ಭಾವಚಿತ್ರ ತೆರವು: ಕ್ರಮಕ್ಕೆ ಆಗ್ರಹ (ಸಂಕ್ಷಿಪ್ತ ಸುದ್ದಿ)
ರಾಯಚೂರು: ನಗರದ ಜೆಸ್ಕಾಂ ಕಚೇರಿಯಲ್ಲಿರುವ ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣ ಸಮಿತಿ ಕೊಠಡಿಯಿಂದ ಜೆಸ್ಕಾಂ ಅಧಿಕಾರಿಗಳಿಬ್ಬರು ಅಂಬೇಡ್ಕರ್ ಭಾವಚಿತ್ರ ಹೊರಹಾಕಿದ್ದಾರೆಂದು ಆರೋಪಿಸಿರುವ ದಲಿತ ವಿಮೋಚನಾ ಸೇನೆಯ ಪ್ರಮುಖರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಪರಶುರಾಮ ಅರೋಲಿ, ಯೇಸುರಾಜ್ ಕುರ್ಡಿ, ಸುರೇಶ ಗಧಾರ್, ಮಲ್ಲೇಶ ಗಧಾರ್ ಅವರು, ಗಣರಾಜ್ಯೋತ್ಸವದ ಮುನ್ನಾದಿನ ಸಮಿತಿಯ ಕೊಠಡಿಯಲ್ಲಿದ್ದ ರಾಷ್ಟ್ರದ ಮಹಾನ್ ನಾಯಕ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಜೆಸ್ಕಾಂ ಅಧಿಕಾರಿಗಳು ಕಿತ್ತೆಸೆದಿದ್ದಾರೆಂದು ದೂರಿದ್ದಾರೆ. ರಾಷ್ಟ್ರ ನಾಯಕರಿಗೆ ಅಗೌರವ ತೋರಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅತಿ ಮದ್ಯ ಸೇವನೆ: ವ್ಯಕ್ತಿ ಸಾವು
ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ವ್ಯಕ್ತಿಯೊಬ್ಬ ಅತೀಯಾದ ಮದ್ಯ ಸೇವನೆಯಿಂದ ಸಾವಿಗೀಡಾಗಿದ್ದಾನೆ. ಮೃತನನ್ನು ಗ್ರಾಮದ ಮುತ್ತಪ್ಪ(60) ಎಂದು ಗುರುತಿಸಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದು, ಅತಿಯಾಗಿ ಮದ್ಯ ಸೇವಿಸಿ ಅದರ ಅಮಲಿನಲ್ಲಿಯೇ ಮನೆಯಿಂದ ಹೊರಗೆ ಹೋಗಿದ್ದು, ಶಕ್ತಿನಗರದ ಕೆಪಿಸಿ ಕಾಲೋನಿಯ ಮನೆಯೊಂದರ ಹಿಂದಿನ ಬೇಲಿಯಲ್ಲಿ ಜೋಲಿ ಹೋಗಿ ಕೆಳಗೆ ಬಿದ್ದು ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಜಾತ್ರೆ
ರಾಯಚೂರು: ತಾಲೂಕಿನ ಮಟಮಾರಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಜ.27ರಂದು ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಲಿದೆ. ಸಂಜೆ 5.10ಕ್ಕೆ ರಥೋತ್ಸವವು ಬಿಚ್ಚಾಲಿ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಇಂದು ಉದ್ಘಾಟನೆ
ರಾಯಚೂರು: ನಗರದ ಸ್ಪಂದನ ಆಸ್ಪತ್ರೆಯ ಆವರಣದಲ್ಲಿ ಜ.27ರಂದು ಹೊಯ್ಸಳ ಯುವಸೇನೆ ಸಂಘಟನೆಯ ಉದ್ಘಾಟನೆ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ರಕ್ತದಾನ ಶಿಬಿರವು ಆಸ್ಪತ್ರೆಯ ಆವರಣದಲ್ಲಿ ನಡೆಯಲಿದ್ದು, ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆಂದು ಸಂಘಟನೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

