ಕಿಲಾರಹಟ್ಟಿ ಕೆರೆ ಜಮೀನು ಕಬಳಿಕೆ
ಪಂಪಯ್ಯ ಮಠ
ಕನ್ನಡಪ್ರಭ ವಾರ್ತೆ ಮುದಗಲ್ ಜೂ.28
ಸರ್ಕಾರದ ಜಮೀನನ್ನು ಆಕ್ರಮಿಸಿಕೊಂಡು ಗ್ರಾನೈಟ್ ಗಣಿಗಾರಿಕೆ ಹಾಗೂ ಸಾಗುವಳಿ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ಈ ಕೆರೆ ತಮಗೆ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ಮೌನ ವಹಿಸಿದ್ದಾರೆ.
ಪಟ್ಟಣಕ್ಕೆ ಸಮೀಪದ ಕಿಲಾರಹಟ್ಟಿ ಗ್ರಾಮದ ಸರ್ವೆ ನಂ. 40ರಲ್ಲಿ 80.32 ಎಕರೆ, ಸರ್ವೆ ನಂ. 60ರಲ್ಲಿ 116.2 ಎಕರೆ ಸೇರಿ 196.34 ಎಕರೆ ಜಮೀನು ಕೆರೆಗೆಂದು ಮತ್ತು ಗೌಂಟಾಣವೆಂದು ಸರ್ಕಾರ ಜಮೀನು ಬಿಟ್ಟಿದೆ. ಮಳೆಗಾಲದಲ್ಲಿ ನೀರು ತುಂಬಿ ಜನ- ಜಾನುವಾರುಗಳಿಗೆ ಅನುಕೂಲವಾಗಲೆಂದು ಮೀಸಲಿಟ್ಟಿದ್ದ ಜಮೀನಲ್ಲಿ ಶೇ.75ರಷ್ಟನ್ನು ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿದ್ದಾರೆ.
ಅತಿಕ್ರಮಣ: ಸರ್ಕಾರ 10 ಜನ ಭೂರಹಿತರಿಗೆ ತಲಾ 3 ಎಕರೆ ಭೂಮಿ ಸಾಗುವಳಿ ಮಾಡಲು ಸೂಚಿಸಿತ್ತು. ಆದರೆ ಸಾಗುವಳಿದಾರರು 15ರಿಂದ 20 ಎಕರೆ ಜಮೀನನ್ನು ಅಕ್ರಮಿಸಿಕೊಂಡಿದ್ದಾರೆ ಎಂದು ಆಶಿಹಾಳ ತಾಂಡಾ ನಿವಾಸಿ ಭೂದು ನಾಯಕ್ ಆರೋಪಿಸಿದ್ದಾರೆ.
ಇದೇ ಜಮೀನಿನಲ್ಲಿ ಬೇರೆ ಕಡೆಯವರು ಬಂದು ಗ್ರಾನೈಟ್ ಗಣಿಗಾರಿಕೆ ಆರಂಭಿಸಿದ್ದಾರೆ. ಇನ್ನು ಕೆಲವರು ಜಮೀನು ಸಾಗುವಳಿ ಮಾಡಲು ಮುಳ್ಳು ಕಂಟಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಖಾಸಗಿಯವರು ಕೆರೆ ಮತ್ತು ಗೌಂಟಾಣ ಜಮೀನು ಕಬಳಿಸಿದ್ದರಿಂದ ಗ್ರಾಮದ ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿದೆ.
ಇಷ್ಟಿದ್ದರೂ ಕಂದಾಯ ಇಲಾಖೆ ಅಧಿಕಾರಿಗಳು ಯಾರೂ ಇತ್ತ ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಜಮೀನು ಅಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಬೇಕು, ಗ್ರಾಮದ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗೆ ಅನುಕೂಲ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಗಣಿಗಾರಿಕೆ: ಕೆರೆಯ ಜಮೀನಿನಲ್ಲಿ ಅಕ್ರಮವಾಗಿ ಗ್ರಾನೈಟ್ ಗಣಿಗಾರಿಕೆ ನಡೆಸಲಾಗುತ್ತಿದೆ. ಆದರೂ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್, ಸಹಾಯಕ ಆಯುಕ್ತರು ಇತ್ತ ಕಡೆ ಸುಳಿದಿಲ್ಲ. ಗಣಿ ಮಾಲೀಕರು ನೀಡುವ ಎಂಜಲು ಕಾಸಿಗೆ ಕೈ ಚಾಚಿ ಕಂಡು ಕಾಣದವರಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಆಶಾಳ ತಾಂಡಾದ ಬೂದುನಾಯಕ ದೂರಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಕಂದಾಯ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

