ಏಕಪಕ್ಷೀಯ ನಿರ್ಧಾರ ವಿರುದ್ಧ ಹೋರಾಟ
ರಾಯಚೂರು: 371ನೇ (ಜೆ)ಕಲಂ ಬಗ್ಗೆ ಸಂಪುಟ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಸಂಪುಟ ಉಪಸಮಿತಿ ಮಂಡಿಸಿದ ಕರಡು ವರದಿಯ ಪ್ರತಿಯನ್ನು ಹೈ.ಕ. ಭಾಗದ ಹೋರಾಟಗಾರರ ಗಮನಕ್ಕೆ ತಂದು ಚರ್ಚೆಗೆ ಅವಕಾಶ ಕಲ್ಪಿಸಬೇಕು. ಕರಡು ಜಾರಿ ನಿಟ್ಟಿನಲ್ಲಿ ಏಕಪಕ್ಷೀಯ ನಿರ್ಧಾರಕ್ಕೆ ತೀವ್ರ ವಿರೋಧ. ಹೈ.ಕ. ಭಾಗದ ಸಂಘಟನೆಗಳಲ್ಲಿ ಏಕಾಭಿಪ್ರಾಯ ರೂಪಿಸುವಿಕೆಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಹೈ.ಕ. ಹೋರಾಟಗಾರರ ಸಭೆ ನಿರ್ಧರಿಸಿತು.
ಪೂರ್ವ ಸಿದ್ಧತೆ ಸಭೆಯಲ್ಲಿ ಒತ್ತಾಯ: ನಗರದ ರಾಯಚೂರು ಕೃಷಿ ವಿವಿ ವಿಚಾರ ಸಂಕಿರಣ ಸಭಾಂಗಣದಲ್ಲಿ ಜನಸಂಗ್ರಾಮ ಪರಿಷತ್, ಜಿಲ್ಲಾ ಪತ್ರಕರ್ತರ ಸಂಘ, ಜಿಲ್ಲಾ ವಾಣಿಜ್ಯೋದ್ಯಮ ಸಂಘ, ರಾಯಚೂರು ಕೃಷಿ ವಿವಿ ಸಹಯೋಗದಲ್ಲಿ ಕರೆದಿದ್ದ ಅಹವಾಲು ಪೂರ್ವ ಸಿದ್ಧತೆ ಸಭೆಯಲ್ಲಿ ಈ ಬಗ್ಗೆ ಒಕ್ಕೊರಳ ಒತ್ತಾಯ ಕೇಳಿಬಂದಿತು.
ಸಭೆಯಲ್ಲಿ ಮಾತನಾಡಿದ ಹೈ.ಕ. ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಈ ಭಾಗದ ಜನರ ಕನಸು ನನಸಾಗುವ ಹಂತದಲ್ಲಿಯೇ ಪರಸ್ಪರ ಅಭಿಪ್ರಾಯಗಳಲ್ಲಿನ ಬೇಧದಿಂದಾಗಿ ಕಮರಿ ಹೋಗುವುದು ಬೇಡ. ಸಂಪುಟ ಉಪಸಮಿತಿಯ ಮುಂದೆ ಸಮರ್ಥವಾಗಿ ಅಹವಾಲು ಮಂಡಿಸಲು ನಮ್ಮ ಬೇಕು ಬೇಡಗಳ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದುವುದು ಅವಶ್ಯಕ ಎಂದರು.
ರಾಯಚೂರು ಜಿಲ್ಲೆಗೆ ಕಡೆಯ ಸ್ಥಾನ: ರಾಜ್ಯದ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಹೋಲಿಸಿದರೆ ರಾಯಚೂರು ಜಿಲ್ಲೆ ಕಟ್ಟಕಡೆಯ ಸ್ಥಾನದಲ್ಲಿದೆ. ಇದಕ್ಕಿಂತ ಹೈ.ಕ. ಹಿಂದುಳಿಯುವಿಕೆ ಸಾಬೀತು ಮಾಡಲು ಬೇರೊಂದು ನಿದರ್ಶನ ಬೇಕಿಲ್ಲ. ಸಮರ್ಪಕ ಚರ್ಚೆಯ ನಂತರ ಜು.3 ರಂದು ಹೊಸಪೇಟೆಯಲ್ಲಿ ನಡೆಯಲಿರುವ ಸಂಪುಟ ಉಪಸಮಿತಿಯ ಅಹವಾಲು ಸ್ವೀಕಾರ ಸಭೆಯಲ್ಲಿ ನಮ್ಮ ವಾದ ಮಂಡಿಸುವುದು ಅಗತ್ಯ ಎಂದರು.
ಹೈ.ಕ. ಹೋರಾಟಗಾರ ರಜಾಕ್ ಉಸ್ತಾದ್ ಸಭೆಯಲ್ಲಿ ಮಾತನಾಡಿ, ಇಡೀ ದೇಶದಲ್ಲಿಯೇ ಕೇವಲ ಆಂಧ್ರದಲ್ಲಿ ಮಾತ್ರ ಉದ್ಯೋಗ, ಶಿಕ್ಷಣದಲ್ಲಿ ಸ್ಥಳೀಯರಿಗೆ ಮೀಸಲಾತಿ ವ್ಯವಸ್ಥೆಯಿದೆ. ಮೊದಲಿಗೆ ತೆಲಂಗಾಣದಲ್ಲಿ ಮಾತ್ರ ಜಾರಿಯಲ್ಲಿದ್ದ ಮೀಸಲಾತಿ ನಂತರದಲ್ಲಿ ಆಂಧ್ರದಾದ್ಯಂತ ವಿಸ್ತರಿಸಲಾಗಿದೆ ಎಂದು ಹೇಳಿದರು.
ತೆಲಂಗಾಣಕ್ಕೆ ಒದಗಿದಂಥ ಸ್ಥಿತಿ: ಮೀಸಲಾತಿಯ ಬಗ್ಗೆ ಕರಡು ಮಂಡನೆಗೂ ಪೂರ್ವದಲ್ಲಿಯೇ ಸ್ಪಷ್ಟವಾಗಿರದಿದ್ದಲ್ಲಿ ಮುಂದೊಂದು ದಿನ ಸದ್ಯ ತೆಲಂಗಾಣಕ್ಕೆ ಒದಗಿದಂಥ ಸ್ಥಿತಿ ರಾಜ್ಯದ ಹೈ.ಕ. ಭಾಗಕ್ಕೂ ಒದಗಿಬರುವುದರಲ್ಲಿ ಸಂದೇಹವಿಲ್ಲ. ಉದ್ಯೋಗ ಮತ್ತು ಶಿಕ್ಷಣ ಸೇರಿ ವಿವಿಧ ಹಂತದಲ್ಲಿ ಮೀಸಲಾತಿ ಪಡೆಯುವ ಬಗ್ಗೆ ಸಮಗ್ರ ಚರ್ಚೆ ಅವಶ್ಯಕ ಎಂದರು.
ಶಾಸಕ ಡಾ.ಶಿವರಾಜ್ ಪಾಟೀಲ್ ಮಾತನಾಡಿ, 371ನೇ ಕಲಂ ಅನುಷ್ಠಾನಕ್ಕೂ ಪೂರ್ವ ಸರ್ಕಾರ ಕರಡು ಪ್ರತಿಯನ್ನು ಸಾರ್ವಜನಿಕರ ಮುಂದಿರಿಸಿ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಕರಡು ಪ್ರತಿ ಸಲ್ಲಿಸದೇ ಅಹವಾಲು ಸ್ವೀಕಾರ ಸರಿಯಾದ ಕ್ರಮವಲ್ಲ. ಇಂಥ ಅಹವಾಲು ಸ್ವೀಕಾರದಿಂದ ಪ್ರಯೋಜನವಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಡಗಳ ಬಗ್ಗೆ ಸಮಗ್ರ ಚರ್ಚೆಯಾಗಲಿ: ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿ, 371ನೇ ಕಲಂ ಅಡಿ ಕಾನೂನು ರೂಪಿಸಲು ಸರ್ಕಾರ ರಚಿಸಿದ ಸಂಪುಟ ಉಪಸಮಿತಿಯ ಕಾರ್ಯವೈಖರಿಯ ಬಗ್ಗೆ ಪೂರ್ವಾಗ್ರಹ ಪೀಡಿತರಾಗುವುದು ಸರಿಯಲ್ಲ. ನಮ್ಮ ಬೇಕು ಬೇಡಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಅಹವಾಲುಗಳನ್ನು ಸಮಿತಿಯ ಮುಂದೆ ಮಂಡಿಸುವುದು ಹೆಚ್ಚು ಸೂಕ್ತ. ಆನಂತರದಲ್ಲಿ ಕರಡುನಲ್ಲಿ ಅಹವಾಲುಗಳನ್ನು ಸೇರ್ಪಡೆ ಮಾಡಲಾಗಿದೆಯೇ ಇಲ್ಲವೇ ಎಂಬ ಚರ್ಚೆಗೂ ಅವಕಾಶಕ್ಕೆ ಬೇಡಿಕೆಯಿಡಬೇಕೆಂದು ಮನವಿ ಮಾಡಿದರು.
ಹೈ.ಕ. ಭಾಗದ ಅಭಿವೃದ್ಧಿ ನಿಟ್ಟಿನಲ್ಲಿ ಸಮಗ್ರ ದೂರದೃಷ್ಟಿಯಿಲ್ಲದೇ ಸಂಪುಟ ಉಪ ಸಮಿತಿಗೆ ಅಹವಾಲು ಸಲ್ಲಿಸಲು ಮುಂದುವರಿಯುವುದು ತಪ್ಪಾದೀತು. ಈ ಬಗ್ಗೆ ಜಿಲ್ಲೆ ಸೇರಿದಂತೆ ಹೈ.ಕ. ಭಾಗದ ಎಲ್ಲ ಜಿಲ್ಲೆಗಳ ಹೋರಾಟಗಾರರ ಮಧ್ಯೆ ಏಕಾಭಿಪ್ರಾಯ ರೂಪಿಸುವ ಕಾರ್ಯ ಆಗಬೇಕಿದೆ ಎಂದರು.
ಅಧ್ಯಯನವಾಗಲಿ: ರಾಯಚೂರು ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್ ಮಾತನಾಡಿ, ಕೃಷಿ, ಕೈಗಾರಿಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಾಲೂಕುವಾರು ಹಿಂದುಳಿಯುವಿಕೆಯ ಬಗ್ಗೆ ಅಧ್ಯಯನ ಆಗಬೇಕಿದೆ. ಆ ಮೂಲಕ ಅಗತ್ಯ ಅನುದಾನದ ಕ್ರಿಯಾ ಯೋಜನೆ ಮಂಡನೆ ಮತ್ತು ಯೋಜನಾ ಬದ್ಧ ಕಾರ್ಯನಿರ್ವಹಣೆ ಸಾಧ್ಯವಾಗಲಿದೆ ಎಂದು ಹೇಳಿದರು.
ಸದ್ಯದ ಪರಿಸ್ಥಿತಿಯಲ್ಲಿ ಹೈ.ಕ. ಮೂಲನಿವಾಸಿಗಳ ಬಗ್ಗೆ ಗೊಂದಲ ಎದ್ದಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ತಾಳದೇ ಮೀಸಲಾತಿ ಮತ್ತಿತರೆ ಸೌಲಭ್ಯ ಪಡೆಯುವುದು ಕಷ್ಟವಾದೀತು ಎಂದು ಎಚ್ಚರಿಸಿದ ಅವರು, ಹೋರಾಟಗಾರರು ಒಟ್ಟು ಅಭಿಪ್ರಾಯ ತಾಳುವುದು ಸೂಕ್ತ ಎಂದರು.
ನಂತರ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಅಂತಿಮವಾಗಿ ಜು.3ರಂದು ಹೊಸಪೇಟೆಯಲ್ಲಿ ನಡೆಯಲಿರುವ ಸಂಪುಟ ಉಪಸಮಿತಿಯ ಅಹವಾಲು ಸ್ವೀಕಾರ ಸಭೆಯಲ್ಲಿ 371ನೇ (ಜೆ)ಕಲಂ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಕಳಿಸುವ ಮೊದಲು ಸಂಪುಟ ಉಪಸಮಿತಿ ಮಂಡಿಸಿದ ಕರಡು ವರದಿ ಪ್ರತಿಯನ್ನು ಸಾರ್ವಜನಿಕರ ಮುಕ್ತ ಚರ್ಚೆಗೆ ಮತ್ತೊಮ್ಮೆ ಅವಕಾಶ ನೀಡಬೇಕು.
ಸಮಿತಿಯ ಕರಡು ಜಾರಿ ನಿಟ್ಟಿನಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡರೆ ಹೋರಾಟದ ಎಚ್ಚರಿಕೆ. ಹೈ.ಕ. ಭಾಗದ ಸಂಘಟನೆಗಳಲ್ಲಿ ಏಕಾಭಿಪ್ರಾಯ ರೂಪಿಸುವ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳ ಹೋರಾಟಗಾರರೊಂದಿಗೆ ಚರ್ಚೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಯಿತು.ವೇದಿಕೆಯಲ್ಲಿ ಬಳ್ಳಾರಿಯ ಪನ್ನಾರಾಜ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ, ಜವಾಹರ ಜೈನ್, ತ್ರಿವಿಕ್ರಮ್ ಜೋಷಿ ಸೇರಿ ಅನೇಕರಿದ್ದರು.ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಹಿರಿಯ ನಾಗರಿಕರು, ಮತ್ತಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

