ಕೊನೆಗೂ ಆರ್ಟಿಪಿಎಸ್ಗೆ ಕಲ್ಲಿದ್ದಲು ಹಂಚಿಕೆ!
ಕನ್ನಡಪ್ರಭ ವಾರ್ತೆ, ರಾಯಚೂರು, ಜು.21
ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ತಂದುಕೊಡುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರದ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕಲ್ಲಿದ್ದಲು ಲಿಂಕೇಜ್ ನೀಡದೇ ಸತಾಯಿಸಿತ್ತು. ಅದರಿಂದ ಬಿಜೆಪಿ ಸರ್ಕಾರದ ಉದ್ದೇಶಿತ ಥರ್ಮಲ್ ಘಟಕಗಳ ಸ್ಥಾಪನೆ ವಿಳಂಬವಾಗಿತ್ತು. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಳ್ಳಾರಿ, ರಾಯಚೂರು ಹಾಗೂ ಛತ್ತೀಸಗಡ್ದಲ್ಲಿನ ಉದ್ದೇಶಿತ ಥರ್ಮಲ್ ಘಟಕಗಳಿಗೆ ಕಲ್ಲಿದ್ದಲು ಹಂಚಿಕೆ ಮಾಡುವ ಕಾರ್ಯ ಕೇಂದ್ರ ಸರ್ಕಾರ ಮಾಡಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀವ್ರ ಬರಗಾಲದಿಂದಾಗಿ ವಿದ್ಯುತ್ ಕ್ಷಾಮ ಎದುರಾಗಿದ್ದರಿಂದ ಆಗಿನ ಸಿಎಂ ಯಡಿಯೂರಪ್ಪ ಅವರು ಬಳ್ಳಾರಿಯ ಮೂರನೇ ಘಟಕ, ರಾಯಚೂರಿನ ಯರಮರಸ್ ಮತ್ತು ಯದ್ಲಾಪುರಗಳಲ್ಲಿ ಹಾಗೂ ಛತ್ತೀಸಗಡದಲ್ಲಿ ಕಲ್ಲದ್ದಲು ಆಧಾರಿತ ವಿದ್ಯುತ್ ಘಟಕಗಳ ಸ್ಥಾಪನೆಗೆ ಮುಂದಾಗಿದ್ದರು. ಆಗ ಕೇಂದ್ರ ಕಲ್ಲಿದ್ದಲು ಒದಗಿಸುವ ಭರವಸೆ ನೀಡಿರಲಿಲ್ಲ. ಆದ್ದರಿಂದ ಈಗಾಗಲೇ ಆ ಯೋಜನೆಗಳು ಸಾಕಷ್ಟು ನಿಧಾನಗತಿಯಲ್ಲಿ ಸಾಗಿವೆ. ಈಗ ಕೇಂದ್ರ ಸರ್ಕಾರ ಕಲ್ಲಿದ್ದಲು ಒದಗಿಸಲು ಸಮ್ಮತಿಸಿದೆ. ಆದರೆ ಉದ್ದೇಶಿತ ಯೋಜನೆಗಳ ಕಾಮಗಾರಿ ಮಾತ್ರ ಕುಂಟುತ್ತಲೇ ಸಾಗಿದೆ.
ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಈಗಾಗಲೇ 8 ಘಟಕಗಳಲ್ಲಿ 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಆದರೆ ಬೇಸಿಗೆ ಸಂದರ್ಭದಲ್ಲಿ ವಿದ್ಯುತ್ಗೆ ಬೇಡಿಕೆ ಹೆಚ್ಚುತ್ತಿರುವುದು ಘಟಕಗಳ ಮೇಲೆ ಒತ್ತಡಕ್ಕೆ ದಾರಿಯಾಗುತ್ತಿದೆ. ಜತೆಗೆ ತಾಂತ್ರಿಕ ದೋಷದಿಂದಾಗಿ ಘಟಕಗಳು ಸ್ಥಗಿತಗೊಂಡು ರಾಜ್ಯ ಕತ್ತಲೆಗೆ ಸಿಲುಕಿದ್ದೂ ಇದೆ. ಇಂಥ ಸಂಕಷ್ಟದಿಂದ ಪಾರು ಮಾಡಲು ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ರಾಯಚೂರು ತಾಲೂಕಿನ ಯರಮರಸ್ ಮತ್ತು ಯದ್ಲಾಪುರಗಳಲ್ಲಿ ಹಾಗೂ ಬಳ್ಳಾರಿಯ ಮೂರನೇ ಘಟಕ ಸ್ಥಾಪನೆಗೆ ಮುಂದಾಗಿತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ 2009ರಲ್ಲಿಯೇ ಅಡಿಗಲ್ಲು ಹಾಕಿದ್ದರು. ಆದರೆ ಆಗ ಕೇಂದ್ರ ಸರ್ಕಾರ ಕಲ್ಲಿದ್ದಲು ಹಂಚಿಕೆಗೆ ನಿರಾಕರಿಸಿತ್ತು.
8000 ಕೋಟಿ ವೆಚ್ಚದ ಯೋಜನೆ: ಆಗ ರಾಜ್ಯದ ಇಂಧನ ಖಾತೆ ಹೊಣೆ ಹೊತ್ತಿದ್ದ ಶೋಭಾ ಕರಂದ್ಲಾಜೆ ಅವರು ಕೇಂದ್ರದ ಕಲ್ಲಿದ್ದಲು ಖಾತೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನ ನಡೆಸಿ ಕಲ್ಲಿದ್ದಲು ಹಂಚಿಕೆಗೆ ಒತ್ತಾಯಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಅದರಿಂದಾಗಿ 8000 ಕೋಟಿ ವೆಚ್ಚದ ರಾಯಚೂರಿನ ಎರಡು ಕಡೆಯ ವಿದ್ಯುತ್ ಉತ್ಪಾದನೆ ಯೋದನೆಗಳಿಗೆ ಹಿನ್ನಡೆಯಾಗಿತ್ತು. ಅದರಿಂದಾಗಿ ಈಗಾಗಲೇ ತಾಲೂಕಿನ ಯರಮರಸ್ ಬಳಿ ವಿದ್ಯುತ್ ಘಟಕದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದರೂ ಕಾಮಗಾರಿ ನಿಧಾನಗತಿಯಲ್ಲಿದೆ. ಅದೇ ರೀತಿ ಯದ್ಲಾಪುರ ಘಟಕದ ನಿರ್ಮಾಣ ಇನ್ನೂ ಆರಂಭಗೊಳ್ಳಬೇಕಿದೆ. ಕೇಂದ್ರ ಸರ್ಕಾರ ಆಗ ಕಲ್ಲಿದ್ದಲು ಹಂಚಿಕೆಗೆ ನಿರಾಸಕ್ತಿ ತೋರಿದ್ದರಿಂದ ರಾಜ್ಯ ಸರ್ಕಾರ ಕಾಮಗಾರಿ ಚುರುಕುಗೊಳಿಸಿರಲಿಲ್ಲ. ಸದ್ಯ ಕೇಂದ್ರ ಸರ್ಕಾರವು ರಾಜ್ಯದ ಉದ್ದೇಶಿತ ಥರ್ಮಲ್ ವಿದ್ಯುತ್ ಯೋಜನೆಗಳಿಗೆ 382 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಹಂಚಿಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದಾಗಿ ಉದ್ದೇಶಿತ ವಿದ್ಯುತ್ ಉತ್ಪಾದನೆ ಯೋಜನೆಗಳ ಕಾಮಗಾರಿ ಚುರುಕುಗೊಳ್ಳಲು ಸಾಧ್ಯವಾಗಲಿದೆ. ಆದರೂ ರಾಜ್ಯದ ಜನತೆ ಉದ್ದೇಶಿತ ಥರ್ಮಲ್ ಯೋಜನೆಗಳಿಂದ ವಿದ್ಯುತ್ ಪಡೆಯಲು ಮತ್ತಷ್ಟು ವರ್ಷಗಳ ಕಾಲ ಕಾಯಬೇಕಿದೆ. ಈಗಾಗಲೇ ಕಲ್ಲಿದ್ದಲು ಹಂಚಿಕೆಯ ವಿಳಂಬದಿಂದಾಗಿ ಕಾಮಗಾರಿ ವೆಚ್ಚ ಹೆಚ್ಚಳ ಕಂಡಿದೆ. ನಿರ್ಮಾಣ ವೆಚ್ಚದ ಹೆಚ್ಚಳವನ್ನು ಸರಿದೂಗಿಸುವ ಕಾರ್ಯ ಮೊದಲು ಸರ್ಕಾರ ಮಾಡಿ ಕಾಮಗಾರಿ ಚುರುಕುಗೊಳಿಸಬೇಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಲಿದ್ದಲು ಹಂಚಿಕೆಗೆ ನಿರಾಸಕ್ತಿ ತೋರಿದ್ದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಲ್ಲಿದ್ದಲು ಹಂಚಿಕೆಗೆ ಸಮ್ಮತಿಸಿದೆ. ಇದು ಅದರ ಧೋರಣೆಯನ್ನು ಹೊರ ಹಾಕಿದರೂ ರಾಜ್ಯದ ವಿದ್ಯುತ್ ಸಮಸ್ಯೆ ಮುಂದಿನ ವರ್ಷಗಳಲ್ಲಿ ನೀಗುವ ಲಕ್ಷಣಗಳು ಗೋಚರಿಸಿವೆ.
-ಜಗನ್ನಾಥ ಆರ್. ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

