ರಾಯಚೂರು

ಮಂತ್ರಾಲಯಕ್ಕೆ ನವರತ್ನ ರಥ ಸಮರ್ಪಣೆ

Published On :

ಜಗನ್ನಾಥ ಆರ್. ದೇಸಾಯಿ
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠ ವಿವಿಧ ಅಭಿವೃದ್ಧಿಯಿಂದ ಭೌತಿಕ ಶ್ರೀಮಂತಿಕೆ ಪಡೆದಿದೆ. ಆ ಮೂಲಕ ರಾಯರ ಅನುಗ್ರಹಕ್ಕೆ ಆಗಮಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈಗ ಮಂತ್ರಾಲಯದ ರಾಯರ ಮಠದಲ್ಲಿ ಮಾ.13ರಿಂದ ನಡೆಯುವ ಗುರುಭಕ್ತಿ ಉತ್ಸವದ ವೇಳೆ ನವರತ್ನ ಖಚಿತ ರಥವನ್ನು ಸಮರ್ಪಿಸುವ ಮೂಲಕ ಸಂಭ್ರಮ ಇಮ್ಮಡಿಸಲಿದೆ.
ಮಂತ್ರಾಲಯದ ರಾಯರಿಗೆ ಸಂಗೀತವೆಂದರೆ ಅಚ್ಚುಮೆಚ್ಚು. ಅಂತೆಯೇ 2005ರಿಂದ ಪ್ರತಿ ವರ್ಷ ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದ ವೇಳೆ ತಮಿಳುನಾಡಿನ ಚೆನ್ನೈನ ಹನುಮಂತಪುರಂ ಪಲ್ಲಕ್ಕಿ ಸೇವಾ ಟ್ರಸ್ಟ್ನಿಂದ ನಾದಹಾರಂ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಲಾಗುತ್ತದೆ. ಅದೇ ಟ್ರಸ್ಟ್ ವತಿಯಿಂದ ಸದ್ಯ ನವರತ್ನ ಖಚಿತ ರಥ ಸಮರ್ಪಣೆಯಾಗುತ್ತಿರುವುದು ವಿಶೇಷ. ಸುಮಾರು 20 ಅಡಿ ಎತ್ತರದ ನವರತ್ನ ಖಚಿತ ರಥವು ಸುಮಾರು 1 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ. ಕಳೆದ ನಾಲ್ಕು ತಲೆಮಾರುಗಳಿಂದ ಶಿಲ್ಪಕಲೆಯಲ್ಲಿ ತೊಡಗಿರುವ ಆಯ್ದ ಖ್ಯಾತ ಶಿಲ್ಪಿಗಳು ಈ ರಥವನ್ನು ಕಳೆದ 2012ರ ಜುಲೈನಿಂದಲೇ ನಿರ್ಮಿಸುತ್ತಿದ್ದಾರೆ.
20 ಅಡಿ ಎತ್ತರದ ಸಾಗುವಾನಿ ಕಟ್ಟಿಗೆಯಿಂದ ತಯಾರಿಸಿದ ರಥಕ್ಕೆ ಚಿನ್ನದ ಕವಚ ತೊಡಿಸಲಾಗಿದೆ. ಈ ಕವಚದ ಮೇಲ್ಭಾಗದಲ್ಲಿ ಸುಮಾರು 4 ಲಕ್ಷ ನವರತ್ನಗಳನ್ನು ಅಳವಡಿಸಲಾಗಿದೆ. ನವರತ್ನ ಖಚಿತ ರಥದ ಮೇಲ್ಭಾಗದಲ್ಲಿ ಶ್ರೀನರಸಿಂಹ, ಶ್ರೀಹಯಗ್ರೀವ, ಶ್ರೀರಾಮ, ಶ್ರೀಸಂತಾನ ಗೋಪಾಲ, ಶ್ರೀವೈಕುಂಠ ವಾಸುದೇವರು, ಶ್ರೀ ವೆಂಕಟೇಶ್ವರರು, ಶ್ರೀಕರ ಲಕ್ಷ್ಮಿನಾರಾಯಣ ದೇವರು, ಶ್ರೀಪಂಚಮುಖಿ ಆಂಜನೇಯ ದೇವರ ಬಿಂಬಗಳಿರಲಿವೆ.
ಅದೇ ರೀತಿ ರಥದ ಕೆಳಭಾಗದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುಸ್ತೋತ್ರ(ಶ್ರೀಪೂರ್ಣಬೋಧ)ಮಂತ್ರದ ಕೆತ್ತನೆಯಿದೆ. ಹಾಗೆಯೇ ಪ್ರಹ್ಲಾದರಾಜರ ಬಿಂಬವನ್ನೂ ಕೆತ್ತಲಾಗಿದೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದ ಶ್ರೀಮಠದ ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಶ್ರೀಸುಯಮೀಂದ್ರಾಚಾರ್ಯ, ನವರತ್ನ ಖಚಿತ ರಥವು ಮಾ.13 ರಂದು ಮಂತ್ರಾಲಯಕ್ಕೆ ಆಗಮಿಸಲಿದೆ. ಮಾ.16 ರಂದು ಸುಧಾಮಂಗಳ ಮಹೋತ್ಸವ ಮತ್ತು ಮಾ.19ರಂದು ಗುರುಭಕ್ತಿ ಉತ್ಸವದ ಸಂದರ್ಭ ಶ್ರೀರಾಯರಿಗೆ ರಥ ಸಮರ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.