ವೈಜ್ಞಾನಿಕ ಕೃಷಿ ಪದ್ಧತಿಯಿಂದ ಇಳುವರಿ ಅಧಿಕ
ಕನ್ನಡಪ್ರಭ ವಾರ್ತೆ , ಲಿಂಗಸ್ಗೂರು , ಜೂ.21
ದೇಶದ ಇಂದಿನ ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿಜ್ಞಾನಿಗಳು ಅನೇಕ ಸಂಶೋಧನೆ ನಡೆಸಿದ್ದು, ವೈಜ್ಞಾನಿಕ ಕೃಷಿ ಅಳವಡಿಕೆಯಿಂದ ಉತ್ತಮ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಸಲಹೆ ನೀಡಿದರು.
ಸ್ಥಳೀಯ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಲಿಂಗಸ್ಗೂರು ತಾಲೂಕು ಕೃಷಿ ಉತ್ಸವ- 2013ರ ನಿಮಿತ್ತ ಏರ್ಪಡಿಸಿದ್ದ ಕೃಷಿ ವಸ್ತು ಪ್ರದರ್ಶನ ಮಾರಾಟ ಮೇಳ ಉದ್ಘಾಟಿಸಿ ನಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಯಿಂದ ರೈತರು ವಿಮುಖ: ಇತ್ತೀಚಿನ ದಿನಗಳಲ್ಲಿ ಬರಗಾಲ, ಪ್ರಕೃತಿ ವಿಕೋಪದಂತಹ ಅವಘಡಗಳು ಹಾಗೂ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರಲ್ಲಿ ಒಕ್ಕಲುತನದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಕೃಷಿಕರು ಒಕ್ಕಲುತನ ಕೈಬಿಟ್ಟು ಗುಳೆ ಹೊರಡುತ್ತಿದ್ದಾರೆ.
ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸಲು ಕೃಷಿ ಕ್ಷೇತ್ರ ಅಭಿವೃದ್ಧಿ ಪಡಿಸುವುದು ಅಗತ್ಯವಾಗಿದ್ದು, ಇಂತಹ ಬರಗಾಲ, ಪ್ರಕೃತಿ ವಿಕೋಪ, ಬೆಂಬಲ ಬೆಲೆ ಸಿಗದಿರುವುದು ಗಮನಿಸಿದರೆ ಸ್ವಾತಂತ್ರ್ಯ ಪೂರ್ವದ ಪರಾವಲಂಬಿ ಜೀವನ ಮತ್ತೆ ಮರುಕಳಿಸುವ ಆತಂಕ ಉದ್ಭವವಾಗುತ್ತದೆ.
ಉಪ ಕಸುಬಿನಿಂದ ಆರ್ಥಿಕ ಸಬಲತೆ: ರೈತರು ಕೃಷಿಯ ಜೊತೆಗೆ ಹೈನುಗಾರಿಕೆ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಉಪಕಸಬು ಮಾಡುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಬೇಕು. ಸರ್ಕಾರದ ಯೋಜನೆಗಳ ಕುರಿತು ಸಮರ್ಪಕವಾಗಿ ಮಾಹಿತಿ ಪಡೆದು ಉತ್ತಮ ಬೆಳೆ ಬೆಳೆಯಬೇಕೆಂದು ಕರೆ ನೀಡಿದರು.
ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಮರಣ್ಣ ಗುಡಿಹಾಳ ಮಾತನಾಡಿ, ದೇಶದ 120 ಕೋಟಿ ಜನರಿಗೆ ಆಹಾರ ನೀಡುವ ರೈತರು ಇಂದು ಸರ್ಕಾರದ ನಿರ್ಲಕ್ಷ್ಯ, ಬರಗಾಲ, ಪ್ರಕೃತಿ ವಿಕೋಪ, ವಿದ್ಯುತ್ ಅಭಾವ, ವೈಜ್ಞಾನಿಕ ಬೆಲೆ ಸಿಗದೆ ಸಾಲದ ಹೊರೆ ಮತ್ತು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅವೈಜ್ಞಾನಿಕ ಯೋಜನೆಗಳ ಜಾರಿ ಹಾಗೂ ರೈತರ ನೆರವಿಗೆ ಧಾವಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಕಚೇರಿಗೆ ಅಲೆಯುವ ಸ್ಥಿತಿ: ಸರ್ಕಾರದ ರೈತಪರ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜೆಸ್ಕಾಂ ಇಲಾಖೆ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಪಹಣಿ, ಆದಾಯ ಪ್ರಮಾಣ ಪತ್ರ, ಬಿಪಿಎಲ್ ಕಾರ್ಡ್, ಬಿತ್ತನೆ ಬೀಜ, ರಸಗೊಬ್ಬರ ಪಡೆಯಲು ರೈತರು ಹಾಗೂ ಮಕ್ಕಳು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಕಚೇರಿಗಳಲ್ಲಿ ಆಧುನಿಕ ಗಣಕೀಕೃತ ಯಂತ್ರಗಳು ಅಳವಡಿಸಿದರೂ ರೈತರಿಗೆ ಸಂಬಂಧಿಸಿದ ದಾಖಲೆ, ಪ್ರಮಾಣ ಪತ್ರ ಪಡೆಯಲು ಪರದಾಡುವ ಪರಿಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸರ್ಕಾರದ ವಿವಿಧ ಯೋಜನೆಗಳು ರೈತರಿಗೆ ದೊರೆಯಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಕಾರ ನೀಡಬೇಕು. ರೈತರಿಗೆ ಅವಶ್ಯವಿರುವ ವಿದ್ಯುತ್, ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಮಾನಪ್ಪ ವಜ್ಜಲ್, ಜಿಪಂ ಸದಸ್ಯರಾದ ಭೂಪನಗೌಡ ಕರಡಕಲ್, ಎಚ್.ಬಿ. ಮುರಾರಿ, ದುರುಗಮ್ಮ ಗುಂಡಪ್ಪ ನಾಯಕ, ತಾಪಂ ಅಧ್ಯಕ್ಷೆ ಲಲಿತಮ್ಮ ಶಿವನಗೌಡ, ಉಪಾಧ್ಯಕ್ಷ ಮಾನಪ್ಪ ಚವ್ಹಾಣ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಸಹಾಯಕ ಆಯುಕ್ತ ಟಿ.ಯೋಗೇಶ, ತಹಸೀಲ್ದಾರ್ ಎನ್.ಬಿ. ಪಾಟೀಲ್, ಡಿವೈಎಸ್ಪಿ ಅನಿತಾ ಹದ್ದಣ್ಣವರ, ತಾಪಂ ಇಒ ವೀರಭದ್ರಪ್ಪ, ಸಹಾಯಕ ಕೃಷಿ ನಿರ್ದೇಶಕಿ ಸರಸ್ವತಿ, ರೈತ ಮುಖಂಡ ಮಲ್ಲೇಶಗೌಡ ಮಟ್ಟೂರ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

