ರಾಯಚೂರು

ನೀರು ಹರಿಸದಿದ್ದರೆ 6 ಸಾವಿರ ಹೆಕ್ಟೇರ್ ಪ್ರದೇಶದ ಶೇಂಗಾ ಬೆಳೆಗೆ ಹಾನಿ

Published On :


ಮಾರ್ಚ್‌ವರೆಗೆ ನಾಲೆಗೆ ನೀರು ಹರಿಸಿ; ರೈತ ಸಂಘ


ಲಿಂಗಸ್ಗೂರು: ನಾರಾಯಣಪುರ ಬಲದಂಡೆ, ರಾಂಪೂರ ಏತ ನೀರಾವರಿ ಸೇರಿದಂತೆ ಎಲ್ಲ ಕಾಲುವೆಗಳಿಗೆ ಮಾರ್ಚ್ 31ರವರೆಗೆ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರೈತರು ತಹಸೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ವರ್ಷದಂತೆ ಈ ವರ್ಷವೂ ಶೇಂಗಾ ಬೆಳೆ ತಡವಾಗಿ ನವೆಂಬರ್ ಕೊನೆ ವಾರದಲ್ಲಿ ಬಿತ್ತನೆ ಮಾಡಲಾಗಿದೆ. ಮಾರ್ಚ್ ಕೊನೆ ವಾರದವರೆಗೆ ನಾಲೆಗಳಿಗೆ ನೀರು ಹರಿಸಿದರೆ ಮಾತ್ರ ಶೇಂಗಾ ಬೆಳೆ ರೈತರ ಕೈ ಸೇರಲಿದೆ. ಇಲ್ಲದಿದ್ದರೆ ರೈತರು ತೀವ್ರ ತೊಂದರೆ ಅನುಭವಿಸುತ್ತಾರೆ. ಕಳೆದ ವರ್ಷ ಸರ್ಕಾರ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿದರೂ, ಕೆಬಿಜೆಎನ್‌ಎಲ್ ಅಧಿಕಾರಿಗಳು ನೀರನ್ನು ಕಾಪಾಡಿಕೊಳ್ಳದೆ ವೃಥಾ ನೀರನ್ನು ನದಿಗೆ ಹರಿಸಿದ್ದಾರೆ. ಈ ವರ್ಷ ನೀರು ಹರಿಸುವುದು ನಿಲ್ಲಿಸಿದರೆ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ ಶೇಂಗಾ ಬೆಳೆ ಹಾಳಾಗಲಿದೆ. ಕಾರಣ ಮಾರ್ಚ್ ಕೊನೆ ವಾರದವರೆಗೆ ನಾಲೆಗಳಿಗೆ ನೀರು ಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಸ್ತೆ ದುರಸ್ತಿಗೆ ಆಗ್ರಹ: ತಾಲೂಕಿನ ಆನಾಹೊಸೂರು ಗ್ರಾಮದಿಂದ ನಂದಿಹಾಳ ಗ್ರಾಮದ ಮೂಲಕ ರೋಡಲಬಂಡಾ ಗ್ರಾಮಕ್ಕೆ ತೆರಳುವ ರಸ್ತೆ ತುಂಬಾ ಹದಗೆಟ್ಟಿದ್ದು, ರಸ್ತೆ ಎರಡೂ ಬದಿ ಜಾಲಿ ಮರಗಳು ಬೆಳೆದುನಿಂತಿವೆ. ರಸ್ತೆ ತಿರುವುಗಳಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಕಾಣದೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಕಾರಣ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಟಿಸಿ ಅಳವಡಿಕೆಗೆ ಒತ್ತಾಯ: ತಾಲೂಕಿನ ಜಾಗೀರ ನಂದಿಹಾಳ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಸುಮಾರು ಮೂರು ತಿಂಗಳು ಗತಿಸಿದೆ. ಇದರಿಂದ ಸಾರ್ವಜನಿಕರು ಕುಡಿಯುವ ನೀರು, ಹಿಟ್ಟಿನ ಗಿರಣಿ, ಪರದಾಡುವಂತಾಗಿದೆ. ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಫೆ. 25ರಂದು ಗ್ರಾಮದ ಗದ್ದೆಮ್ಮ ದೇವಿ ಜಾತ್ರೆ ಇರುವ ಪ್ರಯುಕ್ತ ಕೂಡಲೆ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಒತ್ತಾಯಿಸಿ ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿಗೆ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಗಿದೆ.
ರೈತ ಸಂಘದ ಮಹಾಂತಗೌಡ ಪಾಟೀಲ, ಶಿವಪುತ್ರಗೌಡ ಪಾಟೀಲ, ಸಿದ್ದಯ್ಯ ಗುರುವಿನ, ನಾಗಪ್ಪ ಮೇಲಸಕ್ರಿ, ಕನಕಮೂರ್ತಿ, ಹನುಮಂತ ಹರಿಜನ, ನಿರುಪಾದಿ ಇಸ್ಲಾಂಪೂರ, ಗದ್ದೆನಗೌಡ ಪಾಟೀಲ, ಹಸೇನಪ್ಪ, ಸುರೇಶ ಪೂಜಾರಿ, ಶಿವಪ್ಪ ಸಾಹುಕಾರ, ಯಮನಪ್ಪ, ಚನ್ನಯ್ಯ, ಮಾನಪ್ಪ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.