ಪರಿಹಾರ ಮೊತ್ತ ಹೆಚ್ಚಳಕ್ಕೆ ಶೀಘ್ರ ಕೇಂದ್ರಕ್ಕೆ ಮೊರೆ
ಕನ್ನಡಪ್ರಭ ವಾರ್ತೆ , ರಾಯಚೂರು , ಜೂ.23
ಪ್ರಕೃತಿ ವಿಕೋಪ ಸಂದರ್ಭ ರೈತರಿಗೆ ನೀಡುವ ಹಾನಿಯ ಪ್ರತಿ ಎಕರೆವಾರು ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಚಿಂತನೆ ನಡೆಸಿರುವುದಾಗಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ನಗರದ ರಾಯಚೂರು ಕೃಷಿ ವಿವಿಯಲ್ಲಿ ಭಾನುವಾರ ಕೃಷಿ ಇಲಾಖೆಯ ಅಧಿಕಾರಿಗಳ ಸಭೆಯ ನಂತರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರ ಮತ್ತು ಪ್ರವಾಹ ಸಂದರ್ಭದಲ್ಲಿ ನೀಡುತ್ತಿರುವ ಎಕರೆವಾರು ಪರಿಹಾರದ ಮೊತ್ತದ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಮೊತ್ತದ ಹೆಚ್ಚಳಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದರು.
ನಿಧಿ ಬಳಕೆ ಮಾಡಲು ನಿರ್ದೇಶನ: ರಾಜ್ಯದಲ್ಲಿ ಸದ್ಯ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಬಳಿ ಒಟ್ಟು 238 ಕೋಟಿ ವಿಪತ್ತು ಪರಿಹಾರ ನಿಧಿ ಲಭ್ಯವಿದೆ. ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಮೊತ್ತದ ಬಳಕೆ ಮಾಡಲು ನಿರ್ದೇಶನ ನೀಡಿದ್ದಾರೆ. ಆನಂತರವೇ ಕೇಂದ್ರದ ಬಳಿ ಮತ್ತಷ್ಟು ಅನುದಾನಕ್ಕೆ ಕೋರಲು ಸಾಧ್ಯವಾಗಲಿದೆ ಎಂದು ಹೇಳಿದರು.
ರಾಜ್ಯದ ರೈತರಿಗೆ ನಕಲಿ ಬಿತ್ತನೆ ಬೀಜದ ಸಮಸ್ಯೆಯಿರುವುದು ಗಮನಕ್ಕೆ ಬಂದಿದ್ದು, ಆಂಧ್ರದಿಂದ ಇಂಥ ಬಿತ್ತನೆ ಬೀಜ ಪೂರೈಕೆಯಾಗುತ್ತಿದೆ ಎಂಬುದು ಅಧಿಕಾರಿಗಳಿಂದ ಮಾಹಿತಿ ಬಂದಿದೆ. ಈ ಬಗ್ಗೆ ನೆರೆಯ ಆಂಧ್ರ ಸರ್ಕಾರಕ್ಕೆ ಇಂಥ ಅಕ್ರಮ ತಡೆಗೆ ತಾಕೀತು ಮಾಡುವುದಾಗಿ ತಿಳಿಸಿದ ಅವರು, ಪೊಲೀಸ್ ಇಲಾಖೆಗೆ ಈ ಬಗ್ಗೆ ನಿರ್ದೇಶನ ನೀಡಿದ್ದು, ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ ಎಂದರು.
ಕೃಷಿ ನಿರ್ದೇಶಕರಿಗೆ ಸೂಚನೆ: ರೈತರಿಗೆ ರಸಗೊಬ್ಬರದ ಜತೆ ಒತ್ತಾಯಪೂರ್ವಕವಾಗಿ ಮತ್ತಿತರೆ ರಾಸಾಯನಿಕಗಳನ್ನು ವರ್ತಕರು ನೀಡಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಲಾಗಿದೆ. ಅನಗತ್ಯವಾಗಿ ರೈತರ ಮೇಲೆ ಆರ್ಥಿಕ ಹೊರೆ ಹೆಚ್ಚಿಸುವ ಯಾವುದೇ ರೀತಿಯ ಅಕ್ರಮ ತಡೆಗೆ ಆದೇಶಿಸಿದ್ದಾಗಿ ತಿಳಿಸಿದರು.
ಕೃಷಿ ಇಲಾಖೆಯಲ್ಲಿ ರಾಜ್ಯಾದ್ಯಂತ ಸಿಬ್ಬಂದಿ ಕೊರತೆಯಿದೆ. ಅದರ ನಿವಾರಣೆಯ ಮಾರ್ಗೋಪಾಯ ಕಂಡುಕೊಳ್ಳಲಾಗುತ್ತಿದೆ. ಕೃಷಿ ವಿವಿಗಳಲ್ಲಿ ಪದವಿ ಪಡೆದಂಥವರನ್ನು ನಿಯೋಜಿಸುವ ಮೂಲಕ ಸಮಸ್ಯೆ ಪರಿಹರಿಸಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.
ಸಾವಯವ ಕೃಷಿಗೆ ಹೆಚ್ಚಿನ ಒತ್ತು: ಕಳೆದ ಸರ್ಕಾರ ರೈತರ ಅಭಿವೃದ್ಧಿ ಹೆಸರಿನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪಕ್ಷದ ಸಂಘಟನೆಗೆ ಅವಕಾಶ ಕಲ್ಪಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಯಾವುದೇ ಕಾರ್ಯ ಕೈಗೊಳ್ಳುವುದಿಲ್ಲ. ರೈತರನ್ನು ಸಾವಯವ ಕೃಷಿ ಅಳವಡಿಸಿಕೊಳ್ಳುವಂತೆ ಒತ್ತಡ ಹೇರುವುದಿಲ್ಲ ಎಂದ ಅವರು, ಸಾವಯವ ಕೃಷಿಯನ್ನು ಒಂದು ಕೃಷಿ ಪದ್ಧತಿಯಾಗಿ ಸರ್ಕಾರ ಪರಿಗಣಿಸಲಿದೆ ಎಂದು ಹೇಳಿದರು.
ತುಂಗಭದ್ರಾ ನದಿ ನೀರಾವರಿ ಯೋಜನೆ ಅಡಿ 96 ಸಾವಿರ ಹೆಕ್ಟೇರ್ ಪ್ರದೇಶ ಸವಳಾಗಿ ಪರಿವರ್ತನೆಗೊಂಡಿರುವುದು ಆತಂಕಕಾರಿ ಸಂಗತಿಯಾಗಿದ್ದು, ಕೃಷಿ ಇಲಾಖೆ ಮತ್ತು ಕೃಷಿ ವಿವಿ ಸಹಯೋಗದಲ್ಲಿ ರೈತರಲ್ಲಿ ನೀರಿನ ಮಿತ ಬಳಕೆ ಮತ್ತು ಸವಳು ನಿವಾರಣೆ ಕ್ರಮದ ಬಗ್ಗೆ ಜನಜಾಗೃತಿ ಮೂಡಿಸಲು ಸೂಚಿಸಿದ್ದಾಗಿ ತಿಳಿಸಿದರು.
ರಾಯಚೂರು ಕೃಷಿ ವಿವಿಗೆ ಇದುವರೆಗೆ ಅಷ್ಟಾಗಿ ಮಹತ್ವ ದೊರೆತಿಲ್ಲ. ಕಳೆದ ಸರ್ಕಾರದ ಅವಧಿಯಲ್ಲಿ ಹೊಸ ವಿವಿಗೆ ನೀಡಬೇಕಿದ್ದ ಅನುದಾನ ಲಭ್ಯವಾಗಿಲ್ಲ ಎಂಬುದು ಗೊತ್ತಾಗಿದ್ದು, ಮೂಲಸೌಕರ್ಯಾಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರ ವಿವಿಗೆ ಸಹಕಾರ ನೀಡಲಿದೆ ಎಂದು ಹೇಳಿದರು.
ಜವಳಗೇರಾ ಗ್ರಾಮದಲ್ಲಿರುವ ಸೆಂಟ್ರಲ್ ಸ್ಟೇಟ್ ಫಾರ್ಮ್ನ ಹಸ್ತಾಂತರಕ್ಕೆ ಸಂಬಂಧಿಸಿ ಶೀಘ್ರದಲ್ಲಿಯೇ ಕೃಷಿ ವಿವಿ ಮತ್ತು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜತೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರದ ನಂತರ ಕೇಂದ್ರ ಬಳಿ ತೆರಳುವ ಬಗ್ಗೆ ಯೋಚಿಸುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

