ಕೇಂದ್ರ ಸಚಿವ ಶಿಂಧೆ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಯಾದಗಿರಿ: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ಅವರು ಹಿಂದೂ ವಿರೋಧಿ ಹಾಗೂ ಬೇಜವಾಬ್ದಾರಿತನದ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕರ್ತರು ನಗರದ ಶಾಸ್ತ್ರಿ ಚೌಕದಲ್ಲಿ ಗುರುವಾರ ಶಿಂಧೆ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಹಿಂದೂ ಮತ್ತು ಕೇಸರಿ ಭಯೋತ್ಪಾದನೆ ಎಂಬ ಅಪ್ರಬುದ್ಧ ಹೇಳಿಕೆ ನೀಡಿ ಅಸಂಖ್ಯಾತ ಹಿಂದೂಗಳ ಭಾವನೆ ಕೆರಳುವಂತೆ ಮಾಡಿದ್ದಾರೆ. ಅಲ್ಲದೇ ಇದು ದೇಶ ವಿರೋಧಿ ಹೇಳಿಕೆಯೂ ಆಗಿದೆ. ಆದ್ದರಿಂದ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿ, ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹೊಣೆಗೇಡಿತನದ ಹೇಳಿಕೆ: ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಭಯೋತ್ಪಾದನೆ ಕೃತ್ಯಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದು ಶಿಂಧೆ ಅಪ್ರಬುದ್ಧ ರೀತಿಯಲ್ಲಿ ಆರೋಪಿಸಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಶಿಂಧೆ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಮತ್ತು ಸೋನಿಯಾ ಗಾಂಧಿ ಸಮ್ಮುಖದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಬೈಠಕ್ನಲ್ಲಿ ಹೇಳಿಕೆ ನೀಡಿರುವುದು ಹೊಣೆಗೇಡಿತನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜನತೆ ಭಾವನೆಗಳಿಗೆ ಚ್ಯುತಿ: ಇದಲ್ಲದೇ ದೇಶಕ್ಕೆ ಕಾಂಗ್ರೆಸ್ ಅಪಮಾನ ಎಸಗಿದೆ. ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಆಚರಣೆ ಮಾಡುವ ವೇಳೆ ಕೇಸರಿ ಭಯೋತ್ಪಾನೆ ಆರೋಪ ಮಾಡುವ ಮೂಲಕ ಕೇಂದ್ರ ಗೃಹ ಸಚಿವರು ದೇಶದ ಜನತೆಯ ಭಾವನೆಗಳಿಗೆ ಚ್ಯುತಿ ತಂದಿದ್ದಾರೆಂದು ಆರೋಪಿಸಿದರು.
ಈ ಕುರಿತ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ವೀರಣ್ಣಗೌಡ ಮಲ್ಲಾಬಾದಿ, ತೊಗರಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ, ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ತ್ರಿವಿಕ್ರಮ ಜೋಶಿ, ದೇವೇಂದ್ರನಾಥ ನಾದ, ಸಿದ್ದಾರೆಡ್ಡಿ ಬಲಕಲ್, ಬಸವರಾಜ ಖಂಡ್ರೆ, ಭೀಮನಗೌಡ ಕ್ಯಾತನಾಳ, ವೆಂಕಟರೆಡ್ಡಿ ಅಬ್ಬೆತುಮಕೂರ, ಪಿ.ಶಿವರಾಜ, ರಮೇಶ ಕೋಟಿಮನಿ, ಮಹಾದೇವಪ್ಪ ಗಣಪುರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

