ಮಸ್ಜಿದ್ ಆಡಳಿತದ ಅನಗತ್ಯ ಗೊಂದಲ
ರಾಯಚೂರು: ನಗರದ ಹಾಷ್ಮಿಯಾ-ಇ-ಮಸ್ಜೀದ್ಗೆ ಕಳೆದ ಅನೇಕ ಶತಮಾನಗಳ ಇತಿಹಾಸವಿದೆ. ಆದರೆ ರಸ್ತೆ ಅಗಲೀಕರಣದ ಹೆಸರಿನಲ್ಲಿ ಆಡಳಿತವು ನ್ಯಾಯಾಲಯದ ಆದೇಶ ಪಾಲಿಸದೇ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ ಎಂದು ಸಿಟಿಜನ್ ಆಫ್ ರಾಯಚೂರು ಸಂಘಟನೆಯ ಮುಖಂಡ ಮೊಹಮ್ಮದ್ ಕಲೀಂ ವಕೀಲರು ಆರೋಪಿಸಿದರು.
ನಗರದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1947ಕ್ಕಿಂತಲೂ ಮೊದಲಿನಿಂದ ಹಾಷ್ಮಿಯಾ -ಇ-ಮಸ್ಜೀದ್ ವಕ್ಫ್ ಸಂಸ್ಥೆಯಾಗಿದೆ. ದಾಖಲೆಗಳು ಇದಕ್ಕೆ ಪುರಾವೆಯಾಗಿದ್ದು, ಈ ಬಗ್ಗೆ ಎದ್ದಿದ್ದ ಗೊಂದಲ ನಿವಾರಣೆ ನಿಟ್ಟಿನಲ್ಲಿ ಮಸೀದಿಯ ಆಡಳಿತಗಾರ ಶೇಖ್ ಮೊಹಮ್ಮದ್ ಇಸ್ಮಾಯಿಲ್ ಎಂಬುವವರು ಗುಲ್ಬರ್ಗ ವಿಭಾಗೀಯ ಹೈಕೋರ್ಟ್ ಪೀಠಕ್ಕೆ ಮನವಿ ಸಲ್ಲಿಸಿದ್ದರು.
ರಸ್ತೆ ಅಗಲೀಕರಣದ ಆದೇಶವಾಗಿತ್ತು: ಅದರಂತೆ ಕೋರ್ಟ್ ನಗರಸಭೆಗೆ ಸೂಚನೆ ನೀಡಿ ರಸ್ತೆ ಅಗಲೀಕರಣ ವ್ಯಾಪ್ತಿಗೆ ಮಸೀದಿಗೆ ಸೇರಿದ ಜಾಗವನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆ ಸಮೀಕ್ಷೆ ನಡೆಸಲು ಆದೇಶಿಸಿತ್ತು. ಅದಕ್ಕೆ ಮೂರು ತಿಂಗಳ ಗಡುವು ನೀಡಿತ್ತು. ಆದರೆ 2012ರ ಫೆ.22ರಿಂದ ಇದುವರೆಗೆ ಈ ಬಗ್ಗೆ ಯಾವುದೇ ರೀತಿಯ ಪ್ರಗತಿಯಾಗಿಲ್ಲ ಎಂದು ದೂರಿದರು.
ನಗರಸಭೆಯ ಪೌರಾಯುಕ್ತರು ಈ ನಿಟ್ಟಿನಲ್ಲಿ ನ್ಯಾಯಾಲಯದ ಆದೇಶದಂತೆ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ಗುಲ್ಬರ್ಗ ಪೀಠದಲ್ಲಿ ಜಿಲ್ಲಾಧಿಕಾರಿ, ಪೌರಾಯುಕ್ತರು ಸೇರಿ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದು, ವಿಚಾರಣೆ ಹಂತದಲ್ಲಿದೆ ಎಂದು ತಿಳಿಸಿದರು.ಯಾವುದೇ ಮುನ್ಸೂಚನೆ ನೀಡಿಲ್ಲ: ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಯಾವುದೇ ಮುನ್ಸೂಚನೆ ನೀಡದೇ ಜೂ.26 ರಂದು ಜಿಲ್ಲಾಡಳಿತವು ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಜೆಸಿಬಿ ಯಂತ್ರಗಳು ಮತ್ತು ಪೊಲೀಸ್ ವಾಹನಗಳನ್ನು ಬೆಳಗ್ಗೆಯೇ ಮಸೀದಿ ಬಳಿ ನಿಯೋಜಿಸಿದ್ದು, ಬೇಸರ ತಂದಿದೆ ಎಂದು ಹೇಳಿದರು.
ಪೊಲೀಸ್ ನಿಯೋಜನೆ ಗೊಂದಲಕ್ಕೆ ದಾರಿ: ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಜಿಲ್ಲಾಡಳಿತ ಇಂಥ ಕ್ರಮ ಕೈಗೊಂಡಿರುವುದು ಸರಿಯಾದ ಕ್ರಮವಲ್ಲ. ಆಡಳಿತದಲ್ಲಿ ಕಾನೂನು ಜಾರಿ ವೇಳೆ ಅದರದ್ದೇ ಆದ ರೀತಿಯಲ್ಲಿ ಪ್ರಕ್ರಿಯೆ ನಂತರ ಜಾರಿಗೆ ಮುಂದಾಗುವುದು ಸೂಕ್ತ. ಆದರೆ ಧಾರ್ಮಿಕ ಸ್ಥಳದ ಬಳಿ ಅನಗತ್ಯವಾಗಿ ಪೊಲೀಸ್ ನಿಯೋಜನೆ ಗೊಂದಲಕ್ಕೆ ದಾರಿ ಮಾಡಿದ್ದು ಎಂದು ಆರೋಪಿಸಿದರು.
ಮುಸ್ಲಿಂ ಸಮಾಜ ಸೇರಿ ನಗರದ ಯಾವುದೇ ಧಾರ್ಮಿಕ ಸ್ಥಳಗಳಿಗೆ ಧಕ್ಕೆಯಾಗದ ರೀತಿಯಲ್ಲಿ ರಸ್ತೆ ಅಗಲೀಕರಣ ಸೇರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಮೂಲಕ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಸದ್ಯ ಹಾಷ್ಮಿಯಾ ಮಸೀದಿಗೆ ಸಂಬಂಧಿಸಿ ಜಿಲ್ಲಾಡಳಿತ ನ್ಯಾಯಾಲಯದ ಆದೇಶವನ್ನು ಪಾಲಿಸುವತ್ತ ಗಮನಹರಿಸಬೇಕು. ನ್ಯಾಯಾಂಗ ವ್ಯವಸ್ಥೆಗೆ ವಿರುದ್ಧವಾಗಿ ಆಡಳಿತ ಕಾರ್ಯನಿರ್ವಹಿಸಲು ಮುಂದಾದಲ್ಲಿ ಅದು ನ್ಯಾಯಾಲಯದ ಆದೇಶ ಹಾಗೂ ಕಾನೂನಿಗೆ ವಿರುದ್ಧವಾದ ವರ್ತನೆಯಾಗಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಎಂಡಿ ಅಬ್ದುಲ್ ಖುರೇಷಿ, ಎಂಡಿ ಶಾಹೀನ್ ರಜಾ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

