ರಾಷ್ಟ್ರ ನಿರ್ಮಾಣಕ್ಕೆ ತರುಣರು ಸ್ವಾಭಿಮಾನಿಗಳಾಗಲಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.16
ದೇಶದ ಯಾವ ತರುಣ ಸ್ವಾಭಿಮಾನಿಯಲ್ಲವೋ ಅವನು ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಆದಕಾರಣ ತರುಣರು ಮೊದಲು ಸ್ವಾಭಿಮಾನಿಗಳಾಗಬೇಕು. ಇದರಿಂದ ಬಲಿಷ್ಠ ರಾಷ್ಟ್ರ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ಅಂಗವಾಗಿ ಮಂಗಳವಾರ ವಿವೇಕಾನಂದರ ರಥಯಾತ್ರೆ ಮೆರವಣಿಗೆ ನಂತರ ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸ್ವಾಮಿ ವಿವೇಕಾನಂದ ರಥಯಾತ್ರೆ ಸಮಿತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ತರುಣರು ಎಲ್ಲಿಯವರೆಗೆ ಸ್ವಾಭಿಮಾನಿಗಳಾಗುವುದಿಲ್ಲವೋ ಅಲ್ಲಿವರೆಗೆ ಜಗತ್ತನ್ನಾಳಲು ಸಾಧ್ಯವಿಲ್ಲ ಎಂದರು.
ಶ್ರೇಷ್ಠ ಮನುಜರಾಗಿ: ತರುಣರು ಶಿಕ್ಷಣವಂತರಾಗಿ ಎಲ್ಲರೂ ನೌಕರಿಗಾಗಿ ಅಲೆವ ಬದಲು ದೇಶಕ್ಕೆ ಅನ್ನ ನೀಡುವ ಸ್ವಾಭಿಮಾನಿ ರೈತರಂತೆ ಶ್ರೇಷ್ಠ ಮನುಜರಾಗಬೇಕು. ಸಿನಿಮಾ ರಂಗದ ಕಲಾವಿದರನ್ನು ತಮ್ಮ ಹಿರೋಗಳೆಂದು ಹೇಳುವ ಬದಲು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್ ಸಿಂಗ್, ಸುಭಾಷ್ಚಂದ್ರ ಬೋಸ್ ಹಾಗೂ ದೇಶದ ಶ್ರೇಷ್ಠ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿಗಳನ್ನು ಹಿರೋಗಳೆಂದು ಪರಿಗಣಿಸಬೇಕು. ಅವರ ಆದರ್ಶ, ಮಾರ್ಗದರ್ಶನದಿಂದ ಸಾಧನೆಗೈಯುವ ಮೂಲಕ ರಾಷ್ಟ್ರವನ್ನು ಮುನ್ನಡೆಸುವತ್ತ ಆಸಕ್ತಿ ತೋರಬೇಕೆಂದು ಕರೆ ನೀಡಿದರು.
ಬುದ್ಧಿವಂತ ಸನ್ಯಾಸಿ: ಅಮೇರಿಕಾ ದೇಶದ ಚಿಕಾಗೋ ನಗರದಲ್ಲಿ ಹಾವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಸ್ವಾಮಿ ವಿವೇಕಾನಂದರಲ್ಲಿನ ಜ್ಞಾನ ಅರಿತು, ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಕುರಿತು ಹಿತನುಡಿಗಳನ್ನಾಡಲು ಕೇಳಿಕೊಂಡರು. ಅಲ್ಲದೆ ಅಮೇರಿಕಾದ ಭೂಮಿ ಮೇಲೆ ಕಳೆದ 400 ವರ್ಷಗಳ ನಂತರ ನಡೆದಾಡಿದ ಒಬ್ಬ ಅತ್ಯಂತ ಬುದ್ಧಿವಂತ ಸನ್ಯಾಸಿ ಸ್ವಾಮಿ ವಿವೇಕಾನಂದರಾಗಿದ್ದಾರೆ ಎಂದು ಪ್ರೊಫೆಸರ್ ಹೇಳಿದ್ದಾರೆ.
ಬಲಿಷ್ಠ ರಾಷ್ಟ್ರವನ್ನಾಗಿಸಿ: ದೇಶದ ಗೌರವ, ಘನತೆ ಎತ್ತಿ ಹಿಡಿದ ಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದರ ವಾಣಿಯಂತೆ ತರುಣರು ಮೊದಲು ಬಲಿಷ್ಠ ಹಾಗೂ ಸ್ವಾಭಿಮಾನಿಗಳಾಗಬೇಕು. ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವ ಜವಾಬ್ದಾರಿ ತರುಣರ ಮೇಲಿದೆ. ಮೊದಲು ಫುಟ್ಬಾಲ್ ಆಟವಾಡಬೇಕು. ನಂತರ ಗೀತಾಧ್ಯಯನಕ್ಕೆ ಮುಂದಾಗಬೇಕು. ಅಂದಾಗ ಮುಕ್ತಿಗೆ ಹತ್ತಿರ ಹೋಗುವಿರಿ. ದೇಶದ ಉದ್ದಗಲಕ್ಕೂ ಋಷಿ ಮುನಿಗಳು, ಶರಣರು, ಸಂತರು, ದಾರ್ಶನಿಕರು, ಸ್ವಾತಂತ್ರ್ಯ ಹೋರಾಟಗಾರರು, ಉನ್ನತ ಶಿಕ್ಷಣ ಪಡೆದ ವಿದ್ಯಾವಂತರು ತುಂಬಿದ್ದಾರೆ. ಅಂತಹ ಮಹಾನ್ ಪುರುಷರ ಆದರ್ಶ, ಮಾರ್ಗದರ್ಶನ ಅಳವಡಿಸಿಕೊಂಡು ಸ್ವಾಭಿಮಾನಿಗಳಾಗಬೇಕೆಂದು ಕರೆ ನೀಡಿದರು.
ಬೆಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿ ಮಹಾವಾಕ್ಯನಂದಜೀ ಮಹಾರಾಜ್, ಹುನಕುಂಟಿ ಶರಣಯ್ಯ ಶ್ರೀಗಳು, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿ. ಜ್ಞಾನಪ್ರಕಾಶ, ಸಹಾಯಕ ಆಯುಕ್ತ ಟಿ. ಯೋಗೇಶ, ರಥಯಾತ್ರೆ ಸಮಿತಿ ಸಂಚಾಲಕ ವೀರನಗೌಡ ಐದನಾಳ, ಮನೋಹರರೆಡ್ಡಿ ಇದ್ದರು.
ರಥಯಾತ್ರೆಗೆ ಅಂಕಲಿಶ್ರೀ ಚಾಲನೆ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.16
ಸ್ವಾಮಿ ವಿವೇಕಾನಂದ 150ನೇ ಜಯಂತ್ಯುತ್ಸವ ಅಂಗವಾಗಿ ವಿವೇಕಾನಂದರ ರಥಯಾತ್ರೆ ಮಂಗಳವಾರ ಲಿಂಗಸ್ಗೂರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ರಥಯಾತ್ರೆಗೆ ಅಂಕಲಿಮಠದ ಫಕೀರೇಶ್ವರ ಸ್ವಾಮಿಗಳು ಚಾಲನೆ ನೀಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯಾಲಯದ ಮುಂಭಾಗದಿಂದ ಆರಂಭಿಸಿದ ರಥಯಾತ್ರೆ ಸಾರಿಗೆ ಬಸ್ ಡಿಪೋ, ಅಂಚೆ ಕಚೇರಿ, ಗಡಿಯಾರ ಚೌಕ್, ಬಸ್ ನಿಲ್ದಾಣ ವೃತ್ತಗಳ ಮೂಲಕ ಸಂಚರಿಸಿ ನಂತರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆವರೆಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ರಥಯಾತ್ರೆ ಸಮಯದಲ್ಲಿ ಪಟ್ಟಣದ ವಿವಿಧ ಶಾಲೆಗಳ ಕೆಲ ಮಕ್ಕಳು ಸ್ವಾಮಿ ವಿವೇಕಾನಂದರ ವೇಷ- ಭೂಷಣ ಧರಿಸಿ ಆಗಮಿಸಿರುವುದು ಜನಮನ ಸೆಳೆಯಿತು.
ರಥಯಾತ್ರೆಯಲ್ಲಿ ರಾಮಕೃಷ್ಣಾಶ್ರಮದ ಸ್ವಾಮಿ ಮಹಾವಾಕ್ಯನಂದಜೀ ಮಹಾರಾಜ್, ಹುನಕುಂಟಿ ಶರಣಯ್ಯ ಶ್ರೀಗಳು, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಟಿ. ಜ್ಞಾನಪ್ರಕಾಶ, ಸಹಾಯಕ ಆಯುಕ್ತ ಟಿ. ಯೋಗೇಶ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಮಾಜಿ ಅಧ್ಯಕ್ಷ ಆರ್.ಎಸ್. ನಾಡಗೌಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಮೇಟಿ, ಬಿಜೆಪಿ ಮುಖಂಡರಾದ ಲಕ್ಷ್ಮೀಕಾಂತ ರಡ್ಡಿ, ರಮೇಶ ಜೋಷಿ, ಜಗನ್ನಾಥ ಕುಲ್ಕರ್ಣಿ, ಹನುಮೇಶ ಸರಾಫ್ ಹಾಗೂ ವಿವಿಧ ಶಾಲಾ- ಕಾಲೇಜಿನ ಸಾವಿರಾರು ಮಕ್ಕಳು ಭಾಗವಹಿಸಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

