ ನಿರ್ಮಾಣವಾಗಲು ಅಂತರ್ರಾಷ್ಟ್ರೀಯ ಗಣಿತ ವರ್ಷವೆಂದು ಎಲ್ಲೆಡೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಮದ್ದರಿಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಉತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಅಮೆರಿಕ, ಫ್ರಾನ್ಸ್ ದೇಶದ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞರು ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂತಸ ಹಂಚಿಕೊಂಡು ಗಣಿತದ ಕುರಿತು ಹಲವಾರು ರೀತಿಯ ಮಾಹಿತಿಯನ್ನು ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮದ್ದರಿಕಿ, ಹೋತಪೇಟ, ಮೂಡಬೂಳನ ಶಾಲೆಯ ವಿದ್ಯಾರ್ಥಿಗಳು ಗಣಿತ ವಿಷಯದ ಮಾದರಿಗಳು ವಿವಿಧ ಪರಿಕಲ್ಪನೆಗಳನ್ನು ತಯಾರಿಸಿ, ಪ್ರದರ್ಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

