ಹರಿಜನ, ಗಿರಿಜನರ ಮೇಲೆ ದೌರ್ಜನ್ಯ: ಆರೋಪಿಗೆ ಶಿಕ್ಷೆ
ರಾಯಚೂರು: ಸಿಂಧನೂರು ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ಹರಿಜನರಿಗೆ ಕ್ಷೌರ ಮಾಡಲು ನಿರಾಕರಿಸಿ ಜಾತಿ ನಿಂದನೆ ಮಾಡಿದ್ದ ಇಬ್ಬರಿಗೆ ಇಲ್ಲಿನ ನ್ಯಾಯಾಲಯ ರು. 5 ಸಾವಿರ ದಂಡ ಮತ್ತು ಒಂದು ವರ್ಷ ಕಾರಾಗೃಹ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಸಾಲಗುಂದಾ ಗ್ರಾಮದಲ್ಲಿ 2011ರಲ್ಲಿ ಆ.17ರಂದು ಹರಿಜನರಿಗೆ ಕ್ಷೌರ ಮಾಡಲು ನಿರಾಕರಿಸಿ, ಅಂಗಡಿಗಳ ಮಾಲೀಕರು ಅಂಗಡಿ ಮುಚ್ಚಿದರು. ಈರಣ್ಣ ಮತ್ತು ಬೀರಪ್ಪ ಎಂಬುವವರು ಹರಿಜನರ ಕೇರಿಯಲ್ಲಿ ಮಾತನಾಡುತ್ತಾ ನಿಂತಿದ್ದ ಹುಲಿಗೆಪ್ಪನೊಂದಿಗೆ ಜಗಳ ತೆಗೆದು, ಜಾತಿಯಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಹುಲಿಗೆಪ್ಪ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ದೂರಿನ ತನಿಖೆ ನಡೆಸಿದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಪರ ಸತ್ರ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಅವರು ಪ್ರಕರಣದ ವಿಚಾರಣೆ ನಡೆಸಿ ಈರಣ್ಣ ಹಾಗೂ ಬೀರಪ್ಪ ಅವರಿಗೆ ತಲಾ ರು. 5 ಸಾವಿರ ದಂಡ ಹಾಗೂ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
ವ್ಯಕ್ತಿ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ 2ರಲ್ಲಿ ಹೊಟ್ಟೆ ನೋವು ತಾಳದೇ ವ್ಯಕ್ತಿಯೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಗೋವಿಂದ ಬೈರಾಗಿ ಎಂದು ಗುರ್ತಿಸಲಾಗಿದೆ. ಈತ ಹಲವು ತಿಂಗಳುಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಅದರಿಂದ ಬೇಸತ್ತು ಈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮಠ ಹಸ್ತಾಂತರಕ್ಕೆ ಕೇಂದ್ರದ ಖಂಡನೆ
ಸಿಂಧನೂರು: ಬಿಡದಿಯ ನಿತ್ಯಾನಂದ ಧ್ಯಾನಪೀಠಕ್ಕೆ ಮುಧೋಳದ ಮಹಾಲಿಂಗೇಶ್ವರ ಮಠವನ್ನು ವರ್ಗಾವಣೆ ಮಾಡುವ ಸಂಗತಿ ಮಾಧ್ಯಮಗಳಲ್ಲಿ ಬಹಿರಂಗವಾಗಿದ್ದು, ಬಸವ ಪರಂಪರೆಯನ್ನು ಹೊಂದಿರುವ ಮಠವನ್ನು ಯಾವುದೇ ಕಾರಣಕ್ಕೂ ನಿತ್ಯಾನಂದನಿಗೆ ಬಿಟ್ಟುಕೊಡಬಾರದು ಎಂದು ಬಸವ ಕೇಂದ್ರ ಆಗ್ರಹಿಸಿದೆ. ನಗರದ ಬಸವಪ್ರಸಾದ ನಿಲಯದಲ್ಲಿ ನಡೆದ ಬಸವಾಭಿಮಾನಿಗಳ ಸಭೆಯಲ್ಲಿ ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗಾರ ಮಾತನಾಡಿ, ಚಿತ್ರದುರ್ಗದ ಮುರುಘಾಮಠದ ಶಾಖಾಮಠವಾಗಿರುವ ಮಹಾಲಿಂಗೇಶ್ವರ ಮಠದ ಉತ್ತರಾಧಿಕಾರಿಯಾಗಲು ಬಸವ ಪರಂಪರೆಯ ಜ್ಞಾನವನ್ನು ಹೊಂದಿದ್ದು ಅದನ್ನು ಉಳಿಸಿ ಬೆಳೆಸಲು ಆಸಕ್ತನಾಗಿರಬೇಕು. ಆದರೆ ವಿವಾದಿತ ಕಾಮಿ ನಿತ್ಯಾನಂದನಿಗೆ ಮಠವನ್ನು ಹಸ್ತಾಂತರಿಸುವ ಬಗ್ಗೆ ಚರ್ಚೆನಡೆದಿರುವುದು ಖಂಡನೀಯ. ಕಾರಣ ಮಠದ ಹಸ್ತಾಂತರ ವಿಚಾರ ಕೈಬಿಡಬೇಕು ಎಂದು ಒತ್ತಾಹಿಸಿದರು. ಪಿ.ವೀರಭದ್ರಪ್ಪ, ವೀರಭದ್ರಗೌಡ ಅಮರಾಪುರ, ಪಂಪಣ್ಣ ಎಚ್, ನಾಗಭೂಷಣ ನವಲಿ, ವೀರೇಶಪ್ಪ ಸಿರಗುಂಪಿ, ಪತ್ತಾರ, ಅಮರೇಶ ಗುರಿಕಾರ, ನಿಜಗುಣ ಹಡಪದ, ಎಚ್.ಜಿ. ಹಂಪಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

