ರಾಯಚೂರು

ತುಂಗಭದ್ರಾ ಎಡದಂಡೆ: ಸಮರ್ಪಕ ನೀರು ಪೂರೈಕೆಗೆ ರೈತ ಸಂಘ ಆಗ್ರಹ

Published On :

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಸಮರ್ಪಕ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು, ಕಾಲುವೆಗೆ ನೀರು ಹರಿಸಿ 15 ದಿನಗಳು ಕಳೆದರೂ ರೈತರಿಗೆ ನೀರು ದೊರೆಯುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆರೋಪಿಸಿದೆ.
ಈ ಕುರಿತು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್, ತುಂಗಭದ್ರಾ ಎಡದಂಡೆ ಕಾಲುವೆಗೆ ಜು.10ರಿಂದಲೇ ನೀರು ಹರಿಸಲಾಗುತ್ತಿದೆ. ಮೊದಲಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಿಂಧನೂರು ಮತ್ತು ಗಣೇಕಲ್ ನ ಕೆರೆಗಳ ಭರ್ತಿಗೆ ಅವಕಾಶ ನೀಡಲಾಗಿತ್ತು. ಅದರಿಂದಾಗಿ ರೈತರಿಗೆ ಆರಂಭದಲ್ಲಿ ನೀರು ದೊರೆಯಲಿಲ್ಲ.
ನೀರು ದೊರೆತಿಲ್ಲ: ಕಾಲುವೆಯ ಮೇಲ್ಭಾಗದಲ್ಲಿ ಹೆಚ್ಚಿನ ನೀರು ಬಳಕೆಯಾಗುತ್ತಿದ್ದು ಅದರ ತಡೆಗೆ ನೀರಾವರಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪರಿಣಾಮ ಕಾಲುವೆಗೆ ನೀರು ಹರಿಸಿ 15ದಿನಗಳೇ ಕಳೆದರೂ ಇದುವರೆಗೆ ಈ ಕೆರೆಗಳು ಪೂರ್ಣ ಭರ್ತಿಯಾಗಿಲ್ಲ. ಅಷ್ಟೇ ಅಲ್ಲ ಕಾಲುವೆಯ ಕಡೆಯ ಭಾಗದ ಮಾನವಿ ಮತ್ತು ರಾಯಚೂರು ತಾಲೂಕಿನ ರೈತರಿಗೆ ಹನಿ ನೀರು ದೊರೆತಿಲ್ಲ ಎಂದು ಆರೋಪಿಸಿದರು.
ಕಾಲುವೆಯಲ್ಲಿ ನೀರು ಹರಿಸಲಾರಂಭಿಸಿದ್ದರಿಂದ ಮಾನವಿ ಮತ್ತು ರಾಯಚೂರು ತಾಲೂಕಿನ ರೈತರು ಬತ್ತದ ನಾಟಿಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಸದ್ಯ ಕಾಲುವೆಯ ನೀರು ಗದ್ದೆಗಳಿಗೆ ಹರಿಯದಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬತ್ತದ ವಿಳಂಬ ನಾಟಿಯಿಂದಾಗಿ ಮುಂದಿನ ದಿನಗಳಲ್ಲಿ ಇಳುವರಿ ಹಾನಿ, ಸೂಕ್ತ ಬೆಲೆಯ ಕೊರತೆಯಂಥ ಸಮಸ್ಯೆಗಳು ರೈತರನ್ನು ಕಾಡಲಿವೆ ಎಂದು ದೂರಿದರು.
ಇಳುವರಿ ನಷ್ಟ: ಸೋನಾಮಸೂರಿ ಬತ್ತವನ್ನು ಜು.30ರೊಳಗೆ ನಾಟಿ ಮಾಡದಿದ್ದಲ್ಲಿ ಒಳ್ಳೆಯ ಇಳುವರಿ ನಿರೀಕ್ಷಿಸಲಾಗದು. ಪ್ರತಿ ಎಕರೆಗೆ 5ರಿಂದ 10ಚೀಲ ಇಳುವರಿ ನಷ್ಟವಾಗಲಿದೆ. ಈ ನಷ್ಟಕ್ಕೆ ಸದ್ಯ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಕೂಡಲೇ ಜಿಲ್ಲಾಡಳಿತ ಮಾನವಿ ಹಾಗೂ ರಾಯಚೂರು ತಾಲೂಕಿನ ರೈತರಿಗಾಗುವ ಹಾನಿ ತಪ್ಪಿಸಲು ಎಡದಂಡೆ ಮುಖ್ಯ ನಾಲೆಯ ನೀರಿನ ನಿರ್ವಹಣೆಯ ಹೊಣೆ ಹೊತ್ತುಕೊಳ್ಳಬೇಕು. ಕಾಲುವೆ ಪ್ರದೇಶದಲ್ಲಿ 144ನೇ ಕಲಂ ಅಡಿ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಮಾನವಿ ಮತ್ತು ರಾಯಚೂರು ತಾಲೂಕುಗಳ ಉಪಕಾಲುವೆಗಳಿಗೆ ಸಮರ್ಪಕ ನೀರು ಹರಿಸುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ನಿಟ್ಟಿನಲ್ಲಿ ನೀರಾವರಿ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರೈತರಿಗಾಗುತ್ತಿರುವ ಅಡಚಣೆ ತಪ್ಪಿಸದಿದ್ದಲ್ಲಿ ಎಲ್ಲ ರೈತರು ಶೀಘ್ರದಲ್ಲಿಯೇ ಹೋರಾಟಕ್ಕಿಳಿಯಲಿದ್ದಾರೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಆನಂದರಾವ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.