ಅಗ್ಗದ ದರದಲ್ಲಿ ಮದ್ಯ; ಸರ್ಕಾರದ ಚಿಂತನೆಗೆ ವಿರೋಧ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.12
ರಾಜ್ಯ ಸರ್ಕಾರ ಅಗ್ಗದ ದರದಲ್ಲಿ ಮದ್ಯ ಮಾರಾಟ ಮಾಡುವ ಸರ್ಕಾರದ ಚಿಂತನೆ ಕೈಬಿಡುವಂತೆ ಒತ್ತಾಯಿಸಿ ನಗರದಲ್ಲಿ ಬುಧವಾರ ಸಂಜೆ ಸೋನಿಯಾ ಮಹಿಳಾ ತಾಲೂಕು ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮೊದಲಿಗೆ ತಹಸೀಲ್ದಾರ್ ಅವರಿಗೆ ಆನಂತರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಮದ್ಯಪಾನ ಸಾಮಾಜಿಕ ಪಿಡುಗಾಗಿದೆ. ಇದರಿಂದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ದೂರಿದರು.
ಮದ್ಯದ ಸೇವನೆಯಿಂದ ಈಗಾಗಲೇ ಮಹಿಳೆಯರು ಮತ್ತು ಮಕ್ಕಳು ನಾನಾ ರೀತಿಯ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮದ್ಯದ ಸೇವನೆಯೇ ಶೇ. 90ರಷ್ಟು ಕಾರಣ ಎಂಬುದು ಸಾಬೀತಾಗಿದೆ. ಆದರೂ ಸರ್ಕಾರ ಅಗ್ಗದ ದರದಲ್ಲಿ ಮದ್ಯ ಮಾರಾಟಕ್ಕೆ ಸಿದ್ಧತೆಗೆ ತೊಡಗಿರುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದರು.
ತೊಂದರೆ: ಗ್ರಾಮೀಣ ಪ್ರದೇಶದಲ್ಲಿ ಕುಡಿತದ ಚಟಕ್ಕೆ ಸಿಲುಕಿ ಕುಟುಂಬದ ಹಿರಿಯರನೇಕರು ತೀವ್ರ ಅನಾರೋಗ್ಯದಿಂದ ತೊಂದರೆ ಅನುಭವಿಸುತ್ತಿದ್ದು, ಕುಟುಂಬದ ನಿರ್ವಹಣೆಯೇ ಕಷ್ಟವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಹೊಸದಾಗಿ ಅಗ್ಗದ ದರದಲ್ಲಿ ಮದ್ಯ ಮಾರಾಟಕ್ಕೆ ಮುಂದಾದಲ್ಲಿ ಮತ್ತಷ್ಟು ಸಾಮಾಜಿಕ ಸಮಸ್ಯೆಗಳು ಉದ್ಭವವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಮದ್ಯದ ಅಮಲಿನಲ್ಲಿ ಜಗಳ, ಕೊಲೆಯಂಥ ಪ್ರಕರಣಗಳು ನಡೆದಿವೆ. ಅದರಲ್ಲೂ ಅಕ್ರಮವಾಗಿ ಆಂಧ್ರದಿಂದ ಒಳಸಾಗಿಸಲಾಗುತ್ತಿರುವ ಹೆಂಡದ ತಡೆಗೆ ಅನೇಕ ಬಾರಿ ಮಹಿಳೆಯರು ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರವೇ ಮದ್ಯ ಮಾರಾಟಕ್ಕೆ ಮುಂದಾದರೆ ಮಹಿಳೆಯರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಿಷ್ಕ್ರಿಯ ಅಬಕಾರಿ ಇಲಾಖೆ: ಗ್ರಾಮೀಣ ಪ್ರದೇಶದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿರುವ ಮದ್ಯದ ಬಗ್ಗೆ ಅಬಕಾರಿ ಇಲಾಖೆಗೆ ಸಾಕಷ್ಟು ಬಾರಿ ದೂರಲಾಗಿದೆ. ಆದರೆ ಕ್ರಮ ಮಾತ್ರ ಜರುಗಿಲ್ಲ. ಇದರಿಂದ ಅವ್ಯಾಹತವಾಗಿ ಮದ್ಯದ ಮಾರಾಟ ಸಾಗಿದೆ. ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿ ನಡೆದ ಹೋರಾಟಗಳಿಗೆ ಬೆಂಬಲ ದೊರೆಯುತ್ತಿಲ್ಲ. ಗ್ರಾಮದ ಹಿರಿಯರು ಮತ್ತು ಗ್ರಾಪಂ ಆಡಳಿತ ವರ್ಗದವರು ಈ ನಿಟ್ಟಿನಲ್ಲಿ ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶದಲ್ಲಿ ವಸ್ತುಸ್ಥಿತಿಯನ್ನು ಅರಿಯದೇ ರಾಜ್ಯದ ಕಾಂಗ್ರೆಸ್ ಸರ್ಕಾರ ಅಗ್ಗದ ದರದಲ್ಲಿ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಿರುವುದು ಸರಿಯಾದ ಕ್ರಮವಲ್ಲ. ಅದರಿಂದ ಮತ್ತಷ್ಟು ಸಮಸ್ಯೆಗಳು ಹೆಚ್ಚಾಗಲಿವೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ, ಕಡಿಮೆ ದರದಲ್ಲಿ ಮದ್ಯ ಮಾರಾಟದ ಚಿಂತನೆ ಕೈಬಿಡಬೇಕು. ಸದ್ಯ ಜಿಲ್ಲೆಯಾದ್ಯಂತ ಕದ್ದು ಮುಚ್ಚಿ ಮದ್ಯ ಮಾರಾಟವಾಗುತ್ತಿದ್ದು, ಅದಕ್ಕೆ ತಡೆಯೊಡ್ಡಬೇಕು. ಕುಡಿತದಿಂದ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಎಸಗುವವರಿಗೆ ತಕ್ಕ ಶಿಕ್ಷೆ ನೀಡುವತ್ತ ಗಮನಹರಿಸಲು ಒತ್ತಾಯಿಸಿದರು.
ಸಂಘಟನೆಯ ಅಧ್ಯಕ್ಷೆ ತಾಯಮ್ಮ, ಕಾರ್ಯದರ್ಶಿ ನರಸಮ್ಮ, ಮಾನಮ್ಮ, ಜ್ಯೋತಿ, ಸಿದ್ದಮ್ಮ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

