ಅಕ್ರಮ ಗಣಿಗಾರಿಕೆಗೆ ಶಾಸಕರ ಕುಮ್ಮಕ್ಕು; ಜು.5ರಿಂದ ಧರಣಿ
ರಾಯಚೂರು: ಮಾನವಿ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಅದರ ತಡೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶವನ್ನು ಪಾಲಿಸಲು ಮಾನವಿ ಶಾಸಕ ಹಂಪಯ್ಯ ನಾಯಕ ಮತ್ತು ಮಾಜಿ ಶಾಸಕ ಬೋಸರಾಜು ಅಡ್ಡಿಯುಂಟು ಮಾಡುತ್ತಿದ್ದಾರೆ. ಜನಪ್ರತಿನಿಧಿಗಳ ವರ್ತನೆ ವಿರೋಧಿಸಿ ಹಾಗೂ ಡಿಸಿ ಆದೇಶ ಜಾರಿಗೆ ಆಗ್ರಹಿಸಿ ಜು.5ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ಅಧ್ಯಕ್ಷ ಆರ್. ಮಾನಸಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನವಿ ಪಟ್ಟಣದ ಹೊರವಲಯದಲ್ಲಿ ಸರ್ಕಾರಿ ಜಮೀನಿನಲ್ಲಿ ಗುತ್ತಿಗೆದಾರ ಎಂ. ಈರಣ್ಣ ಮತ್ತಿತರರು ಒಟ್ಟು 100 ಎಕರೆ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ದಾಖಲೆಗಳ ಪ್ರಕಾರ ಈ ಅಕ್ರಮ ಸಾಬೀತಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು ಸ್ಥಳ ಪರಿಶೀಲನೆ ನಡೆಸಿ ಮಾನವಿ ತಹಸೀಲ್ದಾರ್ ಅವರಿಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಆದೇಶಿಸಿದ್ದರು. ಆದರೆ ಮಾನವಿ ತಹಸೀಲ್ದಾರ್ ಅವರ ಮೇಲೆ ಶಾಸಕ ಹಂಪಯ್ಯ ನಾಯಕ ಮತ್ತು ಮಾಜಿ ಶಾಸಕ ಬೋಸರಾಜು ಅವರು ಒತ್ತಡ ಹೇರುವ ಮೂಲಕ ಪ್ರಕರಣ ದಾಖಲಿಸದಂತೆ ತಡೆದಿದ್ದಾರೆಂದು ಆರೋಪಿಸಿದರು.
ಕಳೆದೊಂದು ವರ್ಷದಿಂದ ರೈತ ಸಂಘವು ನಡೆಸಿದ ಹೋರಾಟದ ಫಲವಾಗಿ ಅಕ್ರಮ ಸಾಬೀತಾಗಿದೆ. ಅಕ್ರಮ ಪತ್ತೆಯಾಗಿದ್ದರೂ ಶಾಸಕರು ಹಾಗೂ ಹಿರಿಯ ರಾಜಕಾರಣಿಯ ಬೆಂಬಲದಿಂದಾಗಿ ಗುತ್ತಿಗೆದಾರರ ಕಾನೂನು ಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದ್ದಾರೆಂದು ದೂರಿದರು.
ಶಾಸಕ ಹಂಪಯ್ಯ ನಾಯಕ, ಮಾಜಿ ಶಾಸಕ ಬೋಸರಾಜು ಅವರು ಕೂಡಲೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಅಕ್ರಮಕ್ಕೆ ಬೆಂಬಲ ನೀಡದೇ ಪ್ರಕರಣ ದಾಖಲಿಸಲು ಅವಕಾಶ ನೀಡಬೇಕು. ತಪ್ಪಿದಲ್ಲಿ ಜು.5ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಸಂಘಟನೆಯ ಪ್ರಮುಖರಾದ ರಾಜಶೇಖರ್, ಮುದುಕಪ್ಪ ನಾಯಕ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

