ಶಿಕ್ಷಣ, ಜ್ಞಾನದಿಂದ ಭವಿಷ್ಯ ಉಜ್ವಲ
-ಜಿಲ್ಲಾ ಪಂಚಾಯಿತಿ ಸಿಇಒ ಜ್ಞಾನಪ್ರಕಾಶ್ ಸಲಹೆ
- ಉಜ್ವಲ ಭವಿಷ್ಯ ಕಾರ್ಯಕ್ರಮಕ್ಕೆ ಚಾಲನೆ
ರಾಯಚೂರು: ಶಿಕ್ಷಣ ಮತ್ತು ಜ್ಞಾನದಿಂದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಸಾಧ್ಯ. ಯುವಕರು ದೊರೆತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನದಲ್ಲಿ ಪ್ರಗತಿ ಸಾಧಿಸುವಂತೆ ಜಿಪಿ ಸಿಇಒ ಜ್ಞಾನಪ್ರಕಾಶ್ ಸಲಹೆ ನೀಡಿದರು.
ನಗರದ ರಂಗಮಂದಿರದಲ್ಲಿ ಬುಧವಾರ ಸಿ ಡಾಕ್ ಧಾರವಾಡ, ಜಿಪಂ ಮತ್ತಿತರ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಉಜ್ವಲ ಭವಿಷ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಯುವಕರು ಸರ್ಕಾರಿ ಉದ್ಯೋಗಕ್ಕೆ ಕಾಯದೇ ಸ್ವಾವಲಂಬಿ ಬದುಕು ಸಾಗಿಸಲು ಹೆಚ್ಚಿನ ಒತ್ತು ನೀಡಬೇಕೆಂದು ಹೇಳಿದರು.
ಸ್ವಾವಲಂಬಿ ಜೀವನ ನಡೆಸಿ: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಯುವಕರು ಸಂಕಷ್ಟಕ್ಕೆ ಸಿಲುಕಿದ ಅನೇಕ ಪ್ರಸಂಗಗಳಿವೆ. ಈ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಸ್ವಾವಲಂಬಿಯಾಗಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಸಾಬೀತುಪಡಿಸುವಂತೆ ಮನವಿ ಮಾಡಿದರು.
ಶಿಕ್ಷಣದ ನಂತರದಲ್ಲಿ ತರಬೇತಿ ಮತ್ತು ಮಾರ್ಗದರ್ಶನದಿಂದ ಯುವಕರಿಗೆ ಸೂಕ್ತ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ನಿರ್ದಿಷ್ಟ ಗುರಿಯೊಂದಿಗೆ ಜೀವನದಲ್ಲಿ ಮುನ್ನಡೆದರೆ ಮಾತ್ರ ಯಶಸ್ಸು ಸಾಧ್ಯ. ಯುವಕರು ಸ್ವಸಾಮರ್ಥ್ಯದ ಬಗ್ಗೆ ಅರಿವಿಟ್ಟುಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.
ಸತತ ಪ್ರಯತ್ನದಿಂದ ಗೆಲವು: ಸಮಾರಂಭದಲ್ಲಿ ಮಾತನಾಡಿದ ಸಹಾಯಕ ಆಯುಕ್ತೆ ಮಂಜುಶ್ರೀ, ಇಂದಿನ ಯುವಕರಲ್ಲಿ ಉತ್ತಮ ನಡತೆ, ಪ್ರಾಮಾಣಿಕತೆ, ನಿರಂತರ ಅಧ್ಯಯನದತ್ತ ಒಲವು ಅವಶ್ಯ. ಸತತ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಗೆಲವು ಪಡೆಯಲು ಸಾಧ್ಯ ಎಂದು ಹೇಳಿದರು.
ಯುವಕರು ಗೊತ್ತುಗುರಿಯಿಲ್ಲದೇ ಅಧ್ಯಯನ ಮಾಡುವುದರಿಂದ ಉಪಯೋಗವಾಗದು. ಬದಲಿಗೆ ನಿರ್ದಿಷ್ಟ ರೀತಿಯಲ್ಲಿ ಅಧ್ಯಯನದಿಂದ ಮಾತ್ರ ಯಶಸ್ಸು ಸಾಧ್ಯ. ಯುವಕರಲ್ಲಿ ಆಯಾ ಕಾಲದಲ್ಲಿ ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಮಾಹಿತಿ ತಿಳಿದಿರುವುದು ಅವಶ್ಯ ಎಂದರು.
ಕಲಿಕಾಸಕ್ತಿ ಜಾಗ್ರತವಾಗಿರಲಿ: ಜಗತ್ತು ಬದಲಾದಂತೆ ಯುವಕರು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವ ಗುಣ ರೂಢಿಸಿಕೊಳ್ಳಬೇಕು. ಆಧುನಿಕ ಜಗತ್ತಿನ ಏರಿಳಿತಗಳ ಮೇಲೆ ಯುವಕರಿಗೆ ನಿಗಾಯಿಡಬೇಕು. ಕಲಿಕಾಸಕ್ತಿ ಯುವಕರಲ್ಲಿ ಯಾವಾಗಲೂ ಜಾಗೃತವಾಗಿರಬೇಕೆಂದು ಸಲಹೆ ನೀಡಿದರು.
ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ದಿವ್ಯಾ ಗೋಪಿನಾಥನ್, ಶಿಕ್ಷಣದ ನಂತರ ಮುಂದೇನು ಎಂಬುದು ಎಲ್ಲ ಯುವ ಜನಾಂಗದವರಿಗೆ ಕಾಡುವ ಪ್ರಶ್ನೆಯಾಗಿದೆ. ಆದರೆ ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಯುವಕರು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಆರ್ಥಿತ ಭದ್ರತೆಗೆ ಸ್ವಸಾಮರ್ಥ್ಯ ಆಧಾರ: ಸ್ವಸಾಮರ್ಥ್ಯದ ಬಗ್ಗೆ ಅರಿತು ಅದಕ್ಕನುಗುಣವಾಗಿ ಉದ್ಯೋಗವನ್ನು ಆಯ್ದುಕೊಳ್ಳಬೇಕು. ಬೇರೊಬ್ಬರ ಅನುಕರಣೆ ಮಾಡುವ ಉದ್ದೇಶದಿಂದ ಉದ್ಯೋಗದ ಬೆನ್ನು ಬೀಳುವುದು ಸರಿಯಲ್ಲ. ಸಾಮರ್ಥ್ಯ ಮತ್ತು ಸ್ವಆಸಕ್ತಿಗೆ ಪೂರಕ ಉದ್ಯೋಗ ಪಡೆದಾಗ ಮಾತ್ರ ಬದುಕಿಗೆ ಆರ್ಥಿಕ ಭದ್ರತೆ ದೊರೆಯುತ್ತದೆ ಎಂದರು.
ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಹತ್ತಾರು ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉನ್ನತ ಸ್ಥಾನಮಾನ ಪಡೆಯಲು ಪರಿಶ್ರಮವೂ ಬೇಕು. ಪರಿಶ್ರಮವಿಲ್ಲದೇ ಯಾವುದನ್ನೂ ಪಡೆಯಲು ಸಾಧ್ಯವಾಗದು ಎಂದ ಅವರು, ಸತತ ಅಧ್ಯಯನ, ನಿರ್ದಿಷ್ಟ ಗುರಿಯಿಟ್ಟುಕೊಂಡು ಮುನ್ನಡೆದಲ್ಲಿ ಯುವಕರು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಜಿಪಂ ಯೋಜನಾಧಿಕಾರಿ ಡಾ. ಟಿ.ರೋಣಿ ಮಾತನಾಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಜಿ.ವಿ. ಹುಡೇದ್, ವಿನಾಯಕ ಬಿರಾದಾರ್ ಸೇರಿದಂತೆ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

