ಕೇಂದ್ರದ ನೀತಿಗಳಿಂದ ಆಹಾರ ಉತ್ಪಾದನೆ ಕುಸಿತ
ಕ.ಪ್ರ. ವಾರ್ತೆ ರಾಯಚೂರು ಜು.29
ಕೇಂದ್ರ ಸರ್ಕಾರದ ಉದಾರೀಕರಣ ನೀತಿಯಿಂದಾಗಿ ದೇಶದಲ್ಲಿ ಆಹಾರ ಉತ್ಪಾದನೆಗೆ ತೀವ್ರ ಹಿನ್ನಡೆಯಾಗುತ್ತಿದೆ. ಸರ್ಕಾರ ಆಹಾರ ಧಾನ್ಯಗಳ ಉತ್ಪಾದನೆಯ ಕಾರ್ಯ ಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ಬಳಿಯಿರುವ ಫಲವತ್ತಾದ ಜಮೀನನ್ನು ಸ್ವಾಧೀನ ಪಡಿಸಿಕೊಂಡು ವಿದೇಶಿ ಕಂಪನಿಗಳ ಮೂಲಕ ಕೃಷಿ ಚಟುವಟಿಕೆ ನಡೆಸುವ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಟೀಕಿಸಿದರು.
ರೈತರ ಕಡೆಗಣನೆ: ಕೇಂದ್ರ ಸರ್ಕಾರ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಕಡೆಗಣಿಸುತ್ತಿದೆ. ಭೂ ಸುಧಾರಣೆ ಕ್ರಮ ಜಾರಿಗೆ ತರಲು ನಿರಾಸಕ್ತಿ ತೋರುತ್ತಿರುವ ಸರ್ಕಾರಗಳು, ರೈತರ ಆತ್ಮಹತ್ಯೆಗೆ ದಾರಿ ಮಾಡುತ್ತಿವೆ. 1994ರಿಂದ 2013ರವರೆಗೆ 2.86 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳಿಂದಾಗಿ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.
ದೇಶದಲ್ಲಿ ಕೇಂದ್ರ ಸರ್ಕಾರದ ಉದಾರೀಕರಣ ನೀತಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈಗಾಗಲೇ 35 ಬಹುರಾಷ್ಟ್ರೀಯ ಸಂಸ್ಥೆಗಳು 12 ಲಕ್ಷ ಹೆಕ್ಟೇರ್ ಪ್ರದೇಶವನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿವೆ.
ರೈತರಿಂದ ಜಮೀನನ್ನು ಭೂ ಬ್ಯಾಂಕ್ ಸ್ಥಾಪನೆ ಮತ್ತಿತರೆ ಕಾರಣವೊಡ್ಡಿ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಅತಿ ಕಡಿಮೆ ಸಬ್ಸಿಡಿ: ದಲ್ಲಿದೆ. ಜಪಾನ್, ಅಮೆರಿಕ, ಯುರೋಪಿನಲ್ಲಿ ರೈತರಿಗೆ ಭಾರೀ ಪ್ರಮಾಣದ ಸಬ್ಸಿಡಿ ಒದಗಿಸಲಾಗುತ್ತದೆ. ಆದರೆ ಭಾರತದಲ್ಲಿ ಮಾತ್ರ ಪ್ರತಿ ರೈತನಿಗೆ 3,960 ಸಬ್ಸಿಡಿ ದೊರೆಯುತ್ತಿದೆ ಎಂದು ದೂರಿದರು.
ದೇಶದಲ್ಲಿ 76 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಭೂ ಹಿಡುವಳಿದಾರರ ಪೈಕಿ ಕೇವಲ 26 ಲಕ್ಷ ಜನರಿಗೆ ಮಾತ್ರ ಸಾಲ ಯೋಜನೆಗಳ ಲಾಭ ದೊರೆಯುತ್ತಿದೆ. ಇನ್ನುಳಿದ ರೈತರಿಗೆ ಸಾಲ ಇದುವರೆಗೆ ದೊರೆತಿಲ್ಲ. ಕೇಂದ್ರ ಸರ್ಕಾರ ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಜಮೀನಿನ ಮಾಲೀಕತ್ವ ಬದಲಾಯಿಸಲು ಚಿಂತನೆ ನಡೆಸಿದೆ ಎಂದು ಆರೋಪಿಸಿದರು.
ಯುಪಿಎ- ಎನ್ಡಿಎ ಒಂದೇ: ವಿದೇಶಿ ಸಂಸ್ಥೆಗಳಿಗೆ ಬೀಜೋತ್ಪಾದನೆ, ರಸಗೊಬ್ಬರ ಮತ್ತಿತರೆ ಕ್ಷೇತ್ರಗಳಲ್ಲಿ ಉತ್ಪಾದನೆಗೆ ಅವಕಾಶ ಕಲ್ಪಿಸುವ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವ ಕಾರ್ಯವನ್ನು ಕೇಂದ್ರ ಮಾಡುತ್ತಿದೆ. ಯುಪಿಎ ಮತ್ತು ಎನ್ಡಿಎ ಸರ್ಕಾರಗಳ ನೀತಿಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ವಿರೋಧಿ ನೀತಿಯಿಂದಾಗಿಯೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸ್ವಾಮಿನಾಥನ್ ವರದಿ ಸಲ್ಲಿಕೆಯಾಗಿ 7 ವರ್ಷಗಳೇ ಕಳೆದಿವೆ. ವರದಿ ಜಾರಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಕೆ.ಜಿ. ವೀರೇಶ್ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

