ಗುಡಿಸಲು ವಾಸಿಗಳಿಗೆ ಸೂರು ಸಿಗುವುದೆಂದು?
ಅಮರೇಶಸ್ವಾಮಿ ಬಲ್ಲಟಗಿ
ಲಿಂಗಸ್ಗೂರು: ಹಲವು ದಶಕಗಳಿಂದ ಗುಡಿಸಲುಗಳಲ್ಲಿ ವಾಸಿಸುವ ಬಹುತೇಕ ದೊಡ್ಡಿ ಹಾಗೂ ತಾಂಡಾಗಳ ನಿವಾಸಿಗಳು ಸೂರಿನ ಕನವರಿಕೆಯಲ್ಲಿರುವುದು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ತಾಲೂಕಿನ ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕೆನಾಲ್ಕ್ರಾಸ್, ಹಂದಿಬಗಡಿ, ಸಾಲೇರದೊಡ್ಡಿ, ಕಾಟಗಲ್ದೊಡ್ಡಿ, ಗಿಡ್ಡ ಆದಪ್ಪದೊಡ್ಡಿ, ದಿವಾಣದರದೊಡ್ಡಿ, ಕುರುಬರದೊಡ್ಡಿ, ದೇಸಾಯಿ ದೊಡ್ಡಿ, ಗುಮೇದಾರದೊಡ್ಡಿ, ಗುರಿಕಾರದೊಡ್ಡಿ, ಹುಜರಾತದೊಡ್ಡಿ, ಅಂಬಿಗೇರದೊಡ್ಡಿ, ಚಿಕಲೇರದೊಡ್ಡಿ, ಪೂಜಾರದೊಡ್ಡಿ, ಅಡವಿಬಾವಿದೊಡ್ಡಿ ಸೇರಿದಂತೆ ಅನೇಕ ದೊಡ್ಡಿ ಮತ್ತು ತಾಂಡಾಗಳಲ್ಲಿ ವಾಸಿಸುವ ಹತ್ತು ಹಲವು ಕುಟುಂಬಗಳು ಗುಡಿಸಲುಗಳಲ್ಲಿ ವಾಸ ಮಾಡುತ್ತಿವೆ.
ಮೂಲ ಸೌಕರ್ಯ: ಸರ್ಕಾರದ ವಿವಿಧ ಯೋಜನೆಗಳಿಂದ ದೊರೆಯುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವುದಾಗಲಿ ಅಥವಾ ವಸತಿ, ರಸ್ತೆ, ಕುಡಿಯುವ ನೀರು, ವಿದ್ಯುತ್, ಶಿಕ್ಷಣ ಸೇರಿದಂತೆ ಮೂಲ ಸೌಕರ್ಯ ಸಮರ್ಪಕವಾಗಿ ಕಲ್ಪಿಸುವುದಾಗಲಿ ಅಧಿಕಾರಿಗಳು ಮಾಡದಿರುವುದು ದುರಂತದ ಸಂಗತಿಯಾಗಿದ್ದು, ಈ ಭಾಗದ ಗಣ್ಯರು ಹಾಗೂ ಜನಪ್ರತಿನಿಧಿಗಳು ಆಸಕ್ತಿವಹಿಸಿ ಸೌಲಭ್ಯ ಕಲ್ಪಿಸಿದರೆ ಮಾತ್ರ ಸ್ವೀಕರಿಸುವಷ್ಟು ಮುಗ್ಧ ಜನ ಇವರಾಗಿದ್ದಾರೆ.
ಗುಡ್ಡಗಾಡು ಪ್ರದೇಶದಲ್ಲಿ ಮಳೆ, ಚಳಿ, ಪ್ರಕೃತಿ ವಿಕೋಪ ಎನ್ನದೆ ವಾಸ ಮಾಡುವ ದೊಡ್ಡಿಗಳಲ್ಲಿ ಅಲ್ಲೊಂದು ಇಲ್ಲೊಂದು ಸಿಮೆಂಟ್ ಮನೆ ಕಾಣಸಿಗುತ್ತವೆ. ಉಳಿದ ಬಹುತೇಕ ಕುಟುಂಬಗಳು ಗುಡಿಸಲಲ್ಲಿ ವಾಸ ಮಾಡುತ್ತಿದ್ದು, ವಸತಿ ಯೋಜನೆಯಿಂದ ವಂಚಿತಗೊಂಡಿದ್ದಾರೆ. ಒಣ ಬೇಸಾಯ ಮಾಡುತ್ತಾ ಬಂದಿರುವ ಇಲ್ಲಿನ ಜನತೆ ನಾರಾಯಣಪೂರ ಬಲದಂಡೆ ಕಾಲುವೆ ಬಂದ ನಂತರ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಾ ಸಾಗಿದ್ದಾರೆ. ಆದರೆ ನಾಲೆ ವ್ಯಾಪ್ತಿಯ ಉಪವಿತರಣಾ ನಾಲೆ, ಹೊಲಗಾಲುವೆ, ನೆಲಗಾಲುವೆಗಳು ದುರ್ಗತಿಗೀಡಾಗಿ ಸಮರ್ಪಕ ನೀರು ಹರಿಯದೆ ರೈತರನ್ನು ಚಿಂತೆಗೀಡು ಮಾಡಿದೆ.
ಅಂತರ್ಜತ ಕುಸಿತ: ನಾಲೆಯಲ್ಲಿ ನೀರು ಹರಿದರೆ ಮಾತ್ರ ದಾಹ ತಣಿಯುತ್ತದೆ. ಇಲ್ಲದಿದ್ದರೆ ನೀರಿಗಾಗಿ ಪರದಾಟ ಸಾಮಾನ್ಯ. ಕೆಲ ದೊಡ್ಡಿಗಳಲ್ಲಿ ಬೋರ್ವೆಲ್ ಕೊರೆಸಲಾಗಿದೆ. ಆದರೆ ಅಂತರ್ಜತ ಕುಸಿತದಿಂದ ಸಮರ್ಪಕವಾಗಿ ನೀರು ಬಾರದೆ ದೂರದ ಹಳ್ಳ, ಬಾವಿ ಅಥವಾ ತೊಂದರೆ ಇಲ್ಲದ ಬೋರ್ವೆಲ್ಗಳಿಂದ ನೀರು ಹೊತ್ತು ತರುವ ಪರಿಸ್ಥತಿ ಅನಿವಾರ್ಯ.
ಸಂಚಾರಕ್ಕೆ ಸರಿಯಾದ ರಸ್ತೆಯಿಲ್ಲದೆ ನಾಲೆಯ ಅಕ್ಕಪ್ಪಕ ಬೆಳೆದು ನಿಂತ ಜಾಲಿ ಗಿಡಗಳ ಮಧ್ಯದ ವೀಕ್ಷಣಾ ರಸ್ತೆಯೇ ಇವರ ದಿನನಿತ್ಯದ ಓಡಾಟದ ಮಾರ್ಗವಾಗಿದೆ ಎಂದು ಪೂಜಾರಿ ಯಮನಪ್ಪನದೊಡ್ಡಿಯ ಬಸಮ್ಮ ಹಾಗೂ ತಿಮ್ಮಯ್ಯ ನೊಂದು ನುಡಿಯುತ್ತಾರೆ.
ವಸತಿ ಸಚಿವ ಅಂಬರೀಷ್ ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುವುದೇ ತಮ್ಮ ಧ್ಯೇಯ ಎಂದು ಹೇಳುವ ಮೂಲಕ ಬಡವರಲ್ಲಿ ಧೈರ್ಯ ತುಂಬಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಲವು ದಶಕಗಳಿಂದ ಗುಡಿಸಲುಗಳಲ್ಲಿ ವಾಸಿಸುತ್ತಾ ಸೂರಿನ ಕನವರಿಕೆಯಲ್ಲಿರುವ ಬಹುತೇಕ ದೊಡ್ಡಿ, ತಾಂಡಾ ಸೇರಿದಂತೆ ಹಳ್ಳಿಗಳ ಬಡ ಜನತೆಗೆ ವಸತಿ ಮನೆ ಹಾಗೂ ಮೂಲ ಸೌಕರ್ಯ ಒದಗಿಸಲು ಮುಂದಾಗುವರೇ ಎಂದು ಕಾದು ನೋಡಬೇಕಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

