ರಾಯಚೂರು

ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಿಎಂಗೆ ಮನವಿ

Published On :

ರಾಯಚೂರು: ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣಾ ನದಿಗಳು ಹರಿಯುತ್ತಿದ್ದರೂ ಕುಡಿಯುವ ನೀರು, ಕೃಷಿ ಕ್ಷೇತ್ರಕ್ಕೆ ಸಮರ್ಪಕ ನೀರು ಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಿಎಂಗೆ ದೂರಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಬಜೆಟ್ ಪೂರ್ವ ಚರ್ಚೆಯ ವೇಳೆ ಮನವಿ ಸಲ್ಲಿಸಿ, ನಾರಾಯಣಪುರ ಬಲದಂಡೆ ಕಾಲುವೆಯು ಸದ್ಯ 95 ಕಿ.ಮೀ.ವರೆಗೆ ಮಾತ್ರ ನಿರ್ಮಾಣವಾಗಿದ್ದು, ಈ ಕಾಲುವೆಯನ್ನು 157 ಕಿ.ಮೀ.ವರೆಗೆ ವಿಸ್ತರಿಸಬೇಕೆಂಬ ರೈತರ ಬಹುದಿನದ ಬೇಡಿಕೆಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಅಷ್ಟೇ ಅಲ್ಲ ಸದ್ಯದ 95 ಕಿ.ಮೀ.ವರೆಗಿನ ಕಾಲುವೆಯ ದುರಸ್ತಿಗೂ ಗಮನಹರಿಸುತ್ತಿಲ್ಲ. ಇದರಿಂದ ರೈತರಿಗೆ ಕಾಲುವೆಯಿಂದ ಸಮರ್ಪಕ ನೀರು ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವ್ಯವಸ್ಥೆ ಸುಧಾರಿಸಿ: ಜೆಸ್ಕಾಂ ವಿದ್ಯುತ್ ಪರಿವರ್ತಕಗಳ ಪೂರೈಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದು, ರೈತರಿಗೆ ಸಮಸ್ಯೆ ಉಂಟು ಮಾಡಲಾಗುತ್ತಿದೆ. ತಾಲೂಕಿನ ಯಾಪಲದಿನ್ನಿ ಮತ್ತು ಯರಗೇರಾದಲ್ಲಿ 110 ಕೆ.ವಿ. ವಿದ್ಯುತ್ ಕೇಂದ್ರಗಳನ್ನು ಶೀಘ್ರ ಸ್ಥಾಪಿಸಿ ವಿದ್ಯುತ್ ವ್ಯವಸ್ಥೆ ಸುಧಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಖಾಸಗಿಯವರ ಬಳಿಯ ಕೃಷಿ ಸಾಮಗ್ರಿ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುತ್ತಿರುವ ರಿಯಾಯಿತಿ ದರಕ್ಕೂ ಬಹಳ ವ್ಯತ್ಯಾಸವಿಲ್ಲ. ಕೇವಲ 20 ರು. ರಿಯಾಯಿತಿ ದೊರೆಯುತ್ತಿದ್ದು, ಇದರಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಿಲ್ಲ ಎಂದು ಆರೋಪಿಸಿದ್ದಾರೆ.
ಮಾ.31ರವರೆಗೆ ನೀರು ಬೇಕು: 2011ರ ಅಂತ್ಯಕ್ಕೆ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಫೆಬ್ರವರಿಯಲ್ಲಿ ನೀರು ಸ್ಥಗಿತಗೊಳಿಸಿದ್ದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಶೇಂಗಾ ಬೆಳೆ ಹಾನಿಗೀಡಾಗಿತ್ತು. 2012ರ ಅಂತ್ಯಕ್ಕೂ ಲಿಂಗಸ್ಗೂರು, ದೇವದುರ್ಗ ತಾಲೂಕುಗಳಲ್ಲಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಸದ್ಯ ಕಾಲುವೆಯಿಂದ ಸಮರ್ಪಕ ನೀರು ದೊರೆಯುವ ಲಕ್ಷಣಗಳಿಲ್ಲ. ಇದರಿಂದ ರೈತರು ಆತಂಕದಲ್ಲಿದ್ದು, ಮಾರ್ಚ್ 31ರವರೆಗೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದಾರೆ.
ಪ್ರಕರಣ ಕೈಬಿಡಿ: ಸರ್ಕಾರ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಜಿಲ್ಲೆಯ ಆಶಾಪುರ ರಸ್ತೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಬೇಕು. ಯರಗೇರಾದಲ್ಲಿ ಮೇವು ಬ್ಯಾಂಕಿನಿಂದ ಮೇವು ಕೊಂಡೊಯ್ದ ಬಗ್ಗೆ ರೈತರ ವಿರುದ್ಧ ಕಳವಿನ ಪ್ರಕರಣ ದಾಖಲಾಗಿದ್ದು, ಈ ಪ್ರಕರಣ ಕೈಬಿಡುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.