ದಿಕ್ಕುದೆಸೆಯಿಲ್ಲದ ಚರ್ಚೆ; ಅಸಮಾಧಾನ, ಸಭಾತ್ಯಾಗ
ಕನ್ನಡಪ್ರಭ ವಾರ್ತೆ ರಾಯಚೂರು ಮಾ.14
ಹಿರಿಯ, ಕಿರಿಯ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ. ದಿಕ್ಕುದೆಸೆಯಿಲ್ಲದ ಚರ್ಚೆಗೆ ಅಧಿಕಾರಿಗಳಿಂದ ಸಿದ್ಧ ಉತ್ತರ. ದೇವದುರ್ಗ ತಾಲೂಕಿನಲ್ಲಿ ಕಳಪೆ ಕಾಮಗಾರಿಯಾದ ಬಗ್ಗೆ ತನಿಖಾ ವರದಿ ಸಲ್ಲಿಸಿದರೂ ಜಿಪಂ ಸಿಇಒ ಅವರದ್ದು ಮೌನವೇ ಕ್ರಮ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ದೊರೆಯದ ಪರಿಹಾರ. ಬೇಸತ್ತ ಸರ್ವಸದಸ್ಯರಿಂದ ಸಭಾತ್ಯಾಗ.
ನಗರದಲ್ಲಿ ಗುರುವಾರ ಕರೆದಿದ್ದ ಜಿಪಂ ಸಾಮಾನ್ಯ ಸಭೆಯಲ್ಲಿ ಕಂಡುಬಂದ ಚಿತ್ರಣವಿದು.
ನಗರದ ಜಿಪಂ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸಭೆ 12.30ರ ಸುಮಾರಿಗೆ ಆರಂಭಗೊಂಡಿತು. ಆರಂಭದಿಂದಲೇ ದಿಕ್ಕು ದೆಸೆಯಿಲ್ಲದಂತೆ ಚರ್ಚೆ ನಡೆದಿದ್ದು ವಿಶೇಷ. ಮೊದಲಿಗೆ ಮಹಿಳಾ ಸದಸ್ಯರೊಬ್ಬರು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅದರ ಬಗ್ಗೆ ಸಮಗ್ರ ಚರ್ಚೆಯಾಗಲಿ ಎಂದು ಒತ್ತಾಯಿಸಿದರು.
ಅದಕ್ಕೆ ಸಭಾಧ್ಯಕ್ಷೆ ಲಲಿತಮ್ಮ ಅವರು ಒಪ್ಪಿಗೆ ಸೂಚಿಸಿದರು. ಆದರೆ ಸಭೆಯು ಜಿಲ್ಲೆಯಲ್ಲಿ ಬೇಸಿಗೆಯ ಈ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಬಗ್ಗೆ ಸಮರ್ಪಕ ಚರ್ಚೆ ನಡೆಸಲೇ ಇಲ್ಲ. ಸಭೆ ಆರಂಭವಾಗುತ್ತಿದ್ದಂತೆಯೇ ಜಿಪಂ ಸದಸ್ಯ ದಾನಪ್ಪ ಆಲ್ಕೋಡ್ ಸಭೆಯಲ್ಲಿ ಮಾತನಾಡಿ, ದೇವದುರ್ಗ ತಾಲೂಕಿನಲ್ಲಿ ಅಧಿಕಾರಿಗಳು ಜಿಪಂ ಸದಸ್ಯರು ಸೂಚಿಸುವ ಕಾಮಗಾರಿ ಕೈಗೊಳ್ಳುತ್ತಿಲ್ಲ. ಕಳೆದ 25 ತಿಂಗಳಿಂದ ಸದಸ್ಯರ ಅವಧಿ ಮುಗಿದರೂ ಅಭಿವೃದ್ಧಿ ಕಾರ್ಯ ಜಾರಿಗೆ ಬರುತ್ತಿಲ್ಲ. ಸದಸ್ಯರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.
ಕಳೆದ ಸಭೆಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕಳಪೆಯಾಗಿ ನಿರ್ವಹಿಸಿದ ಬಗ್ಗೆ ಸಭೆಯ ಗಮನಕ್ಕೆ ತಂದಿದ್ದು, ಆ ಬಗ್ಗೆ ತನಿಖಾ ವರದಿ ಜಿಪಂ ಸಿಇಒ ಅವರಿಗೆ ಸಲ್ಲಿಸಿದ್ದರೂ, ಇದುವರೆಗೆ ಕ್ರಮ ಮಾತ್ರ ಜರುಗಿಲ್ಲ. ಇದು ಅಧಿಕಾರಿಗಳ ಕಾರ್ಯವೈಖರಿಯನ್ನು ಸ್ಪಷ್ಟಪಡಿಸುತ್ತದೆ ಎಂದು ದೂರಿದರು.
ಕ್ರಮದ ಭರವಸೆ: ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ತಾವು ಈಚೆಗೆ ಅಧಿಕಾರ ವಹಿಸಿಕೊಂಡಿದ್ದು ಆ ವರದಿ ತಮ್ಮ ಗಮನಕ್ಕೆ ಬಂದಿಲ್ಲ. ಶೀಘ್ರದಲ್ಲಿಯೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ದೇವದುರ್ಗದ ಮತ್ತೊಬ್ಬ ಜಿಪಂ ಸದಸ್ಯ ಶರಣ ಬಸವ ನಾಯಕ, ತಾಲೂಕಿನಲ್ಲಿ ನಡೆಯುವ ಅನೇಕ ಸರ್ಕಾರಿ ಕಾರ್ಯಕ್ರಮಗಳು, ತಾಪಂ ಸಭೆಗಳು ಸೇರಿದಂತೆ ಎಲ್ಲ ಹಂತದಲ್ಲಿ ಅಧಿಕಾರಿಗಳನ್ನು ಆಯಾ ಭಾಗದ ಜಿಪಂ ಸದಸ್ಯ ರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ. ಜಿಪಂ ನಿಂದ ದೊರೆಯುವ ಅನುದಾನದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯದ ಬಗ್ಗೆ ಮಾಹಿತಿಯನ್ನೂ ನೀಡುತ್ತಿಲ್ಲ. ಇಂಥ ಅಗೌರವಪೂರ್ವಕ ನಡೆವಳಿಕೆಗೆ ಕ್ರಮವಿಲ್ಲವೇ ಎಂದು ಪ್ರಶ್ನಿಸಿದರು.
ಈ ವೇಳೆ ಜಿಪಂ ಸಿಇಒ ಜ್ಞಾನಪ್ರಕಾಶ್ ಮಾತನಾಡಿ, ಎಲ್ಲ ತಾಪಂ ಇಒಗಳಿಗೆ ಜಿಪಂ ಸದಸ್ಯರನ್ನು ಸಭೆಗಳಿಗೆ ಆಹ್ವಾನಿಸುವಂತೆ ಆಗಲೇ ಸೂಚಿಸಲಾಗಿದೆ. ನಿರ್ಲಕ್ಷ್ಯ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದೇಟು ಯಾಕೆ?: ಇದರಿಂದ ಆಕ್ರೋಶಗೊಂಡ ಸರ್ವ ಸದಸ್ಯರು ಜಿಪಂ ಸದಸ್ಯರನ್ನು ಕೇವಲ ದೇವದುರ್ಗವಷ್ಟೇ ಅಲ್ಲ, ಎಲ್ಲ ತಾಲೂಕುಗಳಲ್ಲಿ ತಾಪಂ ಮತ್ತು ಗ್ರಾಪಂ ಸಭೆಗಳಿಗೆ ಕರೆಯದೇ ಕಡೆಗಣಿಸಲಾಗುತ್ತಿದೆ. ಕಳಪೆ ಕಾಮಗಾರಿ ಕೈಗೊಳ್ಳುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಜಿಪಂ ಸಿಇಒ ಹಿಂದೇಟು ಹಾಕುತ್ತಿರುವುದು ಯಾವ ಕಾರಣಕ್ಕೆ ಎಂದು ಸಭೆಗೆ ತಿಳಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ಜ್ಞಾನಪ್ರಕಾಶ್ ಮೌನಕ್ಕೆ ಶರಣಾದರು. ಇದರಿಂದ ತೀವ್ರ ಬೇಸರಗೊಂಡ ಸರ್ವಪಕ್ಷಗಳ ಸದಸ್ಯರು ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿಯೆಡೆಗೆ ಪ್ರಾಮಾಣಿಕ ಕಾಳಜಿ ಬೆಳೆಸಿಕೊಳ್ಳುವುದು ಅವಶ್ಯಕ. ಕಾರ್ಯವೈಖರಿ ಬದಲಾಗದಿದ್ದಲ್ಲಿ ಜಿಪಂ ಸಭೆಗಳನ್ನು ಕರೆಯುವುದು ವ್ಯರ್ಥ ಎಂದು ಆರೋಪಿಸಿ ಸಭೆಯಿಂದ ಎಲ್ಲ ಸದಸ್ಯರು ಹೊರನಡೆದರು. ಈ ವೇಳೆ ಜಿಪಂ ಅಧ್ಯಕ್ಷೆ ಲಲಿತಮ್ಮ ಮತ್ತು ಸಿಇಒ ಅವರ ಮನವಿಗೂ ಕಿವಿಗೊಡದೇ ಸದಸ್ಯರು ಸಭಾಂಗಣದಿಂದ ಹೊರ ನಡೆದರು.
ವೈದ್ಯರು ತೆರಳಿಲ್ಲ: ಸಭಾತ್ಯಾಗಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಸಿಂಧನೂರು ತಾಲೂಕಿನ ಹಂಪನಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿ ಪ್ರಕರಣಗಳು ವರದಿಯಾಗಿದ್ದರೂ ಗ್ರಾಮಕ್ಕೆ ಆರೋಗ್ಯ ಇಲಾಖೆಯ ವೈದ್ಯರು ತೆರಳಿಲ್ಲ ಎಂದು ತುರ್ವಿಹಾಳ ಜಿಪಂ ಕ್ಷೇತ್ರದ ಸದಸ್ಯೆ ಬಸಮ್ಮ ಕುಂಟೋಜಿ ದೂರಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ನಾಯಕ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದ್ದರಿಂದ ವಾಂತಿಬೇಧಿ ಪ್ರಕರಣಗಳು ವರದಿಯಾಗಿವೆ. ಈಗಾಗಲೇ ವೈದ್ಯರನ್ನು ಗ್ರಾಮಕ್ಕೆ ಕಳಿಸಲಾಗಿದೆ. ಆಸ್ಪತ್ರೆಗೆ ದಾಖಲಾದಂಥ ಜನತೆಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ವಾಂತಿ ಬೇಧಿಯಿಂದ ಗ್ರಾಮದಲ್ಲಿ ಯಾರೂ ಸಾವಿಗೀಡಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಚರ್ಚೆಯಾಗುತ್ತಿಲ್ಲ: ಸದಸ್ಯ ವಿಶ್ವನಾಥ್ ಪಾಟೀಲ್ ಮಾತನಾಡಿ, ಜಿಪಂ ಸಭೆಗಳಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿಲ್ಲ. ಅನಾವಶ್ಯಕವಾಗಿ ಸಮಯ ಹಾಳು ಮಾಡುವ ಕಾರ್ಯ ಎಲ್ಲರೂ ಮಾಡುತ್ತಿದ್ದೇವೆ. ಇಂಥ ಸಭೆಗಳಿಂದ ಜನರಿಗೆ ಪ್ರಯೋಜನವಿಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಮತ್ತೊಬ್ಬ ಸದಸ್ಯ ಗಂಗಣ್ಣ, ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ದೇವದುರ್ಗ ತಾಲೂಕಿನ ವಿಷಯದಲ್ಲಿ ಅಧಿಕಾರಿಗಳು ಪ್ರತಿ ಬಾರಿ ಅಕ್ರಮ ನಡೆದಾಗ ಮೌನವಹಿಸುವುದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತೀವ್ರ ಅಸಮಾಧಾನಗೊಂಡ ಎಲ್ಲ ಸದಸ್ಯರು ಅಧಿಕಾರಿಗಳ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು. ಸಭೆಯಲ್ಲಿ ಅಧ್ಯಕ್ಷೆ ಲಲಿತಮ್ಮ, ಜಿಪಂ ಉಪಕಾರ್ಯದರ್ಶಿ ಎಂಡಿ ಯುಸೂಫ್, ಉಪಾಧ್ಯಕ್ಷ ಕೆ.ಶರಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

