ರಾಯಚೂರು

ಜನಮುಖಿ ಆಡಳಿತಕ್ಕೆ ಒತ್ತು ಕೊಡಿ

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜೂ.6
ತಾಲೂಕಿನಲ್ಲಿ ಮುಂಗಾರು ಮಳೆ, ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ರೈತರ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮಕ್ಕಳು ಶಾಲೆಗೆ ತೆರಳುತ್ತಿದ್ದಾರೆ. ಹೀಗಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡಬೇಕು ಹಾಗೂ ಜನತೆ ಆರೋಗ್ಯ ಮತ್ತು ಮಕ್ಕಳಿಗೆ ಅಗತ್ಯ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ತಾಪಂ ಸದಸ್ಯರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸ್ಥಳೀಯ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ತಾಪಂ ಅಧ್ಯಕ್ಷೆ ಲಲಿತಮ್ಮ ಶಿವನಗೌಡ ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ ನೇತೃತ್ವದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಾಮಾನ್ಯ ಸಭೆ ಜರುಗಿತು.
ಕೃಷಿ: ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಸರಸ್ವತಿ ಇಲಾಖೆ ಪ್ರಗತಿ ವಿವರಿಸುತ್ತಾ, ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಆರಂಭದಲ್ಲಿ ನಿರೀಕ್ಷೆಗಿಂತ 131 ಮಿಮೀನಷ್ಟು ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಇದರಿಂದ ಪ್ರಸಕ್ತ ವರ್ಷ 67,070 ಹೆಕ್ಟೇರು ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರೈತರಿಗೆ ಸೂರ್ಯಕಾಂತಿ, ಹೆಸರು, ತೊಗರಿ ಸೇರಿದಂತೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತಿದೆ ಹಾಗೂ ಪತ್ತಿನ ಸಹಕಾರಿ ಸಂಘಗಳ ಮೂಲಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದೆಂದು ವಿವರಿಸಿದರು.
ಆರೋಗ್ಯ: ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 495 ಮಹಿಳಾ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಕಳೆದ ಐದು ತಿಂಗಳಲ್ಲಿ 49 ಪಿ.ವಿ ಹಾಗೂ 13 ಪಿ.ಎಫ್. ಸೇರಿದಂತೆ ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. ಮಳೆಗಾಲ ಆರಂಭದಿಂದ ಅಲ್ಲಲ್ಲಿ ನೀರು ಸಂಗ್ರಹಗೊಂಡು ಡೆಂಘಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಬರುವ ಸಾಧ್ಯತೆ ಇದೆ. ಸಂಬಂಧಿಸಿದ ತಾಪಂ, ಗ್ರಾಪಂ ಅಧಿಕಾರಿಗಳು ಮತ್ತು ಸಾರ್ವಜನಿಕರು ನೀರು ಸಂಗ್ರಹಗೊಂಡು ಕಲುಷಿತಗೊಳ್ಳದಂತೆ ಸ್ವಚ್ಛತೆ ಕಾಪಾಡಬೇಕೆಂದು ಮನವಿ ಮಾಡಿದರು.
ತಾಲೂಕಿನ ಮುದಗಲ್, ಮಾಕಾಪೂರ ಸೇರಿದಂತೆ ಗ್ರಾನೈಟ್ ಗಣಿಗಾರಿಕೆ ನಡೆಸುವ ಕಲ್ಲು ಕ್ವಾರಿ ಪ್ರದೇಶಗಳಲ್ಲಿ ತಗ್ಗು, ಗುಂಡಿ ನಿರ್ಮಾಣಗೊಂಡು ಮಳೆಯಿಂದ ನೀರು ಸಂಗ್ರಹಗೊಂಡು ಕಲುಷಿತಗೊಂಡಿವೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಬಗ್ಗೆ ಸಂಬಂಧಿಸಿದ ಕಂದಾಯ, ಲೋಕೋಪಯೋಗಿ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯ ರುದ್ರಗೌಡ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿಗಳು, ನೀರು ಸಂಗ್ರಹಗೊಂಡ ತಗ್ಗುಗಳಿಗೆ ಫಾಗಿಂಗ್ ಮಾಡಿಸಿದರೆ ಪ್ರಯೋಜನವಿಲ್ಲ ಮತ್ತು ರಾಸಾಯನಿಕ ಪೌಡರ್ ಹಾಕಿದರೆ ಜಾನುವಾರುಗಳು ನೀರು ಕುಡಿದರೆ ಪ್ರಾಣ ಹಾನಿಯಾಗುವ ಸಾಧ್ಯತೆ ಇದೆ. ಕಲ್ಲು ಕ್ವಾರಿಗಳಲ್ಲಿ ಮೀನು ಬಿಡುವುದು ಸಾಧ್ಯವಿಲ್ಲವೆಂದು ಪ್ರತಿಕ್ರಿಯಿಸಿದರು.
ಜೆಸ್ಕಾಂ: ಗಂಗಾ ಕಲ್ಯಾಣ ಯೋಜನೆಯಡಿ ಈ ವರ್ಷ ವೈಯಕ್ತಿಕ 39 ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆದಿದ್ದು, 157 ಅರ್ಜಿದಾರರು ಬಾಕಿ ಉಳಿದಿದ್ದಾರೆ. ಇಲಾಖೆಯಿಂದ 22 ಕಾಮಗಾರಿ ಪ್ರಗತಿಯಲ್ಲಿವೆ. 71 ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರು ಯೋಜನೆಯ 12 ಕಾಮಗಾರಿಗಳಿಗೆ ವಿದ್ಯುತ್ ಮಂಜೂರಾತಿ ಹಣ ಪಾವತಿ ಮಾಡಿರುವುದಿಲ್ಲ ಮತ್ತು ಸ್ಥಳ ತೋರಿಸಿರುವುದಿಲ್ಲ. 43 ಕೆಲಸ ಕೈಗೊಳ್ಳಲಾಗುತ್ತಿದೆ. 26 ಕೆಲಸ ಪೂರ್ಣಗೊಂಡಿವೆ ಎಂದು ಜೆಸ್ಕಾಂ ಇಲಾಖೆ ಅಧಿಕಾರಿ ರಿಯಾಜ್ ಅಹ್ಮದ್ ವರದಿ ವಿವರಿಸಿದರು.
ಗುರುಗುಂಟಾದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಕುಂಬಾರ ಓಣಿ ಮತ್ತು ಬಜಾರ್ ಏರಿಯಾದಲ್ಲಿ ಕಳೆದ ಐದಾರು ದಿನದಿಂದ ವಿದ್ಯುತ್ ಇಲ್ಲದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೆ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯ ಬಸವರಾಜ ದೊಡ್ಡಹೊಲ ಸೂಚಿಸಿದರು.
ಪಂಚಾಯತ್ ರಾಜ್:ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಿಪಂ ಅನುದಾನದ 37 ವಿವಿಧ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಸ್ಕಿ ಗ್ರಾಮದಲ್ಲಿ ರಾಜೀವಗಾಂಧಿ ರಾಷ್ಟ್ರೀಯ ಕುಡಿಯುವ ನೀರು ಸಬಬ್ಮಿಷನ್ ಯೋಜನೆ ಎಲ್ಲ ಕಾಮಗಾರಿ ಮುಗಿದಿದ್ದು, ಪಂಪಿಂಗ್ ಮೆಷಿನರಿ ಕೆಲಸ ಪ್ರಗತಿಯಲ್ಲಿದೆ. ಬಿಆರ್‌ಜಿಎಫ್ ಯೋಜನೆಯಡಿ ಪರಿಶಿಷ್ಟ ವರ್ಗದ ಸಂಕೀರ್ಣ ಕಾಮಗಾರಿ ಕಟ್ಟಡದ ಕೆಲಸ ಅಂತಿಮ ಹಂತದಲ್ಲಿದೆ. ಹಿರೆಹೆಸರೂರು, ಪೈದೊಡ್ಡಿ, ಕಡ್ಡೋಣ, ಚಿಕ್ಕಲೆಕ್ಕಿಹಾಳ ಗ್ರಾಮಗಳಲ್ಲಿ ಶಾಲಾ ಕಟ್ಟಡ ಕಾಮಗಾರಿ ಕೆಲಸ ಪೂರ್ಣಗೊಳಿಸಲಾಗಿದೆ. ಸಂತೆಕೆಲ್ಲೂರು, ಗೌಡೂರು ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗಿದೆ. 2012-13 ನೇ ಸಾಲಿನ ತಾಪಂ ಅನಿರ್ಬಂದಿತ ಅನುದಾನದ 80 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಪಂಚಾಯತ್ ರಾಜ್ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸಿ.ಎಸ್. ಪಾಟೀಲ್ ತಿಳಿಸಿದರು.
ಗುರುಗುಂಟಾ ಗ್ರಾಮದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ವಸತಿ ನಿಲಯದ ಕಟ್ಟಡ ಕಾಮಗಾರಿ ಹಲವು ವರ್ಷಗಳಿಂದ ವಿಳಂಬವಾಗುತ್ತಿದೆ. ಕಾಮಗಾರಿ ಪೂರ್ಣಗೊಂಡು ಸಂಬಂಧಿಸಿದ ಇಲಾಖೆಗೆ ಹಸ್ತಾಂತರ ಮಾಡುವುದರಲ್ಲಿ ಕುಸಿಯಲಿದೆ ಎಂದು ತಾಪಂ ಸದಸ್ಯ ಬಸವರಾಜ ದೊಡ್ಡಹೊಲ ಆಕ್ರೋಶ ವ್ಯಕ್ತಪಡಿಸಿದರು. ಹೊನ್ನಳ್ಳಿಯ ರಾಜೀವಗಾಂಧಿ ಕುಡಿಯುವ ನೀರು ಸಬ್ಮಿಷನ್ ಯೋಜನೆ ಕಾಮಗಾರಿ ಪೂರ್ಣಗೊಂಡು ನೀರು ಪೂರೈಕೆ ಮಾಡಲಾಗುತ್ತಿದೆ. ಆದರೂ ಸರ್ಜಾಪುರ ಹಾಗೂ ಚಿಕ್ಕಹೆಸರೂರು ಗ್ರಾಮಕ್ಕೆ ಮಾತ್ರ ನೀರು ಬರುತ್ತಿಲ್ಲ. ಯೋಜನೆ ಇದ್ದರೂ ಇಲ್ಲದಂತಾಗಿದೆ ಎಂದು ತಾಪಂ ಸದಸ್ಯ ಬಸನಗೌಡ ಕೊಡ್ಲಿ ದೂರಿದರು. ಹುನಕುಂಟಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಿದೆ ಹಾಗೂ ಹೊಂಡು ನೀರು ಸೇವಿಸುವಂತಾಗಿದೆ. ಗ್ರಾಪಂ ಅಧಿಕಾರಿಗಳು ಸರಿಯಾಗಿ ಕಚೇರಿಗೆ ಬರುವುದಿಲ್ಲ. ತಾಪಂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ತಾಪಂ ಸದಸ್ಯ ಪರಸಪ್ಪ ಹುನಕುಂಟಿ ಆರೋಪಿಸಿದರು.
ಇದಕ್ಕೆ ಅಧಿಕಾರಿ ಸಿ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ಹೊನ್ನಳ್ಳಿ ಕುಡಿಯುವ ನೀರು ಯೋಜನೆ ಕಾಮಗಾರಿ ಪೂರ್ಣಗೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ಕುಪ್ಪಿಗುಡ್ಡ, ಸರ್ಜಾಪುರ ಗ್ರಾಮಗಳಿಗೆ ನೀರು ಬರುತ್ತಿದೆ. ಸಂಬಂಧಿಸಿದ ಗ್ರಾಪಂ ಆಡಳಿತ ಮಂಡಳಿ ನಿರ್ವಹಣೆ ಮಾಡಬೇಕಿದ್ದು, ಈಗಾಗಲೆ ತಾಪಂ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. 7 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಸದರಿ ಯೋಜನೆ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕವಾಗಿ ನೀರು ಪೂರೈಕೆ ಮಾಡಿದ ಸಂದರ್ಭದಲ್ಲಿ ಚಿಕ್ಕಹೆಸರೂರು ಗ್ರಾಮಕ್ಕೆ ನೀರು ಬಂದ ಕುರಿತು ಭಾವಚಿತ್ರಗಳು ನೋಡಿ ಎಂದು ತೋರಿಸಿದರು.
ಬಿಇಒ: ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಭೋವಿ ಮಾತನಾಡಿ, ತಾಲೂಕಿನ ಬೇಡಿಕೆಯಂತೆ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ಎಸ್‌ಎಸ್‌ಎ ಯೋಜನೆಯಡಿ 2011-12 ನೇ ಸಾಲಿನ 5 ಹೆಚ್ಚುವರಿ ಶಾಲಾ ಕೊಠಡಿ ಕಾಮಗಾರಿ ಪ್ರಗತಿಯಲ್ಲಿವೆ ಎಂದು ಶಿಕ್ಷಣ ಇಲಾಖೆ ಪ್ರಗತಿ ವರದಿ ವಿವರಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಲಲಿತಮ್ಮ ಶಿವನಗೌಡ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ, ತಾಪಂ ಸದಸ್ಯರಾದ ದ್ರಾಕ್ಷಾಯಿಣಿ ಸಂತೆಕೆಲ್ಲೂರು, ಬಸಮ್ಮ ಹಟ್ಟಿ, ಪರಸಪ್ಪ ಹುನಕುಂಟಿ, ಬಸವರಾಜ ದೊಡ್ಡಹೊಲ, ರುದ್ರಗೌಡ, ಬಸನಗೌಡ ಕೊಡ್ಲಿ, ಕಂಠೆಪ್ಪಗೌಡ, ಹನುಮಂತಪ್ಪ ಮೋಚಿ, ತಿಮ್ಮಣ್ಣ ನಾಯಕ ಸೇರಿದಂತೆ ಆರೋಗ್ಯ, ಜೆಸ್ಕಾಂ, ಪಂಚಾಯತ್ ರಾಜ್ ಎಂಜಿನೀಯರಿಂಗ್, ಕೃಷಿ, ಶಿಕ್ಷಣ, ಭೂ ಸೇನಾ ನಿಗಮ, ಸಮಾಜ ಕಲ್ಯಾಣ, ಶಿಶು ಅಭಿವೃದ್ಧಿ, ರೇಷ್ಮೆ, ಸಾರಿಗೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಕಳಪೆ ಬೀಜ ಆರೋಪ
ಸರ್ಕಾರದಿಂದ ರೈತ ಸಂಪರ್ಕ ಕೇಂದ್ರಗಳಿಂದ ಪೂರೈಕೆ ಮಾಡುವ ಬಿತ್ತನೆ ಬೀಜಗಳು ಕಳಪೆ ಮಟ್ಟದಿಂದ ಕೂಡಿವೆ. ರೋಹಿಣಿ ಮಳೆಯಲ್ಲಿ ಬಿತ್ತನೆ ಮಾಡಬೇಕಾದ ಹೆಸರು ಬೀಜ ಪೂರೈಕೆ ಮಾಡುತ್ತಿಲ್ಲ. ರಸಗೊಬ್ಬರ ದರ ಖಾಸಗಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೂಡಲೆ ಈ ಬಗ್ಗೆ ಗಮನ ಹರಿಸಿ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ಮಾಡಬೇಕು. ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಎದುರಾಗದಂತೆ ಬೇಡಿಕೆಗೆ ಅನುಸಾರ ಪೂರೈಕೆ ಮಾಡಬೇಕು. ರಸಗೊಬ್ಬರ ದರ ಪರಿಶೀಲನೆ ಮಾಡಿ ವ್ಯತ್ಯಾಸ ಸರಿಪಡಿಸಬೇಕು.
 ಸರ್ಕಾರದ ವಿವಿಧ ಯೋಜನೆಯಿಂದ ರೈತರಿಗೆ ಅನುಕೂಲವಾಗಲೆಂದು ವಿತರಣೆ ಮಾಡಿದ ಸುಮಾರು 67 ರಾಶಿ ಯಂತ್ರಗಳಲ್ಲಿ ಕೆಲ ರೈತರು ಬೇರೊಬ್ಬರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ ಕುರಿತು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ತಾಪಂ ಸದಸ್ಯರಾದ ಕಂಠೆಪ್ಪಗೌಡ ಹಾಗೂ ರುದ್ರಗೌಡ ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.