ವೈಚಾರಿಕತೆ ನೆಪದಲ್ಲಿ ವೀರಶೈವ ಸಂಸ್ಕೃತಿಗೆ ಅಪಚಾರ ಸಲ್ಲದು
ಕನ್ನಡಪ್ರಭ ವಾರ್ತೆ ಸಿಂಧನೂರು ಜೂ.27
ಇಪ್ಪತ್ತೆಂಟು ಶಿವಾಗಮಗಳು ವೀರಶೈವ ಧರ್ಮದ ಮೂಲಬೇರುಗಳು. ವೀರಶೈವ ಧರ್ಮ ಸಂಸ್ಕೃತಿಯ ಪ್ರಾಚೀನತೆ ಮತ್ತು ಪರಂಪರೆಯ ಮಾಹಿತಿ ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿವಮಣಿ ಧರ್ಮ ಗ್ರಂಥದಲ್ಲಿ ಉಲ್ಲೇಖವಾಗಿದೆ. ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳು ನಾಶವಾಗಬಾರದು. ವೈಚಾರಿಕತೆ ಮತ್ತು ಸುಧಾರಣೆ ಹೆಸರಿನಲ್ಲಿ ವೀರಶೈವ ಸಂಸ್ಕೃತಿಗೆ ಅಪಚಾರ ಮಾಡಬಾರದು ಎಂದು ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಚಾರ್ಯರು ಅಭಿಪ್ರಾಯಪಟ್ಟರು.
ನಗರದ ಸತ್ಯಾ ಗಾರ್ಡನ್ನಲ್ಲಿ ಗುರುವಾರ ಆಯೋಜಿಸಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕ ಸಂಪತ್ತು ದೊಡ್ಡದು: ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ವೀರಶೈವ ಧರ್ಮದ ವಿಚಾರಧಾರೆಗಳು ಸಕಲರಿಗೂ ದಾರಿದೀಪವಾಗಿವೆ. ಧಾರ್ಮಿಕವಾಗಿ, ತಾತ್ವಿಕವಾಗಿ ಮತ್ತು ಸಾಮಾಜಿಕವಾಗಿ ವೀರಶೈವ ಧರ್ಮ ಚಿಂತಿಸಿ ಸಕಲರಿಗೂ ಸನ್ಮಾರ್ಗ ದರ್ಶನ ನೀಡಿದೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹಕ್ಕೆ ಮತ್ತು ಚರಿತ್ರೆಗಿಂತ ಚಾರಿತ್ರ್ಯಕ್ಕೆ ವಿಶೇಷವಾದ ಮಹತ್ವವನ್ನು ರೇಣುಕಾಚಾರ್ಯರು ನೀಡಿದ್ದಾರೆ. ಇದು ಅವರ ಸಮಷ್ಠಿ ಪ್ರಜ್ಞೆಗೆ ಸಾಕ್ಷಿಯಾಗಿದೆ. ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಮಹತ್ವದ್ದು ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ರವುಡುಕುಂದ ಸಂಸ್ಥಾನ ಮಠದ ಮರಿಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಕನ್ನೂರು, ಬಾಳೆಹೊನ್ನೂರು ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಲಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ, ಧರ್ಮಗಳು ಇತರರಿಗೆ ಮಾರ್ಗದರ್ಶನ ಕೊಡುವಂತೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಹೆಚ್ಚು ಹೆಚ್ಚು ಶಿಕ್ಷಣವಂತರಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ನಗರಸಭೆ ಸದಸ್ಯರು, ಮತ್ತಿತರ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮುದೇನೂರು, ಅಭಿನವ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ತಡವಲಗಾ, ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಜಮಖಂಡಿ, ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತೊರವಿ, ಶಶಿಧರ ಶಾಸ್ತ್ರಿ ಕಂಪ್ಲಿ ರುದ್ರಮುನಿ ದೇವರು ಮಸ್ಕಿ, ಶಿವಪ್ರಕಾಶ ಶರಣರು ಹೆಬ್ಬಾಳ, ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜ, ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಎನ್.ಶಿವನಾಗಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಬಿಜೆಪಿ ಅಧ್ಯಕ್ಷ ಅಮರೇಗೌಡ ವಿರಪಾಪೂರ, ನಯೋಪ್ರಾ ಮಾಜಿ ಅಧ್ಯಕ್ಷ ಎನ್.ಶಿವನಗೌಡ ಗೋರೇಬಾಳ, ಮುಖಂಡರಾದ ಪಂಪನಗೌಡ ತಾವರಗೇರಾ, ಅಮರೇಶ ಕುಂಬಾರ, ಶರಣಬಸವ ವಕೀಲರು, ಬಸಪ್ಪ ಮುರಾಳ, ಮಲ್ಲಿನಾಥ ಶಾಸ್ತ್ರಿ ತಿಡಿಗೋಳ, ಬಸವರಾಜ ತೊಂತನಾಳ, ಆದಪ್ಪ ನಾಗಲಿಕರ, ಲಿಂಗರಾಜ ಹೂಗಾರ, ಅಮರೇಶ ಹರೇಟನೂರು, ಲಿಂಗರಾಜ ಹಂಚಿನಾಳ ಕ್ಯಾಂಪ್, ಪಂಪಾಪತಿ ಶಾಸ್ತ್ರಿ, ಶಶಿಧರ ಶಾಸ್ತ್ರಿ, ಉಪಸ್ಥಿತರಿದ್ದರು.
ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಶೈವ ಸಂಘದ ಅಧ್ಯಕ್ಷ ಅಶೋಕಗೌಡ ಗದ್ರಟಗಿ ಸ್ವಾಗತಿಸಿದರು. ಬಸವರಾಜ ಬಾದರ್ಲಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

