ರಾಯಚೂರು

ಇಂದು ರೇಣುಕಾಚಾರ್ಯರ ಯುಗಮಾನೋತ್ಸವ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.26
ಸಿಂಧನೂರಿನ ಬಾಳೆಹೊನ್ನೂರು ಖಾಸಾಶಾಖಾ ಮಠದಿಂದ ಜೂ.27ರಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಸತ್ಯಾ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ ತಿಳಿಸಿದ್ದಾರೆ.
ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರಿಬಸಯ್ಯಸ್ವಾಮಿ ಸರಗಣಾಧೀಶ್ವರ ಸ್ಮರಣಾರ್ಥವಾಗಿ ಸಂಸ್ಕೃತ ಜ್ಯೋತಿಷ್ಯ ವೈದಿಕ ಪಾಠಶಾಲೆ ಉದ್ಘಾಟಿಸಲಾಗುವುದು. ಕಾರ್ಯಕ್ರಮಕ್ಕೆ ವಿವಿಧ ಹರ, ಗುರು, ಚರಮೂರ್ತಿಗಳು ಪಾಲ್ಗೊಳ್ಳುವರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ ಸರಗಣಾಧೀಶ್ವರ ಸಿರಿ ಗ್ರಂಥ ಬಿಡುಗಡೆ ಮಾಡುವರು. ಇಲಕಲ್‌ನ ಜಾನಪದ ವಿದ್ವಾಂಸ ಪ್ರೊ. ಶಂಭು ಬಳಿಗಾರ ವಿಶೇಷ ಉಪನ್ಯಾಸ ಮಾಡುವರು.
ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದ ಶಿವರಾಮೇಗೌಡ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎಸ್. ವಾಗಿಸ್ ಪ್ರಸಾದ, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಎನ್.ಶಿವನಾಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಜಿಪಂ ಮಾಜಿ ಸದಸ್ಯರಾದ ಅಮರೇಗೌಡ ವಿರುಪಾಪೂರ, ಕೆ.ಕರಿಯಪ್ಪ, ನ.ಯೋ.ಪ್ರಾ.ಮಾಜಿ ಅಧ್ಯಕ್ಷ ಎನ್. ಶಿವನಗೌಡ ಗೊರೇಬಾಳ ಸೇರಿದಂತೆ ಮತ್ತಿತರರು ಭಾಗವಹಿಸುವರು.
ಸಿಂಧನೂರು, ಮಸ್ಕಿ ನೂತನ ಶಾಸಕರಿಗೆ, ನಗರಸಭೆ ನೂತನ ಸದಸ್ಯರಿಗೆ, ವಿವಿಧ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನಿಸಲಾಗುವುದು. ಅಂದು ಬೆಳಗ್ಗೆ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಸತ್ಯಾಗಾರ್ಡನ್‌ವರೆಗೆ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರವನ್ನು ಸುಮಂಗಲಿಯರಿಂದ ಆರತಿ, ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆ ಮೂಲಕ ಕರೆ ತರಲಾಗುವುದು. ಕಾರ್ಯಕ್ರಮಕ್ಕೆ ಸಮಾಜದ ಬಾಂಧವರು ತಪ್ಪದೇ ಆಗಮಿಸಬೇಕೆಂದು ಕೋರಿದರು.
ನೋಂದಣಿ ಅಭಿಯಾನ: ತಾಲೂಕು ವೀರಶೈವ ಸಂಘಕ್ಕೆ ಹೊಸದಾಗಿ ಸದಸ್ಯತ್ವ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ತಿಳಿಸಿದ್ದಾರೆ.
ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸದಸ್ಯತ್ವ ಹೊಂದ ಬಯಸುವವರು ಮಹಾಪೋಷಕರಿಗೆ 10 ಸಾವಿರ, ಪೋಷಕರಿಗೆ 5 ಸಾವಿರ, ಅಜೀವ ಸದಸ್ಯತ್ವಕ್ಕೆ 2 ಸಾವಿರ, ವಾರ್ಷಿಕ ಸದಸ್ಯತ್ವಕ್ಕೆ 200 ಶುಲ್ಕ ನಿಗದಿಪಡಿಸಲಾಗಿದೆ. ಅಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ನಗರದ ಕೋಟೆ ಬಸವಕಲ್ಯಾಣ ಮಂಟಪದಲ್ಲಿ ನೋಂದಣಿ ಕಾರ್ಯ ನಡೆಯಲಿದ್ದು, ಆಸಕ್ತರು ಸದಸ್ಯತ್ವ ಪಡೆಯುವಂತೆ ಕೋರಿದ್ದಾರೆ.
ಮಲ್ಲಿಕಾರ್ಜುನ ಕಲ್ಯಾಣೋತ್ಸವ ರಥ: ಮುಂದಿನ ತಿಂಗಳ ಜುಲೈ 2ರಂದು ಲಿಂಗಸ್ಗೂರಿನಿಂದ ಶ್ರೀಶೈಲ ಮಲ್ಲಿಕಾರ್ಜುನ ಕಲ್ಯಾಣೋತ್ಸವ ರಥ ಆಗಮಿಸಲಿದೆ. ಪಿಡಬ್ಲ್ಯೂಡಿ ಕ್ಯಾಂಪ್‌ನಿಂದ ಮೆರವಣಿಗೆಯ ಮೂಲಕ ಸತ್ಯಾ ಗಾರ್ಡನ್‌ವರೆಗೆ ರಥವನ್ನು ಅದ್ಧೂರಿಯಾಗಿ ಕರೆತರಲಾಗುವುದು. ನಂತರ ಸಾರ್ವಜನಿಕ ಸಭೆ ನಡೆಯುವುದು. ಕಾರ್ಯಕ್ರಮದಲ್ಲಿ ವೀರಶೈವರು ಪಾಲ್ಗೊಳ್ಳಬೇಕೆಂದು ಅಶೋಕ ಗದ್ರಟಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಕಾರ್ಯದರ್ಶಿ ಅಮರೇಶ ಕುಂಬಾರ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ, ಮಾಜಿ ಸದಸ್ಯ ಎಸ್.ಶರಣೇಗೌಡ, ಪುರಸಭೆ ಮಾಜಿ ಸದಸ್ಯ ಶಿವಕುಮಾರ ಜವಳಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.