ರಾಯಚೂರು

ನೆನೆಗುದಿಗೆ ಬಿದ್ದಿದ್ದ ವಿವಿಧ ಕಾಮಗಾರಿ ತ್ವರಿತಗತಿಗೆ ಸೂಚನೆ

Published On :

ಲಿಂಗಸ್ಗೂರು: ಸ್ಥಳೀಯ ಪುರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಕಾಮಗಾರಿ ಕೈಗೊಳ್ಳುವ ಕುರಿತು ಅನುಮೋದನೆ ಪಡೆಯಲು ಮುಖ್ಯಾಧಿಕಾರಿ ಈರಣ್ಣ ಬಿರಾದಾರ ಅಧ್ಯಕ್ಷ ಹಾಗೂ ಸದಸ್ಯರಿಗೆ ವರದಿ ಮಂಡಿಸಿದರು.
  ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡುಗಳ ಜನತೆಗೆ ಪ್ರಸಕ್ತ ಎರಡು ದಿನಕ್ಕೊಂದು ಬಾರಿ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳದಿಂದ ಮುಂಬರುವ ದಿನಗಳಲ್ಲಿ ಮೂರ್ನಾಲ್ಕು ದಿನಗಳಿಗೆ ಒಂದು ಬಾರಿ ನೀರು ಪೂರೈಸುವ ಪರಿಸ್ಥಿತಿ ಬಂದೊದಗಬಹುದು. ನೀರನ್ನು ಅನಗತ್ಯ ವೆಚ್ಚ ಮಾಡದೆ ಮಿತ ಬಳಕೆ ಹಾಗೂ ವ್ಯರ್ಥ ಮಾಡದೆ ಉಳಿಸುವ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಬೇಕಿದೆ.
ನಿಷೇಧ ಹೇರಬೇಕು: ನಗರದ ವಿವಿಧ ವೃತ್ತಗಳಲ್ಲಿ ಮನಬಂದಂತೆ ಫ್ಲೆಕ್ಸ್‌ಗಳನ್ನು ಹಾಕಲಾಗುತ್ತಿದೆ. ಕೆಲವರು ಪರವಾನಗಿ ಪಡೆದರೆ ಇನ್ನು ಕೆಲವರು ಪರವಾನಗಿ ಪಡೆಯದೆ ಹಾಕುತ್ತಿದ್ದಾರೆ. ಹಲವು ದಿನ ಕಳೆದರೂ ತೆಗೆಯದೆ ಹಾಗೆಯೇ ಬಿಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಸದಸ್ಯರು ಸಹಕಾರ ನೀಡಬೇಕು. ಬಸ್ ನಿಲ್ದಾಣ ವೃತ್ತ ಹಾಗೂ ಗಡಿಯಾರ ಚೌಕ್ ವೃತ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫ್ಲೆಕ್ಸ್ ಹಾಕಲಾಗುತ್ತದೆ. ಈ ವೃತ್ತಗಳಲ್ಲಿ ಹಾಕದಂತೆ ಸಂಪೂರ್ಣ ನಿಷೇಧ ಹೇರಲು ಅನುಮತಿ ನೀಡಬೇಕು.
ಬಸ್ ನಿಲ್ದಾಣ ಹಾಗೂ ವಿವಿಧ ರಸ್ತೆ ಬದಿಗಳಲ್ಲಿ ಹಣ್ಣಿನ ಅಂಗಡಿ, ಹೂವಿನ ಅಂಗಡಿ ಸೇರಿದಂತೆ ಸಂಚಾರಿ ವ್ಯಾಪಾರಸ್ಥರಿಗೆ ಪ್ರತಿ ತಿಂಗಳು ಪುರಸಭೆಯಿಂದ 100 ಶುಲ್ಕ ನಿಗದಿಪಡಿಸಿದರೆ ವ್ಯಾಪಾರಿಗಳು ಹಾಕುವ ತ್ಯಾಜ್ಯ ವಿಲೇವಾರಿಗೆ ಅನುಕೂಲವಾಗುತ್ತದೆ. ವಿವಿಧ ಸಂಘ- ಸಂಸ್ಥೆಗಳು ಆಯಾ ಭವನಗಳ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಮೀಸಲಿರುವ ಜಾಗ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಪುರಸಭೆ ಅಧೀನದ ಯಾವುದೇ ಜಾಗ ಮಂಜೂರು ಮಾಡಲು ನಮಗೆ ಅವಕಾಶವಿರುವುದಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲಾಗುವುದು ಎಂದು ಮುಖ್ಯಾಧಿಕಾರಿ ಬಿರಾದಾರ ತಿಳಿಸಿದರು.
40 ಲಕ್ಷ ಉಳಿತಾಯ: ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಆರಂಭಿಕ ಶುಲ್ಕ, ವರ್ಗಾವಣೆ ಶುಲ್ಕ, ಖಾತಾ ನಕಲು, ಕಟ್ಟಡ ಪರವಾನಗಿ, ದೃಢೀಕರಣ ಶುಲ್ಕ, ಅಭಿವೃದ್ಧಿ ಶುಲ್ಕ, ನೀರಿನ ಕರ, ಮಳಿಗೆ ಬಾಡಿಗೆ ಸೇರಿದಂತೆ ಹಲವು ಶುಲ್ಕ ಹಾಗೂ ಕರ ವಸೂಲಿಯಿಂದ ಬಂದ ಹಣದಲ್ಲಿ ದಿನಗೂಲಿ ವೇತನ, ಜಾಹೀರಾತು, ಜಂಗಲ್ ಕಟಿಂಗ್, ಗಣ್ಯರ ಜಯಂತಿ ಕಾರ್ಯಕ್ರಮ, ಗೌರವಧನ, ದುರಸ್ತಿ ಕಾಮಗಾರಿ ಸೇರಿದಂತೆ ವಿವಿಧ ಕೆಲಸಗಳಿಗೆ ಪಾವತಿಸಿದಾಗ್ಯೂ ಸುಮಾರು 40 ಲಕ್ಷ ಉಳಿತಾಯವಾಗಿದೆ. 2013- 14ನೇ ಸಾಲಿನಲ್ಲಿ 13ನೇ ಹಣಕಾಸು ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಳ್ಳಲು 70 ಲಕ್ಷ ಹಾಗೂ ರಸ್ತೆ ನಿರ್ಮಾಣಕ್ಕೆ 25 ಲಕ್ಷ ಅನುದಾನ ಬಿಡುಗಡೆಯಾಗಿದೆ. ವಿವಿಧ ಕಾಮಗಾರಿ ಕೈಗೊಳ್ಳುವ ಕುರಿತು ಕ್ರಿಯಾಯೋಜನೆ ತಯಾರಿಸಲು ಅನುಕೂಲ ಮಾಡಿಕೊಡಬೇಕೆಂದು ಈರಣ್ಣ ಬಿರಾದಾರ ಮನವಿ ಮಾಡಿದರು.
ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ: ಇದೇ ವೇಳೆ ಸದಸ್ಯ ಬಸವರಾಜ ಗುತ್ತೇದಾರ ಮಾತನಾಡಿ, ಕಳೆದ ಬಾರಿ ಹಲವು ಕಾಮಗಾರಿ ಕೈಗೊಳ್ಳಲು ಟೆಂಡರ್ ಪಡೆದ ಗುತ್ತಿಗೆದಾರರು ಕೆಲಸ ಆರಂಭಿಸಿಲ್ಲ. ವಿಳಂಬ ಕಾಮಗಾರಿ ಮೊದಲು ಕೈಗೆತ್ತಿಕೊಳ್ಳದೆ ನೂತನ ಕಾಮಗಾರಿ ಕುರಿತು ಚರ್ಚಿಸುವುದು ಸೂಕ್ತವಲ್ಲ. ಕೂಡಲೇ ಕಾಮಗಾರಿ ಆರಂಭಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಖ್ಯಾಧಿಕಾರಿ ಈರಣ್ಣ ಬಿರಾದಾರ ಮಾತನಾಡಿ, ಪಟ್ಟಣದಲ್ಲಿ ಅಕ್ರಮ ಕಟ್ಟಡ ತೆರವು ಕಾರ್ಯ ಇನ್ನೂ ಬಾಕಿ ಉಳಿದಿದ್ದು, ತೆರವು ಕಾರ್ಯ ಕೈಗೊಳ್ಳಲು ಜೆಸಿಬಿ ಬಾಡಿಗೆ ಪಡೆಯಲು ಅನುಮತಿ ನೀಡಬೇಕೆಂದು ಮನವಿ ಮಾಡಿದರು.
ವಿವಿಧ ಕಾಮಗಾರಿ- ಚರ್ಚೆ: ಪುರಸಭೆಯ ಕುಡಿವ ನೀರಿನ ಟ್ಯಾಂಕ್ ದುರಸ್ತಿಯಿದ್ದು, ನೂತನ ಟ್ಯಾಂಕ್ ಖರೀದಿಸಲು ಅವಕಾಶ ಕಲ್ಪಿಸುವುದು. ವಿವಿಧ ಯೋಜನೆಯ ಕಾಮಗಾರಿಗಳ ಟೆಂಡರ್ ದರ ಮಂಜೂರು ಮಾಡುವುದು. ಸಮಾನ್ಯ ಮೂಲ ನಿಧಿ 13 ನೇ ಹಣಕಾಸು ಯೋಜನೆಯ 9.87 ಲಕ್ಷ ವೆಚ್ಚದಲ್ಲಿ ಕಾಮಗಾರಿ ಬದಲಾವಣೆ ಮಾಡುವುದು. ಹೊಸ ಕಾರ್ಯಾಲಯಕ್ಕೆ ಯುಪಿಎಸ್, ಬ್ಯಾಟರಿ, ಕ್ಯಾಶ್ ಕೌಂಟರ್, ಅಲ್ಮೇರಾ, ಟೇಬಲ್ ಖರೀದಿ, ನೀರು ಸರಬರಾಜು ಸಾಮಗ್ರಿ ಬಿಲ್ ಪಾವತಿಸುವುದು. ಬಿಆರ್‌ಜಿಎಫ್ ಯೋಜನೆ ಕಾಮಗಾರಿ ನೀಡುವುದು. 2010- 11ನೇ ಸಾಲಿನ ಅಡಿಟ್ ಮಾಡಿದ ಬಿಲ್ ಪಾವತಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಸದಸ್ಯರಿಂದ ಅನುಮತಿ, ಸಲಹೆ, ಸೂಚನೆ ಪಡೆಯಲಾಯಿತು. ಶಾಸಕ ಮಾನಪ್ಪ ವಜ್ಜಲ್, ಪುರಸಭೆ ಅಧ್ಯಕ್ಷೆ ದುರುಗಮ್ಮ ರಾಮಸ್ವಾಮಿ, ಉಪಾಧ್ಯಕ್ಷೆ ಶಿವಜಾತಮ್ಮ ಮಲ್ಲಿಕಾರ್ಜುನಗೌಡ, ಸದಸ್ಯರಾದ ಮನೋಹರರಡ್ಡಿ, ರುದ್ರಪ್ಪ ಬ್ಯಾಗಿ, ಬಸವರಾಜ ಗುತ್ತೇದಾರ, ಖಾದರಪಾಶಾ, ಕುಮಾರಸ್ವಾಮಿ, ರೇಖಾಬಾಯಿ ದಶರಥಸಿಂಗ್, ರಾಜಶೇಖರ ಪಲ್ಲೇದ, ಛೋಟೀಮಾ, ಶಂಭುಲಿಂಗಪ್ಪ ಫೂಲಬಾವಿ, ಅನೀಸ್ ಪಾಶಾ, ವೀರಭದ್ರಯ್ಯಸ್ವಾಮಿ, ಶಿವರಾಜ ಬಾಳೇಗೌಡ, ದಸ್ತಗೀರ, ಶರಣಗೌಡ ಪಾಟೀಲ, ಎಂಜಿನೀಯರ್ ಚಂದ್ರು  ಸಿಬ್ಬಂದಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.