ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ / ನ್ಯಾಕ್, ಯುಜಿಸಿ ಮಾನ್ಯತೆಯ ಶಿಕ್ಷಣ ನೀಡಿಕೆ
ಏ.17ರಿಂದ ಗೀತಂ ವಿವಿ ಪ್ರವೇಶ ಪರೀಕ್ಷೆ
ಕ.ಪ್ರ. ವಾರ್ತೆ, ರಾಯಚೂರು, ಮಾ.2
ಗುಣಮಟ್ಟದ ಶಿಕ್ಷಣ ನೀಡಿಕೆ ಮತ್ತು ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿರುವ ಗೀತಂ ವಿವಿಯು ನಗರದಲ್ಲಿ ಶ್ರೀಕೃಷ್ಣ ಅಕಾಡೆಮಿ ಸಹಯೋಗದಲ್ಲಿ ಏ.17 ಮತ್ತು 18ರಂದು ಪ್ರವೇಶ ಪರೀಕ್ಷೆಯನ್ನು ನಗರದಲ್ಲಿ ನಡೆಸಲಾಗುತ್ತಿದೆ ಎಂದು ಗೀತಂ ವಿವಿಯ ಉಪಕುಲಪತಿ ಪ್ರೊ. ಹರಿನಾರಾಯಣ್ ತಿಳಿಸಿದರು.
ನಗರದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಂಧ್ರದ ವಿಶಾಖಪಟ್ಟಣ ಮತ್ತು ಹೈದರಾಬಾದ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವ ಅಧ್ಯಯನ ಕೇಂದ್ರಗಳನ್ನು ಹೊಂದಿರುವ ಗೀತಂ ವಿವಿಯು ಐದು ವರ್ಷಗಳ ಹಿಂದೆ ಕಾರ್ಯಾರಂಭ ಮಾಡಿದ್ದು, ತ್ವರಿತವಾಗಿ ವಿವಿ ಮಾನ್ಯತೆ ಗಳಿಸಿದೆ ಎಂದು ತಿಳಿಸಿದರು.
ನ್ಯಾಕ್ ಸಮಿತಿಯ ಎ ಗ್ರೇಡ್ ಮತ್ತು ಯುಜಿಸಿಯ ಮಾರ್ಗಸೂಚಿಯನ್ವಯ ಕಾರ್ಯನಿರ್ವಹಿಸುತ್ತಿರುವ ವಿವಿಯು ಈಚೆಗೆ ಬೆಂಗಳೂರಿನ ಬಳಿ ತನ್ನ ಕೇಂದ್ರವನ್ನು ಆರಂಭಿಸಿದೆ. ಅಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ಮತ್ತು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕೋರ್ಸುಗಳನ್ನು ಈ ಕೇಂದ್ರದಲ್ಲಿ ಆರಂಭಿಸಿದ್ದು, ಪ್ರವೇಶ ಪಡೆಯುವವರಿಗೆ ವ್ಯಾಸಂಗದ ಕೊನೆಗೆ ವಿವಿಧೆಡೆ ಶೇ.80ರಿಂದ 100ರಷ್ಟು ಉದ್ಯೋಗವಕಾಶ ದೊರಕಿಸಿಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ವಿವಿಯ ವಿವಿಧ ಕೋರ್ಸುಗಳಿಗೆ ಪ್ರವೇಶ ಪಡೆಯಲು ಬಯಸುವಂಥ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಪ್ರದರ್ಶಿಸುವಂಥ ವಿದ್ಯಾರ್ಥಿಗಳಿಗೆ ಅವರ ಮೆರಿಟ್ ಆಧರಿಸಿ ವಿವಿಯು ಸಂಪೂರ್ಣ ಉಚಿತ ಹಾಗೂ ರಿಯಾಯಿತಿ ಶುಲ್ಕ ವಿಧಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು.
ವಿವಿಯ ಗ್ರಂಥಾಲಯದಲ್ಲಿ 2ಲಕ್ಷ ವಿವಿಧ ಕೋರ್ಸುಗಳ ಪುಸ್ತಕಗಳಿದ್ದು, 20 ಲಕ್ಷ ಇ-ಬುಕ್ಗಳು ಅಧ್ಯಯನಕ್ಕೆ ಲಭ್ಯವಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಪರಿಸರವನ್ನು ನಿರ್ಮಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಕೂಡಲೇ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀಕೃಷ್ಣ ಅಕಾಡೆಮಿಯ ಮುಖ್ಯಸ್ಥ ಮಧು, ವಿವಿಯ ನಿರ್ದೇಶಕ ಪ್ರೊ. ವಿಜಯಭಾಸ್ಕರ್, ರಾಂಪ್ರಸಾದ್, ನಾರಾಯಣರಾವ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

