ಭಾರತೀಯ ಪರಂಪರೆಯಲ್ಲಿ ಜರ್ಮನ್ನರ ಸಂಭ್ರಮ
ಕ.ಪ್ರ. ವಾರ್ತೆ , ರಾಯಚೂರು , ಜೂ.22
ಕಾರ ಹುಣ್ಣಿಮೆ ಅಂಗವಾಗಿ ಮುನ್ನೂರು ಕಾಪು ಸಮಾಜ ಆಯೋಜಿಸುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಸಂಭ್ರಮಕ್ಕೆ ವಿದೇಶಿಗರು ಸಾಕ್ಷಿಯಾದದ್ದು ವಿಶೇಷ. ಕೇವಲ ರಾಜ್ಯದ ಮನೆ ಮನಗಳಿಗೆ ಸೀಮಿತವಾಗಿದ್ದ ಹಬ್ಬವು ಪ್ರಸಕ್ತ ವರ್ಷ ಜರ್ಮನ್ನರನ್ನು ಸಂಭ್ರಮದಲ್ಲಿ ತೇಲಿಸಿದ್ದು ಪ್ರಮುಖಾಕರ್ಷಣೆ.
ನಗರದ ರಾಜೇಂದ್ರ ಗಂಜ್ ನಲ್ಲಿ ಶನಿವಾರ ಆರಂಭಗೊಂಡ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೊದಲ ದಿನದ ಸ್ಪರ್ಧೆಗಳಲ್ಲಿ ಸ್ಥಳೀಯರಲ್ಲದೇ ನೆರೆ ಹೊರೆಯ ಜಿಲ್ಲೆಗಳ ಸಾವಿರಾರು ಸಂಖ್ಯೆಯ ವೀಕ್ಷಕರು ಆಗಮಿಸಿದ್ದರು. ಗಜಗಾತ್ರದ ಎತ್ತುಗಳು ಭಾರವಾದ ಕಲ್ಲು ಎಳೆಯುತ್ತಿದ್ದಂತೆಯೇ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯಾಗುತ್ತಿತ್ತು.
ಗ್ರಾಮೀಣ ಮಾದರಿ ವಸ್ತ್ರ: ಅದೇ ವೇಳೆ ಜರ್ಮನ್ ಪ್ರವಾಸಿಗರು ಮುಂಗಾರು ಹಬ್ಬವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದು, ನೆರೆದಿದ್ದವರಲ್ಲಿ ಸಂಭ್ರಮ ಇಮ್ಮಡಿಗೊಳಿಸಿತು. ಗ್ರಾಮೀಣರು ಧರಿಸುವ ಮಾದರಿಯಲ್ಲಿಯೇ ಜುಬ್ಬಾ, ಪಂಚೆ ತೊಟ್ಟು ಆಗಮಿಸಿದ್ದ ಜರ್ಮನಿ ಮೂಲದ ಪ್ರವಾಸಿಗರನ್ನು ರಾಯಚೂರು ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಅವರು ಬರಮಾಡಿಕೊಂಡರು.
ವಿದೇಶಿ ಪ್ರವಾಸಿಗರಾದ ಹೋಲಿ, ಜುಲಿಯಾನ್ ಮತ್ತು ಮಾರ್ಕ್ಸ್ ಅವರನ್ನು ಸಮಾರಂಭದ ವೇದಿಕೆಗೆ ಕರೆತಂದು ಶಾಲು ಹೊದಿಸಿ ಸನ್ಮಾನಿಸಿದರು.
ಈ ವೇಳೆ 'ಕನ್ನಡಪ್ರಭ'ಕ್ಕೆ ಮಾತನಾಡಿದ ಜುಲಿಯಾನ್, ಭಾರತೀಯ ಪರಂಪರೆ, ಸಂಸ್ಕೃತಿ, ಕಲೆ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಂದಲೇ ಮುಂಗಾರು ಹಬ್ಬದಲ್ಲಿ ಪಾಲ್ಗೊಂಡಿದ್ದು, ಗ್ರಾಮೀಣ ಬದುಕಿನ ಪರಿಚಯವಾಗುತ್ತಿದೆ. ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತಮಗೆ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿವಿಧ ಕಾರ್ಯಕ್ರಮ: ಮುಂದಿನ ಎರಡು ದಿನಗಳ ಕಾಲ ನಗರದಲ್ಲಿಯೇ ತಂಗಿದ್ದು ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಂಜಾಯ್ ಮಾಡುವುದಾಗಿ ತಿಳಿಸಿದ ಅವರು, ತಾವು ಸಮೂಹ ಸಂಸ್ಥೆಯ ಅಂಗವಿಕಲರ ಪುನಶ್ಚೇತನ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದಾಗ ಮುಂಗಾರು ಹಬ್ಬದ ಬಗ್ಗೆ ತಿಳಿಯಿತು. ಹಾಗೆಯೇ ಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾಗಿ ತಿಳಿಸಿದರು.
ಕಳೆದ 13 ವರ್ಷಗಳಿಂದ ನಗರದಲ್ಲಿ ಮುನ್ನೂರು ಕಾಪು ಸಮಾಜದಿಂದ ಆಯೋಜಿಸಲಾಗುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ವರ್ಷದಿಂದ ವರ್ಷಕ್ಕೆ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದೆ. ಇದುವರೆಗೆ ನೆರೆಹೊರೆಯ ರಾಜ್ಯಗಳಿಂದ ಪ್ರವಾಸಿಗರು ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಜರ್ಮನ್ ದೇಶದ ಪ್ರವಾಸಿಗರು ಮುಂಗಾರಿನ ಸಂಭ್ರಮ ವೀಕ್ಷಣೆಗೆ ಆಗಮಿಸಿದ್ದು ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

