ರಾಯಚೂರು

ಸರ್ಕಾರಿ ಶೌಚಾಲಯ ಜಾಗದಲ್ಲಿ ಖಾಸಗಿ ಶಾಲಾ ಅಕ್ರಮ ಕಟ್ಟಡ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.5
ತಾಲೂಕಿನ ಬಳಗಾನೂರಿನ 3ನೇ ವಾರ್ಡ್‌ನ ಸರ್ಕಾರಿ ಮಹಿಳಾ ಶೌಚಾಲಯದ ಕಾಂಪೌಂಡ್ ಕಟ್ಟಡವನ್ನು ಬಳಸಿಕೊಂಡು ವಿದ್ಯಾದೇವಿ ಪಬ್ಲಿಕ್ ಶಾಲೆಯ ಕಟ್ಟಡವನ್ನು ಅಕ್ರಮವಾಗಿ ಕಟ್ಟಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.
ಗ್ರಾಪಂ ಪರವಾನಗಿ ಪಡೆಯದೆ ಮತ್ತು ಕಟ್ಟಡ ನಿರ್ಮಿಸಲು ಯಾವುದೇ ದಾಖಲೆಗಳಿಲ್ಲದೆ ಅನಧಿಕೃತವಾಗಿ ನಿರ್ಮಿಸುವ ಮೂಲಕ ಸರ್ಕಾರಿ ಜಾಗ ಕಬಳಿಸಲು ಯತ್ನಿಸಿದ್ದಾರೆ. ಈ ಸಂಬಂಧ ಗ್ರಾಪಂ ಆಡಳಿತ ಮಂಡಳಿ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮೂರು ಬಾರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದರೂ, ಇದಕ್ಕೆ ಕ್ಯಾರೆ ಅನ್ನದ ಅವರು ಕಟ್ಟಡ ಕೆಲಸ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. ಸ್ಥಳೀಯ ಪೊಲೀಸ್ ಠಾಣಾಧಿಕಾರಿಗಳ ಗಮನಕ್ಕೂ ತರಲಾಗಿದೆ.
ಪಿಡಿಒ ಕೈವಾಡ- ಆರೋಪ: ಕಟ್ಟಡ ನಿರ್ಮಿಸಿದ ಜಾಗೆಗೆ ಸಂಬಂಧಿಸಿದಂತೆ ಯಾವುದೇ ದಾಖಲೆ ಪತ್ರಗಳಾಗಲಿ ಮತ್ತು ಗ್ರಾಪಂ.ನಿಂದ ಪಡೆದ ಪರವಾನಗಿ ಪತ್ರವಾಗಲಿ, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಬಳಿ ಇಲ್ಲದಿದ್ದರೂ ಶಾಲಾ ಕಟ್ಟಡ ನಿರ್ಮಿಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೈವಾಡವಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಹಂದಿಗಳ ತಾಣ ಮತ್ತು ಶೌಚಾಲಯದ ದುರ್ನಾತ ಬೀರುವ ಸ್ಥಳದಲ್ಲಿ ಶಾಲೆ ಕಟ್ಟಿಸಿ ಮಕ್ಕಳಿಗೆ ಪಾಠ ಮಾಡುವುದು ಎಷ್ಟು ಸರಿ, ಇದು ಮಕ್ಕಳ ಬೌದ್ಧಿಕತೆಯ ಮೇಲೆ ಪರಿಣಾಮ ಬೀರುವುದಿಲ್ಲವೇ ಎನ್ನುವುದು ನಾಗರಿಕರ ಪ್ರಶ್ನೆ. ಈ ಸಂಬಂಧ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ತಕರಾರು ತೆಗೆದು ಮನವಿ ಕೊಟ್ಟಿದ್ದಾರೆ.
ಆಗ್ರಹ: ಸರ್ಕಾರಿ ಜಾಗ ದುರ್ಬಳಕೆ ಮಾಡಿಕೊಂಡಿರುವ ವಿದ್ಯಾದೇವಿ ಪಬ್ಲಿಕ್ ಶಾಲೆಯ ಕಟ್ಟಡವನ್ನು ತೆರವುಗೊಳಿಸಬೇಕು. ಈಗಿನ ಶೌಚಾಲಯದ ಸುತ್ತಲೂ ಪೂರ್ಣ ತಡೆಗೋಡೆ ನಿರ್ಮಿಸಿ ಮಹಿಳೆಯರಿಗೆ ಅನುಕೂಲ ಮಾಡಿಕೊಡಬೇಕು ಹಾಗೂ ಸರ್ಕಾರಿ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ಗ್ರಾಪಂ ಆಡಳಿತ ಮಂಡಳಿ ಎಚ್ಚರ ವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಎಚ್ಚರಿಕೆ: ಬೇಡಿಕೆಗಳಿಗೆ ಸಂಬಂಧಿಸಿದವರು ಸ್ಪಂದಿಸದಿದ್ದರೆ ಗ್ರಾಪಂ ಕಾರ್ಯಾಲಯದ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ತಾಪಂ ಮಾಜಿ ಸದಸ್ಯ ಬಸನಗೌಡ ಮದೇಗೌಡ್ರು, ಗ್ರಾಮದ ಎಚ್. ಮದರ, ದಶರಥ ಲೋಕ್ರೆ, ಸುರೇಶ ಶಿವಸಿಂಪಿಗೇರ್, ಹಂಪಮ್ಮ ಶಿವಸಿಂಪಿಗೇರ, ಬಸಮ್ಮ ಮರಡಿ, ದಾನಪ್ಪ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.